ಬೆಂಗಳೂರಿನಲ್ಲಿ "ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ" ಬಿಬಿಎಂಪಿಯಿಂದ ಮಹತ್ವದ ಮಾಹಿತಿ!
ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯದ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹತ್ವದ ಅಪ್ಡೇಟ್ಸ್ ನೀಡಿದೆ. ಇದರೊಂದಿಗೆ ಬಿಬಿಎಂಪಿಯ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಹತ್ವದ ಸೂಚನೆಯನ್ನೂ ನೀಡಿದ್ದಾರೆ.
ನಗರದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಗೆ ಸಂಬಂಧಿಸಿದಂತೆ ಈಚೆಗೆ ವರ್ಚ್ಯುವಲ್ ಸಭೆಯನ್ನು ನಡೆಸಲಾಗಿದೆ. ನಗರಲ್ಲಿ 5ನೇ ಮೇ 2025ರಿಂದ ಸಮೀಕ್ಷಾ ಕಾರ್ಯ ಆರಂಭವಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಅದಕ್ಕೆ ವೇಗ ನೀಡಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ)ಗಳನ್ನು ಗಣತಿದಾರರನ್ನಾಗಿ ನಿಯೋಜಿಸಲಾಗಿದೆ. ಬಿಬಿಎಂಪಿಯ ಎಲ್ಲಾ ವಲಯಗಳ ಹಿರಿಯ ಅಧಿಕಾರಿಗಳಿಗೆ ಆಯಾ ವಲಯದ ಸಮೀಕ್ಷಾ ಕಾರ್ಯವನ್ನು ಖುದ್ದು ಮೇಲ್ವಿಚಾರಣೆ ಮಾಡಲು ಸೂಚಿಸಿದ್ದಾರೆ.
ಪ್ರತ್ಯೇಕ ಸರ್ವರ್ ವ್ಯವಸ್ಥೆ: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 28 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸರ್ವರ್ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಮನ್ವಯ ತಂಡ ರಚನೆ: ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯದ ವೇಳೆ ಏನಾದರು ಸಮಸ್ಯೆಗಳು ಕಂಡುಬಂದಲ್ಲಿ, ಅದನ್ನು ಕೂಡಲೇ ಬಗೆಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಇ-ಆಡಳಿತ (E-Governance) ಜೊತೆಗೆ ಸಮನ್ವಯತೆ ಸಾಧಿಸುವುದಕ್ಕೆ ಸಮನ್ವಯ ತಂಡವನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ತರಬೇತಿ ನೀಡಲು ನಿರ್ದೇಶನ: ನಗರದಲ್ಲಿ ಮೊಬೈಲ್ ತಂತ್ರಾಂಶದ ಮೂಲಕ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಯಾವ ರೀತಿ ಸಮೀಕ್ಷಾ ಕಾರ್ಯ ನಡೆಸಬೇಕು ಎನ್ನುವುದನ್ನು ಹೆಚ್ಚುವರಿಯಾಗಿ ತರಬೇತಿ ನೀಡಿ ತ್ವರಿತವಾಗಿ ಸಮೀಕ್ಷೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಅಗತ್ಯ ದಾಖಲಾತಿಗಳನ್ನು ನೀಡಿ
ಇನ್ನು ಬೆಂಗಳೂರಿನಲ್ಲಿ ಬಿಬಿಎಂಪಿ ಸಿಬ್ಬಂದಿಯು ಮನೆ-ಮನೆಗೆ ಗಣತಿದಾರರು ಭೇಟಿ ನೀಡಿ ಮೊಬೈಲ್ ತಂತ್ರಾಂಶದ ಮೂಲಕ ಸಮೀಕ್ಷಾ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಸಮೀಕ್ಷೆ ವೇಳೆಯಲ್ಲಿ ಈ ಪ್ರಮುಖ ದಾಖಲಾತಿಗಳ ಮಾಹಿತಿಯನ್ನು ನೀಡುವಂತೆ ಮನವಿ ಮಾಡಲಾಗಿದೆ.
* ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿ ದಾಖಲೆಯ ಪ್ರಮಾಣ ಪತ್ರ
* ಶಿಕ್ಷಣ (ವಿದ್ಯಾಭ್ಯಾಸ ದಾಖಲಾತಿಗಳು)
* ವರಮಾನ (ವಾರ್ಷಿಕ ವರಮಾನದ ದಾಖಲಾತಿ)
* ಉದ್ಯೋಗದ ವಿವರ
* ಆಧಾರ್ ಕಾರ್ಡ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ಸೇರಿದಂತೆ ಪ್ರಮುಖ ದಾಖಲೆಗಳ ಮಾಹಿತಿ ನೀಡಬೇಕು.
ಪರಿಶಿಷ್ಟ ಜಾತಿ ಹಾಗೂ ಉಪ ಜಾತಿ ಸಮಗ್ರ ಸಮೀಕ್ಷೆಗೆ ಒಳಪಡುವವರು ಅಥವಾ ಈ ಸಮುದಾಯದವರು ತಮ್ಮ ಆಧಾರ್/ ರೇಷನ್ ಕಾರ್ಡ್ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ ಅವರ ಮತ್ತು ಕುಟುಂಬದವರ ವೈಯಕ್ತಿಕ ವಿವರವನ್ನು ಸಲ್ಲಿಸಬೇಕು. ಕುಟುಂಬದ ಸದಸ್ಯರ ವಿವರ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಸರ್ಕಾರಿ ಸವಲತ್ತುಗಳು ಹಾಗೂ ಮೂಲಸೌಕರ್ಯಗಳು ಸೇರಿ ಸಮಗ್ರ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಬೇಕು ಎಂದು ಹೇಳಲಾಗಿದೆ.
ಇನ್ನು ಈ ಸಂದರ್ಭದಲ್ಲಿ ಪಾಲಿಕೆ ಸಮನ್ವಯ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.












Click it and Unblock the Notifications