ಬೆಂಗಳೂರಿನ ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಲು ಮಹತ್ವದ ನಿರ್ಧಾರ: ಲಾಲ್‌ಬಾಗ್‌ಗೆ 10 ಕೋಟಿ ಡಿಕೆಶಿ!
ಬೆಂಗಳೂರಿನಲ್ಲಿ ರಸ್ತೆಗಳ ಕಾಮಗಾರಿ ಹಾಗೂ ರಸ್ತೆಗಳ ಕಾಮಗಾರಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಗಂಭೀರವಾದ ಆರೋಪಗಳು ಕೇಳಿ ಬರುತ್ತಿದ್ದು, ಇದೀಗ ಕೊನೆಗೂ ಈ ವಿಚಾರದಲ್ಲಿ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಸ್ತೆ ಕಾಮಗಾರಿ ಗುಣಮಟ್ಟವನ್ನು ಖಚಿತ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ಬೆಳಿಗ್ಗೆ 6ಗಂಟೆಗೆ ಬ್ಯಾಟರಾಯನಪುರ ವಿಭಾಗದ ಹಳೆ ವಾರ್ಡ್ ಸಂಖ್ಯೆ 08 ರ ಆಕೃತಿ ಪ್ರಾಸ್ಪೆರಾ ಬಡಾವಣೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು ಅಗತ್ಯ ನಿರ್ದೇಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಯುಕ್ತರು ಸ್ಥಳದಲ್ಲಿದ್ದ ಎಂಜಿನಿಯರರಿಗೆ ರಸ್ತೆ ನಿರ್ಮಾಣದ ವೇಳೆ ಕೆಂಬಾರ್ ನೀಡಿರುವುದನ್ನು ಖಚಿತಪಡಿಸಿಕೊಳ್ಳಲು, ಜೊತೆಗೆ ಜಲಮಂಡಳಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಮ್ಯಾನ್‌ಹೋಲ್‌ಗಳನ್ನು ರಸ್ತೆಯ ಮಟ್ಟಕ್ಕೆ ಎತ್ತರಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಅದೇ ರೀತಿ ಕಾಂಕ್ರೀಟ್ ಚರಂಡಿಗಳಲ್ಲಿ ನಿಯಮಿತವಾಗಿ ಡಿಸಿಲ್ಟಿಂಗ್ ಕಾರ್ಯಗಳನ್ನು ನಡೆಸಿ, ನೀರಿನ ಹರಿವು ಸುಗಮವಾಗುವಂತೆ ನೋಡಿಕೊಳ್ಳಲು ಹಾಗೂ ರಸ್ತೆಯ ಗುಣಮಟ್ಟವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ನಿರ್ದೇಶನ ಕೊಟ್ಟಿದ್ದಾರೆ. ಪರಿಶೀಲನೆ ವೇಳೆ ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಎಂಜಿನಿಯರರಾದ ರಂಗನಾಥ್, ಸಂಬಂಧಿಸಿದ ಕಾರ್ಯಪಾಲಕ ಎಂಜಿನಿಯರರು, ಸಹಾಯಕ ಕಾರ್ಯಪಾಲಕ ಎಂಜಿನಿಯರರು ಹಾಗೂ ಇನ್ನಿತರೆ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
ಲಾಲ್‌ಬಾಗ್ ಅಭಿವೃದ್ಧಿಗೆ 10 ಕೋಟಿ ರೂಪಾಯಿ: ಇನ್ನು ಬೆಂಗಳೂರಿನ ಟನಲ್ ಯೋಜನೆ / ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ಧಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರಿನ ಲಾಲ್‌ಬಾಗ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಬೆಂಗಳೂರು ನಗರದ ಲಾಲ್‌ಬಾಗ್ ಅಭಿವೃದ್ಧಿಗೆ ಸಂಬಂಧಿಸಿದಂತೆ 10 ಕೋಟಿ ರೂಪಾಯಿ ನಿಗದಿ ಮಾಡಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬೆಂಗಳೂರಿನ ಹಸಿರು ಹೃದಯಕ್ಕೆ ₹10 ಕೋಟಿ.
ಬೆಂಗಳೂರಿನ ಹೆಮ್ಮೆಯ ಲಾಲ್ ಬಾಗ್ ಶೀಘ್ರದಲ್ಲೇ ಪ್ರಮುಖ ನವೀಕರಣಗಳನ್ನು ಕಾಣಲಿದೆ.
✅ ಅದರ ಅಭಿವೃದ್ಧಿಗೆ ₹10 ಕೋಟಿ ಮಂಜೂರು
✅ ಸಂದರ್ಶಕರಿಗೆ ಮೀಸಲಾದ ವೈದ್ಯರು ಮತ್ತು ಆಂಬ್ಯುಲೆನ್ಸ್ ಸೇವೆ
✅ ಎಲ್ಲರಿಗೂ ಉಚಿತ ಶೌಚಾಲಯ ವ್ಯವಸ್ಥೆ
✅ ಹಿರಿಯ ನಾಗರಿಕರಿಗೆ ಜಿಮ್
ಪ್ರತಿಯೊಬ್ಬ ಬೆಂಗಳೂರಿಗರಿಗೂ ಸ್ವಚ್ಛ, ಸುರಕ್ಷಿತ, ಹಸಿರು ಲಾಲ್ ಬಾಗ್ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications