ಬೆಂಗ್ಳೂರಿನ ಸಸ್ಯಕಾಶಿಯಲ್ಲಿ ನಿರ್ಮಾಣವಾಯ್ತು "ಕೀಟ ಕೆಫೆ", ಏನಿದು?, ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
ಬೆಂಗಳೂರು, ಅಕ್ಟೋಬರ್, 15: ಸಾಮಾನ್ಯವಾಗಿ ಮನುಷ್ಯರು, ಪ್ರಾಣಿ-ಪಕ್ಷಿಗಳಿಗೆ ಮನೆ ಇರುವುದನ್ನು ನೋಡಿರುತ್ತೇವೆ. ಆದರೆ ಕೀಟಗಳಿಗೆ ಮನೆ ಮಾಡಿರುವುದನ್ನು ನೋಡಿದ್ದೀರಾ. ಹೌದು ಸಸ್ಯಕಾಶಿ ಅಂತಲೇ ಕರೆಸಿಕೊಳ್ಳುವ ಲಾಲ್‌ಬಾಗ್‌ನಲ್ಲಿ ತೋಟಗಾರಿಕಾ ಇಲಾಖೆಯು ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಹಾಗಾದರೆ ಹೇಗಿದೆ ಈ ಕೀಟಗಳ ಮನೆ? ಹಾಗೂ ಇದರ ವಿಶೇಷತೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ನೋಡುವುದಕ್ಕೆ ಒಂದು ಚಿಕ್ಕ ಮನೆ ತರ ಇದೆ. ಆದರೆ ಮನೆ ಒಳಗಡೆ ಮನುಷ್ಯರು ಇರುವುದಕ್ಕೆ ಆಗುವುದಿಲ್ಲ. ಬದಲಾಗಿ ಇಲ್ಲಿ ಕೀಟಗಳು ವಾಸ ಮಾಡಬಹುದು. ಸಂತಾನೋತ್ಪತ್ತಿ ಮಾಡಲು ಅನುಕೂಲಕರವಾದ ವಾತಾವರಣ ಇದೆ. ಈ ಮನೆಯ ಪ್ರತಿ ವಿಭಾಗದಲ್ಲಿ ಸಣ್ಣ, ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ನಾನಾ ರೀತಿಯ ಸಸ್ಯಗಳ ಕಟ್ಟಿಗೆ ಇತ್ಯಾದಿಗಳನ್ನು ಒಂದಕ್ಕೊಂದು ಅಂಟಿಕೊಂಡಿರುವಂತೆ ಜೋಡಿಸಿ ಭದ್ರಪಡಿಸಲಾಗಿದೆ. ಇಲ್ಲಿ ಎಲ್ಲಾ ಬಗೆಯ ಕೀಟ, ದುಂಬಿಗಳು ನೆಲೆಸಲು ಸಂತಾನೋತ್ಪತ್ತಿ ಹೊಂದಿ ಅವುಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಲಿದೆ.

ಕೀಟ-ದುಂಬಿಗಳಿಗೆ ಸರ್ವ ರೀತಿಯಲ್ಲಿಯೂ ಸಹಾಯಕಾರಿ ಆಗುವಂತೆ ಒಣ ಮರ ಕೊರೆಯುವ ದುಂಬಿ ಪ್ರಬೇಧಗಳಿಗೆ ಬೇಕಾದ ಮರಗಳು ಹಾಗೂ ಮಣ್ಣಿನೊಳಗೆ ಕೊರಕಲು ಮಾಡಿ ಅಲ್ಲಿ ಅಡಗಿಕೊಳ್ಳುವ ಕೀಟಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಪೆಂಟರ್ ಬೀ, ಬಿಂಬಲ್ ಬೀ ಇತ್ಯಾದಿ ಪ್ರಭೇದಗಳಲ್ಲಿ ಪ್ರಮುಖವಾದವುಗಳು. ಗೂಡು ಕಟ್ಟಿ ಜೇನು ಸಂಗ್ರಹಿಸುವ ದುಂಬಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಒಂಟಿ-ದುಂಬಿಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಅವು ಗೂಡು ಕಟ್ಟುವುದರ ಬದಲು ಒಂಟಿಯಾಗಿ ಒಣ ಮರ ಕೊರೆದು ರಂದ್ರ ಮಾಡಿ ಅಲ್ಲೇ ಬದುಕುತ್ತವೆ.
ಪರಿಸರದಲ್ಲಿ ಅಸಂಖ್ಯಾತ ಬಗೆಯ ಕ್ರಿಮಿ, ಕೀಟ, ದುಂಬಿಗಳಿದ್ದು, ನೈಸರ್ಗಿಕ ಆಹಾರ ಸರಪಳಿಯ ಪ್ರಥಮ ಹಂತದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇತ್ತೀಚಿನ ನಗರೀಕರಣದ ದೆಸೆಯಲ್ಲಿ ಪ್ರಕೃತಿ ದತ್ತವಾಗಿದ್ದಂತಹ ಹಸಿರು ತಾಣಗಳು ಮರೆಯಾಗಿದ್ದು, ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಹೀಗಾಗಿ ಸರ್ವರೀತಿಯಲ್ಲಿಯೂ ಕೀಟಗಳಿಗೆ ಪೂರಕವಾಗಬಲ್ಲ ಹೊಸ ಪರಿಕಲ್ಪನೆಯ ಕೀಟ ಕೆಫೆ, ಅಂದರೆ ಎಲೆಗಳ ಮರೆಯಲ್ಲಿ, ಮರಗಳ ರಂಧ್ರ, ಪೊಟರೆಯಲ್ಲಿ ಕೀಟಗಳು ಆಶ್ರಯ ಪಡೆಯಬಹುದಾದ ಹೊಸ ಪರಿಕಲ್ಪನೆಗೆ ನಗರದ ಲಾಲ್‌ಬಾಗ್ ಸಸ್ಯಕಾಶಿಯಲ್ಲಿ ಚಾಲನೆ ನೀಡಲಾಗಿದೆ.
ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ವಿಭಿನ್ನ ಇಂಡಿಯಾ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಈ ಪರಿಕಲ್ಪನೆ ಮೂಡಿಬಂದಿದ್ದು, ಇಂದು ತೋಟಗಾರಿಕಾ ನಿರ್ದೇಶಕರಾದ ಡಿ.ಎಸ್.ರಮೇಶ್ ಅವರು ಉದ್ಘಾಟನೆ ಮಾಡಿದ್ದಾರೆ. ಇನ್ನು ಲಾಲ್‌ಬಾಗ್ ಮಾತ್ರವಲ್ಲದೆ ಕಬ್ಬನ್ ಪಾರ್ಕ್ ಉದ್ಯಾನವನ, ನಂದಿ ಗಿರಿಧಾನ, ಕೃಷ್ಣರಾಜೇಂದ್ರ ಗಿರಿಧಾಮ ಹಾಗೂ ಎಲ್ಲಾ ಸಸ್ಯಶಾಸ್ತ್ರೀಯ ತೋಟಗಳಲ್ಲಿಯೂ ಸಹ ಹೊಸ ಪರಿಕಲ್ಪನೆಯಡಿಯಲ್ಲಿ 50ಕ್ಕೂ ಹೆಚ್ಚು ಕೀಟ ಕೆಫೆಗಳನ್ನ ನಿರ್ಮಿಸಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ.
ಒಟ್ಟಿನಲ್ಲಿ ಪ್ರಕೃತಿಯ ಉಳಿವಿಗೆ ಪೂರಕವಾಗಿರುವ ಕೀಟ ಸಂತತಿಯನ್ನ ಉಳಿಸಿಕೊಳ್ಳಬೇಕಾದ್ದು, ನಮ್ಮೆಲ್ಲರ ಹೊಣೆ. ಇಲ್ಲವಾದಲ್ಲಿ ಆಹಾರ ಸರಪಳಿ ವ್ಯವಸ್ಥೆಯಲ್ಲೇ ಏರುಪೇರಾಗಲಿದೆ. ಹೀಗಾಗಿ ಸರ್ವರೂ ಕೀಟ ಕೆಫೆಗಳನ್ನ ಸ್ಥಾಪಿಸುವ ಮುಖೇನ ಕೀಟ ಸಂರಕ್ಷಣೆಗೆ ಪೂರಕವಾಗಬೇಕೆಂಬುದು ತೋಟಗಾರಿಕೆ ಇಲಾಖೆಯ ಆಶಯ.












Click it and Unblock the Notifications