ಬೆಂಗಳೂರಿನಲ್ಲಿ ರೈತ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಮಸಿ: 3 ಬಂಧನ
ಬೆಂಗಳೂರು ಮೇ 30: ಬೆಂಗಳೂರಿನಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎರಚಿದ ನಂತರ ಘಟನೆಗೆ ಸಂಭವಿಸಿದ ಗಲಾಟೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ "ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ"ಯಲ್ಲಿ ಭಾಗಿಯಾಗಿದ್ದ ರಾಕೇಶ್ ಟಿಕಾಯತ್ ಮತ್ತು ಯುಧ್ವೀರ್ ಸಿಂಗ್ ಮೇಲೆ ಕರ್ನಾಟಕ ರೈತ ಮುಖಂಡ ಕೆ.ಚಂದ್ರಶೇಖರ್ ಬೆಂಬಲಿಗರಿಂದ ಕಪ್ಪು ಬಣ್ಣ ಎರಚಲಾಗಿದೆ ಎಂದು ಆರೋಪಿಸಲಾಗಿದೆ.
ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ದಿಲ್ಲಿಯ ನಾಯಕರಾದ ರಾಕೇಶ್ ಟಿಕಾಯತ್, ಯುದುವೀರ್ ಸಿಂಗ್, ತಮಿಳುನಾಡಿನ ನಲ್ಲಗೌಂಡರ್ ರಾಜ್ಯದ ಪ್ರಮುಖ ರೈತ ಮುಖಂಡರಾದ ಸುರೇಶ್ ಬಾಬು ಪಾಟೀಲ್, ಕೆ.ಟಿ.ಗಂಗಾಧರ್, ಶ್ರೀಮತಿ ಅನುಸೂಯಮ್ಮ, ರಾಜೇಗೌಡ, ಚುಕ್ಕಿ ನಂಜುಂಡಸ್ವಾಮಿ, ಚಿಂತಕರಾದ ಪ್ರೊ ಹಿ.ಶಿ. ರಾಮಚಂದ್ರಗೌಡ, ಪ್ರೊ ರವಿವರ್ಮ ಕುಮಾರ್ ಸೇರಿದಂತೆ ಅನೇಕ ರೈತ ಹೋರಾಟಗಾರರು ಹಾಗೂ ರೈತಪರ ಕಾಳಜಿಯುಳ್ಳ ಮಹನೀಯರು "ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ"ಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕನ ಮುಖಕ್ಕೆ ಮಸಿ ಬಳಿದಿರುವುದು ಕಂಡುಬಂದಿದೆ. ಈ ವೇಳೆ ಸುತ್ತಮುತ್ತಲಿನ ಜನರು ಪರಸ್ಪರ ಕುರ್ಚಿಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ.
Breaking: ರೈತ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಕಪ್ಪು ಮಸಿ
''ಇಲ್ಲಿ ಸ್ಥಳೀಯ ಪೊಲೀಸರು ಯಾವುದೇ ಭದ್ರತೆಯನ್ನು ಒದಗಿಸಿಲ್ಲ. ಸರ್ಕಾರದ ಜೊತೆ ಶಾಮೀಲಾಗಿ ಇದನ್ನು ಮಾಡಲಾಗಿದೆ' ಎಂದು ಶಾಯಿ ದಾಳಿಯ ನಂತರ ಟಿಕಾಯತ್ ಸುದ್ದಿಗಾರರಿಗೆ ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕರ್ನಾಟಕದ ರೈತ ಮುಖಂಡರೊಬ್ಬರು ಹಣ ಕೇಳಿ ಸಿಕ್ಕಿಬಿದ್ದಿರುವ ಕುಟುಕು ಕಾರ್ಯಾಚರಣೆಯ ಬಗ್ಗೆ ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಠಿ ನಡೆಸಲಾಗಿತ್ತು.
ಕಿಸಾನ್ ಏಕತಾ ಮೋರ್ಚಾ ಟಿಕಾಯತ್ ಮೇಲಿನ ಮಸಿ ದಾಳಿಯನ್ನು ಖಂಡಿಸಿದೆ. "ಇಂತಹ ದಾಳಿಗಳು ನಮ್ಮ ಉತ್ಸಾಹವನ್ನು ಮುರಿಯಲು ನಡೆಯುತ್ತಿವೆ. #FarmersProtest ನಲ್ಲಿ ರೈತರ ಗೆಲುವನ್ನು ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ'' ಎಂದು ಏಕತಾ ಮೋರ್ಚಾ ಹೇಳಿದೆ.
ರಾಕೇಶ್ ಟಿಕಾಯತ್ ಅವರು ದೆಹಲಿ ಮತ್ತು ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸಿದ್ದರು. ಇದು ನವೆಂಬರ್ 2020 ರಲ್ಲಿ ಪ್ರಾರಂಭವಾಯಿತು ಮತ್ತು ಕಳೆದ ವರ್ಷ ಡಿಸೆಂಬರ್ ವರೆಗೆ ನಡೆಯಿತು.

ಒಂದು ದಿನದ ಹಿಂದೆ, ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಕಾಕ್ಡಾ ಗ್ರಾಮದಲ್ಲಿ ನಡೆದ ಬೃಹತ್ 'ಕಿಸಾನ್ ಮಜ್ದೂರ್ ಪಂಚಾಯತ್' ಅನ್ನು ಉದ್ದೇಶಿಸಿ ಟಿಕಾಯತ್ ಮಾತನಾಡಿದ್ದರು, ಅಲ್ಲಿ ಅವರು ಹಳ್ಳಿಗಳಿಗೆ ನಿಯಮಿತವಾಗಿ ವಿದ್ಯುತ್ ಸಿಗದಿದ್ದರೆ ನಗರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.
ತನ್ನ ಸಹೋದರ ನರೇಶ್ ಅವರೊಂದಿಗೆ ಪಂಚಾಯತಿಯನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, ರೈತರ ಸಮಸ್ಯೆಗಳ ಬಗ್ಗೆ ಆಳುವ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಹರ್ಯಾಣ ಮತ್ತು ಪಂಜಾಬ್‌ನಿಂದ ಹುಲ್ಲು ಸಾಗಾಟವನ್ನು ಎರಡು ರಾಜ್ಯಗಳ ಗಡಿಯಲ್ಲಿ ತಡೆದರೆ ರೈತರು ತಮ್ಮ ಜಾನುವಾರುಗಳನ್ನು ಪೊಲೀಸ್ ಠಾಣೆಗಳಲ್ಲಿ ಕಟ್ಟಿಹಾಕುವುದಾಗಿ ಸಹೋದರರು ಎಚ್ಚರಿಸಿದ್ದರು.