ಬೆಂಗಳೂರಿನ ಈ ಭಾಗದ ಹೋಟೆಲ್‌ಗಳಿಗೆ ಮಹತ್ವದ ಸೂಚನೆ & ಆಸ್ತಿದಾರರಿಗೂ ಜಿಬಿಎ ವಾರ್ನಿಂಗ್!
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಪಾಲಿಕೆಯು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿದ್ದು, ಇದೀಗ ಹೊಸ ನಗರ ಪಾಲಿಕೆಯ ಆಯುಕ್ತರು ಬೆಂಗಳೂರಿನ ಈ ಭಾಗದ ಹೋಟೆಲ್‌ಗಳು ಹಾಗೂ ಕಟ್ಟಡ ಮಾಲೀಕರಿಗೆ ಖಡಕ್ ಸಂದೇಶವನ್ನು ಕೊಟ್ಟಿದ್ದಾರೆ. ಅದರ ವಿವರ ನೋಡೋಣ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವೊಂದು ಮಹತ್ವದ ಸೂಚನೆಗಳನ್ನು ಈ ಪಾಲಿಕಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಅದರಲ್ಲಿ ಹೋಟೆಲ್‌ಗಳ ಮಾಲೀಕರು ಹಾಗೂ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೂ ಸಂಬಂಧಿಸಿದೆ. ಅದರಲ್ಲಿ ಮೊದಲನೆಯದಾಗಿ ಅನಾಥ ವಾಹನಗಳನ್ನು ಗುರುತಿಸಿ ಪೊಲೀಸ್ ಇಲಾಖೆಯ ಸಂಚಾರ ವಿಭಾಗಕ್ಕೆ ಪಟ್ಟಿ ನೀಡಲು ಹೇಳಲಾಗಿದೆ.

ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ (ಸೆಪ್ಟೆಂಬರ್ 10)ಕ್ಕೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ತುಂಬಾ ದಿನಗಳಿಂದ ರಸ್ತೆ ಬದಿಯೇ ನಿಂತಿರುವಂತಹ ಅನಾಥ (ವಾರಸುದಾರರಿಲ್ಲದ) ವಾಹನಗಳಿಂದ ಸುಗಮ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗಲಿದೆ. ಈ ನಿಟ್ಟಿನಲ್ಲಿ ರಸ್ತೆಗಳ ಮೇಲೆ ಇರುವ ಅನಾಥ ವಾಹನಗಳ ಪಟ್ಟಿಯನ್ನು ತಯಾರಿಸಿ, ಆ ಪಟ್ಟಿಯನ್ನು ಪೊಲೀಸ್ ಇಲಾಖೆಯ ಸಂಚಾರ ವಿಭಾಗಕ್ಕೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಬೆಂಗಳೂರಿನ ಈ ಭಾಗದ ಹೋಟೆಲ್‌ಗಳಿಗೆ ಶಾಕ್!
ಇನ್ನು ಬೆಂಗಳೂರಿನ ಉತ್ತರ ನಗರ ಪಾಲಿಕೆಯ ಹೋಟೆಲ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಆವರಣದಲ್ಲಿ ಯಾವುದೇ ಕಸ ಅಥವಾ ಡೆಬ್ರಿಸ್ ಹಾಕದಂತೆ ಸ್ವಚ್ಛವಾಗಿಟ್ಟುಕೊಳ್ಳಲು ಜಾಗೃತಿ ಮೂಡಿಸಬೇಕು. ಅದನ್ನು ಪಾಲಿಸದಿದ್ದರೆ ದಂಡ ವಿಧಿಸಬೇಕು. ಅದರ ಜೊತೆಗೆ ಎಲ್ಲಾ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಆವರಣವನ್ನು ಸ್ವಚ್ಛವಾಗಿ ಕಾಯ್ದುಕೊಳ್ಳುವಂತೆ ನೋಟಿಸ್‌ಗಳನ್ನು ನೀಡಬೇಕು ಎಂದು ಆಯುಕ್ತರು ಸೂಚನೆ ಕೊಟ್ಟಿದ್ದಾರೆ.
ಆಸ್ತಿದಾರರು & ಕಟ್ಟಡ ನಿರ್ಮಾಣದವರಿಗೂ ಸೂಚನೆ: ಇನ್ನು ಬೆಂಗಳೂರಿನ ಈ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವವರು ಪಾದಚಾರಿ ಮಾರ್ಗದ ಮೇಲೆ ಕಟ್ಟಡ ಭಗ್ನಾವಶೇಷಗಳು ಅಥವಾ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಬಾರದು. ಪಾದಚಾರಿ ಮಾರ್ಗದಲ್ಲಿ ಹಾಕಿ ಪಾಲಿಕೆ ಆಸ್ತಿಯನ್ನು ಹಾನಿಗೊಳಿಸಿದವರಿಗೆ ದಂಡ ವಿಧಿಸಲು ಸೂಚನೆ ನೀಡಲಾಗಿದೆ. ಸಡಿಲ ಕಲ್ಲುಗಳು, ಪಾದಚಾರಿ ಮಾರ್ಗದ ಮೇಲೆ ಇಟ್ಟಿರುವ ಕಲ್ಲುಗಳನ್ನು ತೆಗೆದುಹಾಕಬೇಕು ಎಂದು ಹೇಳಲಾಗಿದೆ.
ಪ್ರಮುಖ ಜಂಕ್ಷನ್ ಗಳ ಸುತ್ತಲಿನ 200 ಮೀಟರ್ ರಸ್ತೆ ಸುಸ್ತಿತಿಯಲ್ಲಿಡಬೇಕು: ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಂಚಾರಿ ಜಂಕ್ಷನ್‌ನಲ್ಲಿ ಸುಗಮವಾದ ಸಂಚಾರ ಇರಬೇಕು. ಈ ಸಂಬಂಧ ಎಲ್ಲಾ ಪ್ರಮುಖ ಜಂಕ್ಷನ್ ಗಳಿಗೆ ಸಂಪರ್ಕ ಕಲ್ಪಿಸಿವ ರಸ್ತೆಗಳ 200 ಮೀಟರ್ ದೂರದವರೆಗೆ ಗುಂಡಿಗಳು ಇಲ್ಲದಂತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸೂಚನೆ ನೀಡಲಾಗಿದೆ.
ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ಕ್ರಮಕ್ಕೆ ಸೂಚನೆ: ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ ಮತ್ತು ಜಾಸ್ಮಾ ದೇವಿ ಭವನ ರಸ್ತೆ (KSBA, KBA)ಗಳಲ್ಲಿ ಕಾರು ಪಾರ್ಕಿಂಗ್ ಮಾಡಿರುವುದನ್ನು ಗಮನಿಸಿ, ದೀರ್ಘವಾಗಿ ಪಾರ್ಕಿಂಗ್ ಮಾಡಿರುವ ಇಂತಹ ರಸ್ತೆಗಳ ಪಟ್ಟಿಯನ್ನು ಗುರುತಿಸಿ, ಪಾರ್ಕಿಂಗ್ ನೀತಿಯನ್ನು ಬಳಸಿಕೊಂಡು ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮವಹಿಸುವಂತೆ ಸೂಚಿಸಿದರು.
ಇಂದಿರಾ ಅಡುಗೆ ಕೋಣೆಯ ಶುಚಿತ್ವ ಕಾಪಾಡಿ: ಜಸ್ಮಾ ಭವನ ರಸ್ತೆಯಲ್ಲಿರುವ ಇಂದಿರಾ ಅಡುಗೆ ಕೋಣೆಗೆ ಭೇಟಿ ನೀಡಿ, ಅಡುಗೆ ಮಾಡುವ ಕಂಟೇನರ್‌ಗಳು ನಿತ್ಯ ಮುಚ್ಚಿಡಬೇಕು. ಅಡುಗೆ ಮಾಡುವ ಸ್ಥಳಲ್ಲಿ ಶುಚಿತ್ವ (Hygienic) ಕಾಯ್ದುಕೊಳ್ಳಲು ಸೂಚನೆ ನೀಡಿದರು. ವಸಂತ ನಗರದ ಮೌಂಟ್ ಕಾರ್ಮೆಲ್ ಬಳಿಯಿರುವ ಆಟೋ ಟಿಪ್ಪರ್ ಮಾಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿ 22 ಆಟೋಗಳು, 5 ಕಾಂಪ್ಯಾಕ್ಟರ್‌ಗಳ ಚಾಲಕ ಮತ್ತು ಸಿಬ್ಬಂದಿಗಳ ಜೊತೆ ಮಾತನಾಡಿ, ಸುರಕ್ಷಾ ಸಾಮಗ್ರಿಗಳನ್ನು ಬಳಸಿಕೊಂಡು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ.
ಈ ವೇಳೆ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಬಿ.ಎಸ್.ಡ.ಬ್ಲ್ಯೂ.ಎಂ.ಎಲ್ ನ ಡಿಜಿಎಂ, ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.












Click it and Unblock the Notifications