"Govt vs Farmer: ಅನ್ನದಾತರ ನಿರ್ಲಕ್ಷಿಸಿ ಕುರ್ಚಿ ಫೈಟ್‌ನಲ್ಲಿ ಮುಳುಗಿದ ಸಿಎಂ-ಡಿಸಿಎಂ''
ಬೆಂಗಳೂರು, ನವೆಂಬರ್ 26: ರಾಜ್ಯ ಕಾಂಗ್ರೆಸ್ ಸರ್ಕಾರವು ತಾನು ಕೊಟ್ಟ ಮಾತಿನಂತೆ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಬೇಕು. ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕಿದ್ದ ಸರ್ಕಾರವು ಇಂದು ರೈತರ ಸಂಕಷ್ಟಗಳನ್ನು ನಿರ್ಲಕ್ಷಿಸಿದೆ. ರೈತರ ಬದುಕು ನಾಶವಾದರೂ ಪರವಾಗಿಲ್ಲ, ನಮ್ಮ ಕುರ್ಚಿ ಭದ್ರವಾಗಿರಲಿ ಎಂಬ ಸಿಎಂ ಸಿದ್ದರಾಮಯ್ಯ ಅವರ ನಡೆ ಖಂಡನೀಯ ಎಂದು ವಿಪಕ್ಷ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ.
ಸರ್ಕಾರದ ಆಡಳಿತ ವೈಖರಿ ವಿರುದ್ಧ ಗುಡುಗಿರುವ ಆರ್.ಅಶೋಕ ಅವರು ಎಕ್ಸ್ ಪೋಸ್ಟ್ ಗಂಭೀರ ವಿಚಾರಗಳನ್ನು ಚರ್ಚಿಸಿದ್ದಾರೆ. ಕುರ್ಚಿ ಕಿತ್ತಾಟದಲ್ಲಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಅನ್ನದಾತರನ್ನು ಸಂಪೂರ್ಣವಾಗಿ ಮರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ನಿಮ್ಮ ಹೃದಯಹೀನ ಸರ್ಕಾರಕ್ಕೆ ಅನ್ನದಾತನ ಬದುಕಿಗಿಂತ ಅಧಿಕಾರವೇ ಮುಖ್ಯವಾಯಿತಾ? ಎಂದು ಪ್ರಶ್ನಿಸಿದರು.

ಮೊದಲು ಕುರ್ಚಿ ಭದ್ರಾಗಬೇಕು..!
ಕರ್ನಾಟಕದ ಇತಿಹಾಸದಲ್ಲಿ ರೈತರ ನೋವಿಗೆ ಸ್ಪಂದಿಸದ ಈ ರೀತಿಯ ಸಂವೇದನಾರಹಿತ ಸರ್ಕಾರ ಕಂಡರಲಿಲ್ಲ. ಕೊಟ್ಟ ಮಾತಿನಂತೆ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡಿ. ರೈತರ ಬದುಕು ನಾಶವಾದರೂ ಪರವಾಗಿಲ್ಲ, ನಮ್ಮ ಕುರ್ಚಿ ಭದ್ರವಾಗಿರಲಿ ಎನ್ನುವ ನಿಮ್ಮ ನಡೆಗೆ ಜನ ಉತ್ತರಿಸುತ್ತಾರೆ.
ಗುರ್ಲಾಪುರದಲ್ಲಿ ಪ್ರತಿಭಟನಾ ನಿರತ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘೋರ ದುರಂತ ಸಂಭವಿಸಿತು. ಆದರೆ, ಈ ಹೃದಯಹೀನ ಸರ್ಕಾರದ ಯಾವ ಮಂತ್ರಿಯೂ ರೈತನ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಘಟನಾ ಬಾರದ ಸಕ್ಕರೆ ಸಚಿವರು ಎಲ್ಲಿದ್ದಾರೆ? ಕೃಷಿ ಸಚಿವರು ಏನು ಮಾಡುತ್ತಿದ್ದಾರೆ? ಜಿಲ್ಲಾ ಉಸ್ತುವಾರಿ ಸಚಿವರುಗಳು ಯಾಕೆ ತಲೆ ಮರೆಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.
ತಮ್ಮದೇ ಸರ್ಕಾರದ ಅಸಡ್ಡೆಯಿಂದಾಗಿ ಜೀವನ್ಮರಣದ ಹೋರಾಟದಲ್ಲಿದ್ದ ರೈತನಿಗೆ ಸಾಂತ್ವನ ಹೇಳುವಷ್ಟು ಕನಿಷ್ಠ ಮಾನವೀಯತೆಯೂ ಇಲ್ಲದ ಮಂತ್ರಿಗಳು ಈ ರಾಜ್ಯಕ್ಕೆ ಬೇಕೇ? ಎಂದರು.
ಖರೀದಿ ಕೇಂದ್ರ ತೆರೆಯಲು ಯಾಕಿಷ್ಟು ತಡ?
ರಾಜ್ಯದ ರೈತರ ಬೇಡಿಕೆಯಂತೆ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಬೇಕಿದೆ. ಆದರೆ ಖರೀದಿ ಕೇಂದ್ರ ಆರಂಭಿಸಲು ನೀವು ಯಾರ ಆದೇಶಕ್ಕಾಗಿ ಕಾಯುತ್ತಿದ್ದೀರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ನಿಮಗೆ ನಿಮ್ಮ ದೆಹಲಿ ಹೈಕಮಾಂಡ್‌ನಿಂದ ಸೂಚನೆ ಬರಬೇಕೇ? ರಾಹುಲ್ ಗಾಂಧಿ ಮತ್ತು ರಣದೀಪ್ ಸುರ್ಜೇವಾಲಾ ಅವರ ಅನುಮತಿ ಪತ್ರ ಬೇಕೇ?. ರಾಜ್ಯದ ರೈತರ ಸಮಸ್ಯೆ ಪರಿಹಾರಕ್ಕೆ ಯಾರ ಒಪ್ಪಿಗೆಗೆ ಕಾಯುತ್ತಿದ್ದೀರಿ. ರೈತರ ಜೀವ ಉಳಿಸಲು ಹೈಕಮಾಂಡ್‌ನ ಆದೇಶ ಬೇಕೆ? ಎಂದು ಅವರು ಕಿಡಿ ಕಾರಿದರು.
30 ವರ್ಷದ ರಾಜಕಾರಣದಲ್ಲಿ ಇಂತಹ ರೈತ ವಿರೋಧಿ, ಸಂವೇದನಾರಹಿತ ಸರ್ಕಾರವನ್ನು ನಾನು ಕಂಡಿಲ್ಲ. ರಾಜ್ಯದಲ್ಲಿ ಬರ ಎದುರಾದರೂ ಸರ್ಕಾರ ಬರ ಪರಿಹಾರ ನೀಡಿಲ್ಲ. ಹೆಚ್ಚುವರಿ ಬೆಂಬಲ ಬೆಲೆ ಕೊಟ್ಟಿಲ್ಲ. ಸಕಾಲಕ್ಕೆ ಖರೀದಿ ಕೇಂದ್ರಗಳ ಆರಂಭಿಸಿಲ್ಲ. ಯಾವುದೇ ನೀರಾವರಿ ಯೋಜನೆ, ಸಂಕಷ್ಟದಲ್ಲಿರುವ ರೈತನಿಗೆ ಸ್ಪಂದನೆ ಇಲ್ಲ. ಇದೆಲ್ಲ ನಡವಳಿಕೆಯೇ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ತರಾಟೆಗೆ ತೆಗೆದುಕೊಂಡರು.
ರೈತರ ಆಕ್ರಂದನವನ್ನು ನಿರ್ಲಕ್ಷಿಸಿ ಕುರ್ಚಿ ಭದ್ರಪಡಿಸಿಕೊಳ್ಳಲು ಹೊರಟಿರುವ ಈ ಸರ್ಕಾರವನ್ನು ಬುಡಮೇಲು ಮಾಡುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.












Click it and Unblock the Notifications