ಬೆಂಗಳೂರಿನ ಈ ಭಾಗಗಳಲ್ಲಿ ಜಪಾನ್ ತಂತ್ರಜ್ಞಾನದ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆ, ಇವುಗಳ ವಿಶೇಷತೆ ಏನು?
ಬೆಂಗಳೂರು, ಫೆಬ್ರವರಿ, 13: ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಸಂಚಾರ ಸಂಚರ ದಟ್ಟಣೆಯೂ ಆಗುತ್ತಿದೆ. ಈ ಹಿನ್ನೆಲೆ ನಗರದಲ್ಲಿ ಸಂಚಾರ ನಿಯಮದಲ್ಲಿ ಹೊಸ ಹೊಸ ಬದಲಾವಣೆಗಳು ಆಗುತ್ತಿವೆ. ಇನ್ನು ಇದೀಗ ಹಲಸೂರು ಬಳಿಯ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಜಪಾನೀಸ್ ತಂತ್ರಜ್ಞಾನ ಆಧರಿಸಿದ ಹೊಸ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹಾಗಾದರೆ ಇದರ ಕಾರ್ಯಾನಿರ್ವಹಣೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
ಇದು ದಟ್ಟಣೆ ನಿಯಂತ್ರಿಸಲು ಸಹಾಯವಾಗುತ್ತಿದೆ. ಎಲ್ಲಾ ಜಂಕ್ಷನ್‌ನಲ್ಲಿರುವ ವಾಹನಗಳ ದಟ್ಟಣೆ ಆಧಾರದ ಮೇಲೆ ಸಿಗ್ನಲ್ ಸಮಯವನ್ನು ಉತ್ತಮವಾಗಿ ನಿಭಾಯಿಸುವ ಮೂಲಕ ಸಂಚಾರ ನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಈ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ವಿವಿಧ ಕಾರಣಗಳಿಂದಾಗಿ ಸ್ವಲ್ಪ ವಿಳಂಬ ಆಗಿತ್ತು. ಇದೀಗ ಎಂಜಿ ರಸ್ತೆ, ಹೊಸೂರು ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿರುವ 28 ಪ್ರಮುಖ ಜಂಕ್ಷನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹೊಸ ವ್ಯವಸ್ಥೆ ಪ್ರತಿ ಜಂಕ್ಷನ್‌ನಲ್ಲಿರುವ ವಾಹನಗಳ ದಟ್ಟಣೆಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಸಿಗ್ನಲ್‌ಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
ಪ್ರಸ್ತುತ ಕೆನ್ಸಿಂಗ್‌ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್‌ಗಳಲ್ಲಿ ಆರಂಭಿಕ ಪರೀಕ್ಷಾ ಉದ್ದೇಶಗಳಿಗಾಗಿ ತಾತ್ಕಾಲಿಕವಾಗಿ ಜಪಾನೀಸ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಅಧಿಕೃತ ಪರೀಕ್ಷಾ ಹಂತದ ಕಾರ್ಯಾಚರಣೆ ಆರಂಭ ಆಗಲಿದೆ. ಮಾರ್ಚ್ ವೇಳೆಗೆ ನಗರದ ಪ್ರಮುಖ ಪ್ರದೇಶಗಳ ಜಂಕ್ಷನ್‌ಗಳಲ್ಲಿ ಹೊಸ ತಂತ್ರಜ್ಞಾನದ ಸಿಗ್ನಲ್ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಯೋಜನೆಯ ಮೇಲ್ವಿಚಾರಣೆ ವಹಿಸಿರುವ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ದೀಪಾ ಚೋಳನ್ ತಿಳಿಸಿದ್ದಾರೆ.
72 ಕೋಟಿ ರೂಪಾಯಿಗಳ ಈ ಸಿಗ್ನಲಿಂಗ್ ಯೋಜನೆಯನ್ನು ಜಪಾನ್‌ನ ನಗೋಯಾ ಎಲೆಕ್ಟ್ರಿಕ್ ವರ್ಕ್ಸ್ ಕಂಪನಿ ಲಿಮಿಟೆಡ್ ಅಳವಡಿಕೆ ಮಾಡುತ್ತಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಇತರ ಕೆಲವು ಕಾರಣಗಳಿಂದಾಗಿ ಯೋಜನೆ ವಿಳಂಬ ಆಗಿತ್ತು. ಈ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ (ATSCS) ಸ್ವಯಂಚಾಲಿತ ಟ್ರಾಫಿಕ್ ಕೌಂಟರ್‌ಗಳನ್ನು ಒಳಗೊಂಡಿದೆ. ಸಿಗ್ನಲ್ ಟೈಮಿಂಗ್‌ನ ರಿಯಲ್ ಟೈಮ್ ಆಪ್ಟಿಮೈಸೇಶನ್‌ಗಾಗಿ ಜಪಾನ್ ತಂತ್ರಜ್ಞಾನ ಮೋಡರೇಟೊವನ್ನು ಬಳಕೆ ಮಾಡಲಾಗುತ್ತದೆ.
ಈ ವ್ಯವಸ್ಥೆಯು ಜಂಕ್ಷನ್‌ಗಳಲ್ಲಿನ ವಿಳಂಬವನ್ನು ಶೇಕಡಾ 13ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ಪ್ರಮುಖವಾಗಿ ಟ್ರಾಫಿಕ್ ಜಾಮ್ ಉಂಟಾಗುವ ಪ್ರದೇಶಗಳು, ಪ್ರಾಥಮಿಕವಾಗಿ ಹೊರ ವರ್ತುಲ ರಸ್ತೆ ಮತ್ತು ಹೊರವಲಯದಲ್ಲಿವೆ. ಈ ಪ್ರದೇಶಗಳು ಗಮನಾರ್ಹವಾದ ಸಂಚಾರ ದಟ್ಟಣೆಯಿಂದ ಕೂಡಿರುತ್ತವೆ. ಆದ್ದರಿಂದ ಈ ಆಧುನಿಕ ತಂತ್ರಜ್ಞಾನವು ಟ್ರಾಫಿಕ್ ಜಾಮ್ ತಡೆಯುವ ನಿಟ್ಟಿನಲ್ಲಿ ಬಹಳ ಅನಿವಾರ್ಯವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಈ ಅತ್ಯಾದುನಿಕ ತಂತ್ರಜ್ಞಾನವು ಟ್ರಾಫಿಕ್ ಜಾಮ್ ತಡೆಯುವುದಲ್ಲದೆ, ಪದಚಾರಿಗಳಿಗೂ ಕೂಡ ರಸ್ತೆ ದಾಟಲು ಅನುವು ಮಾಡಿಕೊಂಡುತ್ತದೆ.












Click it and Unblock the Notifications