BBMP: ದೀಪಾವಳಿ ಸಂದರ್ಭದಲ್ಲಿ ಜಯನಗರ ಬೀದಿ ವ್ಯಾಪಾರಿಗಳಿಗೆ ಎದುರಾಯ್ತು ಅತಂತ್ರ ಸ್ಥಿತಿ
ಬೆಂಗಳೂರು, ನವೆಂಬರ್ 07: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೈಗೊಂಡ ನಿರ್ಧಾರದಿಂದ ದೀಪಾವಳಿ ಹಬ್ಬದ ಭರ್ಜರಿ ವ್ಯಾಪಾರ ವಹೀವಾಟಿನ ನಿರೀಕ್ಷೆಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಅಂತಂತ್ರ ಸ್ಥಿತಿ ಎದುರಾಗಿದೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಸಂಬಂಧ ಉತ್ತಮ ವ್ಯಾಪಾರ ಮಾಡಲು ಸಜ್ಜಾಗಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್ ನೀಡಿದೆ. ಕಾರಣ ಜಯನಗರದ ಬಿಡಿಎ ವಾಣಿಜ್ಯ ಸಂಕೀರ್ಣ ಬಳಿ ಒತ್ತುವರಿದಾರರ ತೆರವಿಗೆ ಬಿಬಿಎಂಪಿ ಮುಂದಾಗಿದೆ. ಬೆಳಂಬೆಳ್ಳಗ್ಗೆಯೇ ತೆರವಿಗೆ ಬಂದ ಬಿಬಿಎಂಪಿ ಈ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ, ಕ್ರಮಗಳನ್ನು ಕೈಗೊಂಡಿಲ್ಲ ಎನ್ನಲಾಗಿದೆ.

ಕಳೆದ ವಾರವಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸ್ಥಳ ಪರಿಶೀಲಿಸಿದ್ದರು. ಶೀಘ್ರವೇ ಪೊಲೀಸರ ಜತೆಗೂಡಿ ಸಂಕೀರ್ಣದ ಸುತ್ತಲಿನ ಪಾದಾಚಾರಿ ಮಾರ್ಗಗಳಲ್ಲಿ ಆಗಿರುವ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದರು.
ಜಯನಗರದ ಒತ್ತುವರಿಗೆ ಸ್ಥಳಕ್ಕೆ ಮಾರ್ಷಲ್‌ಗಳ ತಂಡ ಭೇಟಿ
ಅದರಂತೆ ಸೋಮವಾರ ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಮಾರ್ಷಲ್‌ಗಳ ತಂಡ ಜಯನಗರದ ಬೀದಿ ಬದಿ ವ್ಯಾಪಾರಿಗಳ ಸ್ಥಳಕ್ಕೆ ಆಗಮಿಸಿತು. ಬೀದಿ ಬದಿ ವ್ಯಾಪಾರಿಗಳು ಫುಟ್‌ಪಾತ್‌ನಿಂದ ತೆರಳಬೇಕು ಮತ್ತು ಅವರೇ ಜಾಗ ಖಾಲಿ ಮಾಡಲು ಕೊನೆಯ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದು ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ.
ಇಲ್ಲಿನ ವ್ಯಾಪಾರಿಗಳು ಕಳೆದ ಸುಮಾರು 10 ವರ್ಷಗಳಿಂದ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುತ್ತಿದ್ದಾರೆ. ಸದ್ಯ ಅವರನ್ನು ತೆರವುಗೊಳಿಸಿದರೆ ಭವಿಷ್ಯ, ಜೀವನದ ದಾರಿ ಕಿತ್ತುಕೊಂಡಂತಾಗುತ್ತದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಯನಗರಕ್ಕೆ ಸಂಕೀರ್ಣಕ್ಕೆ ಮಾತ್ರವಲ್ಲದೆ ಬೀದಿ ಬದಿಯ ಮಳಿಗೆ, ಪಾದಾಚಾರಿ ಮಾರ್ಗದಲ್ಲಿ ಮಾರಾಟವಾಗುವ ಬಟ್ಟೆ, ತಿನಿಸು ಇನ್ನಿತರ ವಸ್ತುಗಳ ಖರೀದಿಗೂ ಜನ ಬರುತ್ತಾರೆ. ಜನರು ನಮ್ಮ ಸರಕುಗಳು ಜನರಿಗೆ ಇಷ್ಟವಾಗಿವೆ. ಪ್ರತಿದಿನ ಉತ್ತಮ ವ್ಯಾಪಾರ ವಹೀವಾಟು ನಡೆಯುತ್ತದೆ.
ದೀಪಾವಳಿ: ಭರ್ಜರಿ ವಹೀವಾಟು ನಿರೀಕ್ಷೆ
ಈಗ ದೀಪಾವಳಿ ಹಬ್ಬದ ಸೀಸನ್ ಆರಂಭವಾಗುವ ಸಮಯ. ಈ ವೇಳೆ ಹೆಚ್ಚು ಜನ ಬರುವ ನಿರೀಕ್ಷೆ ಇದೆ. ಹೀಗಿರುವಾಗ ಬಿಬಿಎಂಪಿಯು ಇದ್ದಕ್ಕಿದ್ದಂತೆ ನಮ್ಮನ್ನು ತೆರವು ಮಾಡಿದೆ ನಾವು ಎಲ್ಲಿಗೆ ಹೋಗಬೇಕು. ಮುಂದೆ ನಮ್ಮ ಬದುಕು ನಡೆಯುವುದಾದರೂ ಹೇಗೆ ಎಂದು ಎರಡು ದಶಕದಿಂದ ಸೀರೆ ವ್ಯಾಪಾರ ಮಾಡುವ ವ್ಯಾಪಾರಿಯೊಬ್ಬರು ತಿಳಿಸಿದರು.
ವರ್ಷಗಳಿಂದಲೂ ಇಲ್ಲಿ ವ್ಯಾಪಾರ ಮಾಡುತ್ತಾ ಬಂದ ನಮಗೆ ತೊಂದರೆ ಕೊಡಬಾರದು. ಒತ್ತುವರಿ ಹೆಸರಿನಲ್ಲಿ ನಮ್ಮನ್ನು ಇಲ್ಲಿಂದ ಓಡಿಸಿದರೆ ಎಲ್ಲಿಗೆ ಹೋಗುವುದು. ಬೇರೆಡೆ ವ್ಯಾಪಾರಕ್ಕೆ ಬಿಬಿಎಂಪಿ ಸ್ಥಳ ಕಲ್ಪಿಸಿಲ್ಲ. ಹೀಗಾಗಿ ನಾವು ಈ ಸ್ಥಳದಿಂದ ಕದಲುವುದಿಲ್ಲ ಎಂದು ಕೆಲವು ವ್ಯಾಪಾರಿಗಳು ಪಟ್ಟು ಹಿದಿದ್ದಾರೆ.
ಒತ್ತುವರಿಯಿಂದ ಸಾರ್ವಜನಿಕರಿಗೆ ತೊಂದರೆ
ಜಯನಗರದಲ್ಲಿನ ಒತ್ತುವರಿ ತೆರವು ಕುರಿತು ಮಾತನಾಡಿರುವ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಈ ಬೀದಿಬದಿ ವ್ಯಾಪಾರಿಗಳು ಇಲ್ಲಿನ ರಸ್ತೆಯ ಬಹುಪಾಲು ಭಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಒತ್ತುವರಿದಾರರ ತೆರವು ಮಾಡಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಇಲ್ಲಿನ ಒತ್ತುವರಿ ವ್ಯಾಪಾರಿಗಳಿಗೆ ಈ ಹಿಂದೆ ನೋಟಿಸ್ ನೀಡಿ ಜಾಗ ತೆರವು ಮಾಡುವಂತೆ ಸೂಚಿಸಿದ್ದೇವೆ. ಹಲವು ನೋಟಿಸ್ ಜಾರಿ ಮಾಡಿದ್ದೇವೆ. ಈ ಬಾರಿ ನಾವು ಅತಿಕ್ರಮಣ ಸ್ಥಳಗಳನ್ನು ತೆರವು ಮಾಡಲು ನಿರ್ಧರಿಸಿದ್ದೇವೆ. ಈ ಸಂಬಂಧ ಕಾರ್ಯಪಡೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.












Click it and Unblock the Notifications