Industry: ಉತ್ಪಾದನಾ ಘಟಕ ಸ್ಥಾಪನೆಗೆ ಕೇಂದ್ರದ ಪ್ರೋತ್ಸಾಹ ಧನಕ್ಕೆ ಆಕ್ಷೇಪ: HDKಗೆ ಎಂಬಿ ಪಾಟೀಲ್ ಬೆಂಬಲ
ಬೆಂಗಳೂರು, ಜೂನ್ 15: ಕೇಂದ್ರ ಸರ್ಕಾರದಿಂದ ಕೈಗಾರಿಕೆಗಗಳಿಗೆ ಉತ್ತೇಜನ ನೀಡುವ ವಿಚಾರದಲ್ಲಿ ನೂತನ ಭಾರೀ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಎತ್ತಿರುವ ಆಕ್ಷೇಪವನ್ನು ಕರ್ನಾಟಕ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹೌದು, ಗುಜರಾತಿನ ಸಾನಂದ್ ನಲ್ಲಿ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿ ಕಂಪನಿಯು ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಉದ್ದೇಶ ಇದೆ. ಈ ಕಂಪನಿ ಸೃಷ್ಟಿಸುವ ಪ್ರತೀ ಉದ್ಯೋಗಕ್ಕೆ ದೇಶದ ಬೊಕ್ಕಸದಿಂದ 3.20 ಕೋಟಿ ರೂಪಾಯಿಗಳಷ್ಟು ಪ್ರೋತ್ಸಾಹ ಧನ ಕೊಡುತ್ತಿರುವುದು ಸರಿಯಲ್ಲ.

ಈ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದನ್ನು ಬೆಂಬಲಿಸಿ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಶನಿವಾರ ಟ್ವಿಟ್ ಮಾಡಿದ್ದಾರೆ.
ಎಲ್ಲ ರಾಜ್ಯಗಳಿಗೆ ಈ ಸಮಾನ ಸೂತ್ರ ಜಾರಿಯಾಗಲಿ
ಹೀಗೆ ಬೃಹತ್ ಪ್ರಮಾಣದಲ್ಲಿ ಹಣ ನೀಡುವುದು ನೀತಿ ಮುಂದುವರಿಯುವುದಾದರೆ, ದೇಶದ ಎಲ್ಲ ರಾಜ್ಯಗಳಿಗೂ ಇದೇ ರೀತಿಯ ಸಮಾನ ಸೂತ್ರ ಮತ್ತು ಅವಕಾಶ ಸಿಗಬೇಕು ಎಂದು ಸಚಿವ ಎಂ ಬಿ ಪಾಟೀಲ ಒತ್ತಾಯಿಸಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಹೇಳಿದ ಮಾತುಗಳಿಗೆ ಇವರು ಸಹ ಧ್ವನಿಗೂಡಿಸಿದ್ದಾರೆ.

50:20ರಷ್ಟು ಪ್ರೋತ್ಸಾಹ ಧನ
ಮೈಕ್ರಾನ್ ಕಂಪನಿ 2.70 ಬಿಲಿಯನ್ ಡಾಲರ್ ವೆಚ್ಚದಲ್ಲಿ ಗುಜರಾತಿನಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸುತ್ತಿದೆ. ಇದರಿಂದಾಗಿ 5,000 ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಕಂಪನಿ ತಿಳಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದಿಂದ ಶೇಕಡಾ 50 ಮತ್ತು ಗುಜರಾತ್ ಸರ್ಕಾರದಿಂದ ಶೇಕಡ 20ರಷ್ಟು ಪ್ರೋತ್ಸಾಹ ಧನವನ್ನು ಅದು ಪಡೆಯುತ್ತಿದೆ.
ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೊಕ್ಕಸದಿಂದ ಕಂಪನಿಗೆ 2 ಬಿಲಿಯನ್ ಡಾಲರ್ ಸಂದಾಯ ಆಗುತ್ತಿದೆ. ಇದರ ಹಿಂದಿರುವ ತರ್ಕ ಸಮರ್ಥನೀಯವಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದಕ್ಕೆ ಪ್ರತಿಕ್ರಿಯಿಸಿರುವ ಎಂ ಬಿ ಪಾಟೀಲ, 'ಇಷ್ಟೊಂದು ಭಾರೀ ಪ್ರಮಾಣದ ಪ್ರೋತ್ಸಾಹ ಧನವನ್ನು ಸರ್ಕಾರದ ಬೊಕ್ಕಸದಿಂದಲೇ ನೀಡುತ್ತಿದ್ದರೆ ಇದನ್ನು ಸಾರ್ವಜನಿಕ ವಲಯದ ಉದ್ಯಮವೆಂದೇ ಪರಿಗಣಿಸಬಹುದು' ಎಂದೂ ಹೇಳಿದ್ದಾರೆ.
ಗುಜರಾತ್‌ಗೆ ಮಾತ್ರ ಮಾತ್ರ ವಿಶೇಷ ಒಲವು
ಕೈಗಾರಿಕಾ ಬೆಳವಣಿಗೆಗೆ ಸೂಕ್ತವಾದ ಕಾರ್ಯ ಪರಿಸರ ಸೃಷ್ಟಿಸಲು ಈ ರೀತಿಯ ಪ್ರೋತ್ಸಾಹ ಧನ ನೀಡುತ್ತಿದ್ದರೆ ಅದು ಸ್ವಾಗತಾರ್ಹ. ಇದು ವಾಸ್ತವವಾಗಿದ್ದರೆ, ಎಲ್ಲ ರಾಜ್ಯಗಳಿಗೂ ಇಂತಹ ಸಮಾನ ಅವಕಾಶ ಸಿಗಬೇಕು. ಆಗ ಮಾತ್ರ ದೇಶದೆಲ್ಲೆಡೆ ಕೈಗಾರಿಕಾ ಬೆಳವಣಿಗೆ ಕಾಣಬಹುದು.
ಆದರೆ ಕೇಂದ್ರದ ಈಗಿನ ನೀತಿಯು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತಿನ ಬಗ್ಗೆ ಮಾತ್ರ ವಿಶೇಷ ಒಲವನ್ನು ತೋರಿಸುವಂತಿದೆ. ಇದು ತಾರತಮ್ಯ ಮತ್ತು ಅಸಮಾನತೆಗೆ ದಾರಿ ಮಾಡಿಕೊಡಲಿದೆ ಅಷ್ಟೇ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಎಚ್‌ಡಿ ಕುಮಾರಸ್ವಾಮಿ ಅವರು ಭಾರೀ ಕೈಗಾರಿಕೆ ಸಚಿವರಾಗಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಕನ್ನಡಿಗರು ಹಲವು ಮನವಿ ಮಾಡಿದ್ದರು. ಅಲ್ಲದೇ ರಾಜ್ಯ ಸಚಿವರು ಮತ್ತು ಕೇಂದ್ರ ಸಚಿವರು ಸಮನ್ವಯದಿಂದ ಕೈಗಾರಿಕೆ ವಲಯ ಮತ್ತಷ್ಟು ಅಭಿವೃದ್ಧಿಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರು.












Click it and Unblock the Notifications