ಜಯನಗರದ ಅಭ್ಯರ್ಥಿ ಘೋಷಣೆ : ಬಿಜೆಪಿಯಲ್ಲಿ ಅಸಮಾಧಾನ!
ಬೆಂಗಳೂರು, ಮೇ 22 : ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ. ಜೂನ್ 11ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟವಾಗಲಿದೆ.
ಮಂಗಳವಾರ ಬಿಜೆಪಿ ಬಿ.ಎನ್.ಪ್ರಹ್ಲಾದ್ ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಈ ಘೋಷಣೆ ಬಳಿಕ ಬಿಜೆಪಿಯ ಬಿಬಿಎಂಪಿ ಕಾರ್ಪೊರೇಟರ್‌ಗಳು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಮಾಜಿ ಮೇಯರ್ ಎನ್.ನಾಗರಾಜ್ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ಕೆಲವೇ ಹೊತ್ತಿನಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಜಯನಗರದ 6 ಕಾರ್ಪೊರೇಟರ್‌ಗಳು ಈ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಪೋಸ್ಟ್ ಹಾಕಿದ್ದ ಅವರು ಸೌಮ್ಯ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಕೆಲವು ಹೊತ್ತಿನಲ್ಲಿಯೇ ಈ ಪೋಸ್ಟ್ ಡಿಲೀಟ್ಟ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯ ಕುಮಾರ್ ಅವರ ನಿಧನದಿಂದಾಗಿ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಜೂನ್ 11ರಂದು ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕ್ಷೇತ್ರದ 6ಕಾರ್ಪೊರೇಟರ್‌ಗಳಲ್ಲಿ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಎಲ್ಲರೂ ಒತ್ತಾಯಿಸಿದ್ದರು. ಆದರೆ, ಇಂದು ಬಿ.ಎನ್.ವಿಜಯ ಕುಮಾರ್ ಅವರ ಸಹೋದರ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿತ್ತು.
ಜಯನಗರದಲ್ಲಿ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ. ಕಾಳೇಗೌಡ ಅವರು ಜೆಡಿಎಸ್ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಅವರು ಕಣದಲ್ಲಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಇಬ್ಬರೂ ಸೇರಿ ಚುನಾವಣೆ ಎದುರಿಸಿದರೆ, ಬಿಜೆಪಿ ಅಭ್ಯರ್ಥಿ ಗೆಲುವು ಕಷ್ಟವಾಗುವ ಸಾಧ್ಯತೆ ಇದೆ.












Click it and Unblock the Notifications