ಶೆಟ್ಟರ್ ವಿರುದ್ಧ 63 ಕೋಟಿ ಭೂ ಹಗರಣದ ಆರೋಪ

ಬೆಂಗಳೂರು, ಸೆ.16 : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೊರಳಿಗೆ ಮತ್ತೊಂದು ಭೂ ಹಗರಣ ಸುತ್ತಿಕೊಂಡಿದೆ. ಚಿತ್ರದುರ್ಗದ ಮುರುಘಾಮಠಕ್ಕೆ ಸೇರಿದ ಭೂಮಿ ಖರೀದಿಯಲ್ಲಿ 63 ಕೋಟಿ ರೂ. ಮೊತ್ತದ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸೋಮವಾರ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ಟಿ.ಜೆ.ಅಬ್ರಾಹಂ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಗಾಂಧಿನಗರದಲ್ಲಿದ್ದ ಚಿತ್ರದುರ್ಗ ಮುರುಘಾಮಠಕ್ಕೆ ಸೇರಿದ ಭೂಮಿ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ. ಕೆಐಎಡಿಬಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದ ಜೋಡಿ ರಸ್ತೆಯಲ್ಲಿರುವ ವಿದ್ಯಾಪೀಠದ 28,500 ಚದರಡಿ ಜಾಗವನ್ನು ಶೆಟ್ಟರ್ ಸಿಎಂ ಆಗಿದ್ದಾಗ ರಾಜ್ಯ ಸರ್ಕಾರ ಖರೀದಿ ಮಾಡಿದೆ ಎಂದರು.

Jagadish Shettar

63.55 ಕೋಟಿ ರೂ. ನೀಡಿ ಈ ಭೂಮಿ ಖರೀದಿ ಮಾಡುವ ಕುರಿತು 2012ರ ರ ಸೆ.6 ರಂದು ಕಾನೂನು ಸಲಹೆ ಪಡೆಯದೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಸಭೆಯ ನಂತರ ಕಾನೂನು ಸಲಹೆ ಕೇಳಲಾಗಿದ್ದು, ಆಗ ಭೂಮಿ ಖರೀದಿ ಬದಲಿಗೆ ಅದನ್ನು ವಶಕ್ಕೆ ಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗೆ ಮಾಡುವುದರಿಂದ ಮುದ್ರಣ ಶುಲ್ಕ, ನೋಂದಣಿ ಶುಲ್ಕವೂ ಉಳಿತಾಯವಾಗುತ್ತದೆ ಎಂಬ ಸಲಹೆ ಬಂದಿತ್ತು. [ಶೆಟ್ಟರ್ ಕೊರಳಿಗೆ ಸುತ್ತಿಕೊಂಡ ಭೂ ಹಗರಣ]

ಆದರೆ, ರಾಜ್ಯ ಸರ್ಕಾರ ಕಾನೂನು ಇಲಾಖೆಯ ಸಲಹೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ಅ.22ರಂದು ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳ ಹೆಸರಿನಲ್ಲಿ 29.19 ಕೋಟಿ ರೂ. ಡಿ.ಡಿ. ನೀಡುತ್ತದೆ. ತರಾತುರಿಯಲ್ಲಿ ಶೆಟ್ಟರ್ ಈ ಭೂಮಿಯನ್ನು ಖರೀದಿ ಮಾಡಿ, ಮಠಕ್ಕೆ ಉಪಯೋಗ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಈ ಅಕ್ರಮದ ಕುರಿತು ತನಿಖೆ ನಡೆಸಬೇಕು ಎಂದು ಅಬ್ರಾಹಂ ಆಗ್ರಹಿಸಿದರು. [ಚಿತ್ರದುರ್ಗದಲ್ಲಿ 156 ಅಡಿ ಎತ್ತರದ ಬಸವಣ್ಣನ ಪ್ರತಿಮೆ]

ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ : ಈ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಕಾವತಿ ಭೂ ಹಗರಣ ಬಯಲಿಗೆ ಬಂದಿದ್ದರಿಂದ ಅದನ್ನು ಮುಚ್ಚಿ ಹಾಕಲು ಇಂತಹ ಆರೋಪ ಮಾಡಿಸುತ್ತಿದ್ದಾರೆ. ಕೆಐಎಡಿಬಿ ಕೈಗೊಂಡ ನಿರ್ಣಯದಂತೆ ಹಾಗೂ ಅಂದಿನ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಶಿಫಾರಸಿನಂತೆ ಕಾನೂನು ಪರಿಮಿತಿಯಲ್ಲೇ ಭೂ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಹೇಳಿಕೆಗೆ ಪ್ರತಿಕ್ರಿಯೆ ನೀಡೋಲ್ಲ : ಜಗದೀಶ್ ಶೆಟ್ಟರ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶೆಟ್ಟರ್ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರಿಗೆ ಸುಳ್ಳು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿ ಎಂದರೆ ಸುಳ್ಳಿನ ಪಕ್ಷ. ಅವರ ಸುಳ್ಳು ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಭೂ ಹಗರಣ : ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ಶ್ರೀಗಂಧದಕಾವಲ್‌ನಲ್ಲಿನ ನಾಲ್ಕು ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಜಗದೀಶ್ ಶೆಟ್ಟರ್ ಅವರ ವಿರುದ್ಧ ಬಿಎಂಟಿಎಫ್ ಎಫ್‌ಐಆರ್ ದಾಖಲು ಮಾಡಿಕೊಂಡಿದೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎ.ಪ್ರಸಾದ್ ಅವರು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್)ಗೆ ಈ ಕುರಿತು ದೂರು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+