ಬೆಂಗಳೂರಿನ 75 ಎಕರೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ!
ಬೆಂಗಳೂರಿನ ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗ್ರೇಟರ್ ಬೆಂಗಳೂರು ಆಡಳಿತ ಬದಲಾದ ಮೇಲೆ ಬೆಂಗಳೂರಿನ ವಿವಿಧ ಭಾಗದಲ್ಲಿ ಆಸ್ತಿಗೆ ಬಂಗಾರದ ಬೆಲೆ ಬಂದಿದೆ. ಇದೀಗ ಬೆಂಗಳೂರಿನ ವಿವಿಧ ಭಾಗದಲ್ಲಿ ಹೊಸ ಹೊಸ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ವಿವಿಧ ಭಾಗದಲ್ಲಿ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಭೂಮಿಗೆ / ಆಸ್ತಿಗೆ ಒಳ್ಳೆಯ ಬೆಲೆ ಬಂದಿದೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಬೆಂಗಳೂರಿನ ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗ್ರೇಟರ್ ಬೆಂಗಳೂರು ಆಡಳಿತಕ್ಕೆ ಬದಲಾಗಿದೆ. ಇದರೊಂದಿಗೆ ಇದೀಗ ಬೆಂಗಳೂರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಬೆಂಗಳೂರು ಸೂರ್ಯನಗರ -4 ನೇ ಹಂತದ ಬಡಾವಣೆಯ ಸಮಗ್ರ ಅಭಿವೃದ್ಧಿ ಯೋಜನೆಯಡಿ 75 ಎಕರೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣ 2350 ಕೋಟಿ ರೂ. ಯೋಜನಾ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಸಂಪುಟ ಸಭೆಯ ನಂತರ ಈ ಕುರಿತು ಮಾತನಾಡಿದ ಅವರು, ಇದೊಂದು ಮಹತ್ವದ ಯೋಜನೆ ಆಗಿದೆ. 80 ಸಾವಿರ ಆಸನಗಳ ವ್ಯವಸ್ಥೆಯ ಕ್ರಿಕೆಟ್ ಕ್ರೀಡಾಂಗಣ, 24 ವಿವಿಧ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆ ಹಾಗೂ 3000 ಆಸನಗಳ ಸಮಾವೇಶ ಸಭಾಂಗಣ ಸೇರಿ ವಿಶ್ವ ದರ್ಜೆಯ ಸೌಲಭ್ಯ ಇಲ್ಲಿ ಇರಲಿದ್ದು, ದೇಶದ ಅತಿ ದೊಡ್ಡ ಕ್ರೀಡಾಂಗಣ ಸಾಲಿಗೆ ಸೇರಲಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆ ಸಂಬಂಧ ಆಗಸ್ಟ್ 8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವನೆ ತಯಾರಿಸಿ ಸಚಿವ ಸಂಪುಟ ಸಭೆಗೆ ಮಂಡಿಸಲು ಸೂಚಿಸಲಾಗಿತ್ತು. ಅದರಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯ ಪ್ರಸ್ತಾವನೆಯನ್ನು ಮಂಡಿಸಲಾಗಿ ಸಚಿವ ಸಂಪುಟದ ಸಭೆಯಲ್ಲಿ ತಾತ್ವಿಕ ಅನುಮೋದನೆ ದೊರೆತಿದೆ ಎಂದು ಹೇಳಿದ್ದಾರೆ.
ಭೂಮಿಗೆ ಬಂಗಾರದ ಬೆಲೆ ನಿರೀಕ್ಷೆ: ಇನ್ನು ಬೆಂಗಳೂರಿಗೆ ಈ ಬೃಹತ್ ಯೋಜನೆ ಬರುತ್ತಿರುವ ಹಿನ್ನೆಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಇದೆ. ಬೆಂಗಳೂರಿನ ಬೊಮ್ಮಸಂದ್ರದ ಸೂರ್ಯ ನಗರದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಹೇಳಲಾಗಿದ್ದು. ಇದರಿಂದ ಈ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications