ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲಾಗೇನು ಕೆಲಸ?: ಸಿಎಂ ವಿವರಣೆ ಕೇಳಿದ HDK
ಬೆಂಗಳೂರು, ಜೂನ್ 14: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಶಾಸಕರುಗಳ ಸಭೆಯ ನೇತೃತ್ವ ವಹಿಸಿದ್ದಎಐಸಿಸಿ ಪ್ರಧಾನಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರ ಸಭೆಯಲ್ಲಿ ಸರ್ಕಾರದ ಅಧಿಕಾರಿಗಳಿಗೆ ಭಾವಹಿಸಲು ಅವಕಾಶ ನೀಡಲಾಗಿದೆ. ಇದೀಗ ವಿವಾದಕ್ಕೀಡಾಗಿದ್ದು, ಜೆಡಿಎಸ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕರ ಜೊತೆಗೆ ಮಂಗಳವಾರ ಸಭೆ ನಡೆದಿದೆ. ಇದರಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಕುರಿತ ಫೋಟೋವನ್ನು ಟ್ವೀಟ್ ಮಾಡುವ ಬಿಜೆಪಿ ಸಹ ಟೀಕೆ ಮಾಡಿದೆ. ಇತ್ತ ಜೆಡಿಎಸ್ ಸಹ ಕಾಂಗ್ರೆಸ್ ನಡೆ ಖಂಡಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸರ್ಕಾರದ ಸಭೆ ನಡೆಸಲು ಇವರ್ಯಾರು? ಎಂದು ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿರುವುದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ? ಅಥವಾ ದೆಹಲಿಯ ಜನಪಥ ರಸ್ತೆಯ ನಂಬರ್ 10ರ ಸರ್ಕಾರವೇ?. ಕನ್ನಡಿಗರು 'ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೋ ಇಲ್ಲ ದೆಹಲಿ ಕೈಗೊಂಬೆ ಸರ್ಕಾರಕ್ಕೆ ಮತಹಾಕಿದ್ದಾರೋ ಎಂದು ಅವರು ಕುಟುಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಹೈಕಮಾಂಡ್ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರಿಗೆ ರಾಜ್ಯ ಸರ್ಕಾರದ, ಇಲ್ಲಿನ ಆಡಳಿತದ ಸಭೆಗಳ ನೇತೃತ್ವ ವಹಿಸಲು ಯಾರು ಅನುಮತಿ ನೀಡಿದ್ದಾರೆ? ಎಂದು ಅವರು ಸರಣಿ ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.

ಸಭೆ ಬಗ್ಗೆ ಮುಖ್ಯಮಂತ್ರಿಗಳೇ ವಿವರಿಸಬೇಕು ಎಂದ ಎಚ್‌ಡಿಕೆ
ಸರ್ಕಾರದ ಅಧಿಕೃತ ಸಭೆಗಳನ್ನು ಕರ್ನಾಟಕದಲ್ಲಿ ಹೈಕಮಾಂಡ್ ಕ್ವಾರ್ಟರ್ಸ್ ನ ಕಲಾವಿದರೇ ನಡೆಸುತ್ತಾರೆ. ಅಂತಹ ಕರ್ಮ ಕರ್ನಾಟಕದ್ದಾಗಿದ್ದು, ಆ ದೈನಸಿ ಸ್ಥಿತಿಗೆ ಹಾಕಿರುವ ಸಭೆಯ ಫೋಟೋನೇ ಸಾಕ್ಷಿ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರಿಗೆ ಸರ್ಕಾರಿ ಸಭೆ ನಡೆಸುವ ಜವಾಬ್ದಾರಿ ಮತ್ತು ಅನುಮತಿ ಕೊಟ್ಟವರು ಯಾರು?. ಈ ಕುರಿತು ವಿವರಣೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಸಭೆಯಲ್ಲಿ ಸರ್ಕಾರದ ಹಿರಿಯ ಸಚಿವರೂ ಇದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳೂ ಇದ್ದಾರೆ. ಅಧಿಕೃತ ಸಭೆಯಲ್ಲಿ ಸೆಂಟರ್ ಸೀಟಿನಲ್ಲಿ ಸುರ್ಜೇವಾಲಾ ಇದ್ದಾರೆ. ಮಂತ್ರಿಗಳಿಗೆ ಪಕ್ಕದ ಸೀಟಿನಲ್ಲಿ ಆಸೀನರಾಗಿದ್ದಾರೆ, ಇದೇನು ವಿಚಿತ್ರ? ಮಾನ್ಯ ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು
ಇತ್ತ ಬಿಜೆಪಿಯು ಕಾಂಗ್ರೆಸ್ ಮತ್ತು ರಣದೀಪ್ ಸುರ್ಜೇವಾಲ ವಿರುದ್ಧ ಕಿಡಿ ಕಾರಿದೆ. ಸಭೆಯ ಫೋಟೊ ಟ್ವೀಟ್ ಮಾಡಿರುವ ಬಿಜೆಪಿ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಎಟಿಎಂ ಸರ್ಕಾರದ ಗೌಪ್ಯ ಸಭೆ ರಹಸ್ಯವೇನು? ಎಂದು ಖಾರವಾಗಿ ಪ್ರಶ್ನಿಸಿದೆ.
ರಾಜ್ಯ ಸರ್ಕಾರದೊಟ್ಟಿಗಾಗಲು, ಬಿಬಿಎಂಪಿ ಜೊತೆಗಾಗಲಿ ಸಂಬಂಧವಿರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಏನು ಸಂಬಂಧ ಎಂದು ಬಿಜೆಪಿ ಗುಡುಗಿದೆ.
ಕಾಂಗ್ರೆಸ್‌ನ ಈ ಸಭೆ ಕುರಿತು ಇಂದು ಬುಧವಾರ ಬಿಜೆಪಿ ಮುಖಂಡ ನಿಯೋಗವು ಕಾಂಗ್ರೆಸ್ ವಿರುದ್ಧ ರಾಜ್ಯಪಾಲ ಥಾವರ್‌ಚೆಂದ್ ಗೆಹ್ಲೋಟ್ ಅವರಿಗೆ ದೂರು ನೀಡಲು ಮುಂದಾಗಿದೆ.












Click it and Unblock the Notifications