ಬೆಂಗಳೂರಿನ ಹೆಬ್ಬಾಳದ ಮೇಲ್ಸೇತುವೆಗೆ ಸಂಬಂಧಿಸಿದಂತೆ ಮಹತ್ವದ ಆದೇಶ!
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಹೆಬ್ಬಾಳ ಮೇಲ್ಸೇತುವೆಯ ವಿಮಾನ ನಿಲ್ದಾಣ ಮಾರ್ಗದ ಡೌನ್ ರ‍್ಯಾಂಪ್ ಬಳಿ ಜಲಾವೃತವಾಗದಂತೆ ಕಾಮಗಾರಿ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಆಯುಕ್ತರಾದ ಪೊಮ್ಮಲ ಸುನಿಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಬುಧವಾರ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹೆಬ್ಬಾಳ ಮೇಲ್ಸೇತುವೆ ಡೌನ್ ರ‍್ಯಾಂಪ್ ನಿಂದ ಆಸ್ಟರ್ ಆಸ್ಪತ್ರೆಯವರಿಗೆ ಸರ್ವೀಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯಲ್ಲಿ ಜಲಾವೃತವಾಗದಂತೆ ಕಾಮಗಾರಿ ನಡೆಸಲು ಸೂಚನೆ ನೀಡಿದ್ದಾರೆ.
ಹೆಬ್ಬಾಳ ಮೇಲ್ಸೇತುವೆ ಇಳಿದ ಕೂಡಲೇ ಎಸ್ಟಿಮ್ ಮಾಲ್ ಬಳಿ ತುಂಬಾ ಸಂಚಾರ ದಟ್ಟಣೆ ಆಗುತ್ತಿತ್ತು. ಈ ಸಂಬಂಧ ಎನ್.ಎಚ್.ಎ.ಐ ನಿಂದ ಸರ್ವೀಸ್ ರಸ್ತೆ ಕಾಮಗಾರಿ ನಡೆಸುತ್ತಿದ್ದು, ರಸ್ತೆ ಮೇಲೆ ಬೀಳುವ ಮಳೆ ನೀರು ಹರಿದು ಶೋಲ್ಡರ್ ಡ್ರೈನ್‌ಗಳಿಗೆ ಸರಾಗವಾಗಿ ಹರಿದು ಹೋಗಲು ಗ್ರೇಟಿಂಗ್‌ಗಳನ್ನು ಅಳವಡಿಸಬೇಕು. ಜೊತೆಗೆ ತ್ವರಿತಗತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ದೇಶನ ಕೊಟ್ಟಿದ್ದಾರೆ.

ಬ್ಯಾಚ್ ಮಿಕ್ಸ್ ಪ್ಲಾಂಟ್‌ಗೆ ಭೇಟಿ: ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರಿನಲ್ಲಿ ನಗರ ಪಾಲಿಕೆಯದ್ದೇ ಡಾಂಬರು ಮಿಶ್ರಣ ಘಟಕವಿದ್ದು (ಬ್ಯಾಚ್ ಮಿಕ್ಸ್ ಪ್ಲಾಂಟ್), ಪ್ರತಿ ಗಂಟೆಗೆ 120 ಟನ್ ಡಾಂಬರ್ ಮಿಶ್ರಣ ಸಿದ್ದಪಡಿಸುವ ಸಾಮರ್ಥ್ಯವಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರೆ ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳ ಪ್ರಮುಖ ರಸ್ತೆಯಾದ ಆರ್ಟಿಯಲ್ ಮತ್ತು ಸಬ್ ಆರ್ಟಿಯಲ್ ರಸ್ತೆಗಳಿಗೆ ಇಲ್ಲಿಂದಲೇ ಡಾಂಬರು ವ್ಯವಸ್ಥೆ ಮಾಡಬಹುದಾಗಿದೆ. ಈ ಸಂಬಂಧ ಜಿಬಿಎ ಮುಖ್ಯ ಆಯುಕ್ತರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಉತ್ತರ ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸ್ವಚ್ಛತಾ ಸಿಬ್ಬಂದಿಗೆ ಶೂ ವಿತರಣೆ: ದಾಸರಹಳ್ಳಿ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಸ್ವಚ್ಛತಾ ಸಿಬ್ಬಂದಿಗಳಿಗೆ ಶೂಗಳನ್ನು ವಿತರಣೆ ಮಾಡಲಾಯಿತು. ಸ್ವಚ್ಛತಾ ಕಾರ್ಯದ ವೇಳೆ ಸುರಕ್ಷತಾ ಸಾಮಗ್ರಿಗಳನ್ನು ಬಳಸಿಕೊಂಡು ಸ್ವಚ್ಛತೆ ಮಾಡಲು ಸೂಚನೆ ನೀಡಲಾಯಿತು.
ಇಂದಿರಾ ಕ್ಯಾಂಟೀನ್‌ಗೆ ಭೇಟಿ: ದಾಸರಹಳ್ಳಿಯ ಮಲ್ಲಸಂದ್ರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಸಿಬ್ಬಂದಿಗಳೊಂದಿಗೆ ಮಾತನಾಡಿ, ರಿಜಿಸ್ಟರ್ ಪುಸ್ತಕವನ್ನು ಪರಿಶೀಲಿಸಿದರು. ಆ ಬಳಿಕ ಕ್ಯಾಂಟೀನ್ ನಲ್ಲಿ ನೀಡುವ ಆಹಾರದ ಗುಣಮಟ್ಟ ಕಾಪಾಡಿಕೊಳ್ಳುವಂತೆ ಹಾಗೂ ಕ್ಯಾಂಟೀನ್ ಸುತ್ತಲೂ ಶುಚಿಯಾಗಿಟ್ಟುಕೊಳ್ಳಲು ಸೂಚನೆ ನೀಡಿದರು.
ತೀವ್ರ ಸ್ವಚ್ಛತಾ ಕಾರ್ಯ: ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಸುಬ್ಬಣ್ಣಯ್ಯ ಪಾಳ್ಯ, ಹೆಚ್.ಆರ್.ಬಿ.ಆರ್ ಲೇಔಟ್ ನ 7ನೇ ಮುಖ್ಯರಸ್ತೆ, ಮಾರುತಿ ನಗರ, ಕೋಗಿಲು ಮುಖ್ಯ ರಸ್ತೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯವನ್ನು ನಡೆಸಿ, ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ವಿಲೇವಾರಿ ಮಾಡಲಾಯಿತು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯತರರಾದ ಯಮುನಾ, ರಂಗನಾಥ್, ಕಾರ್ಯಪಾಲಕ ಅಭಿಯಂತರರು, ಎನ್‌ಎಚ್‌ಎಐ, ಬಿಡಿಎ, ಮೆಟ್ರೋ ಹಾಗೂ ಜಲಮಂಡಳಿ ಸೇರಿದಂತೆ ಮತ್ತಿತರರ ಇಲಾಖೆಗಳ ಅಧಿಕಾರಿಗಳು ಇದ್ದರು.












Click it and Unblock the Notifications