ಐಎಂಎ ವಂಚನೆ ಹಗರಣ: ಮತ್ತೊಬ್ಬ ಆರೋಪಿ ಉಮರ್ ಷರೀಫ್ ಬಂಧನ
ಬೆಂಗಳೂರು, ಜುಲೈ 18: ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಜತೆ ನಿಕಟ ಸಂಪರ್ಕ ಹೊಂದಿದ್ದ ಉಮರ್ ಷರೀಫ್ (42) ಎಂಬಾತನನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ಬಂಧಿಸಿದ್ದಾರೆ. ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ವಶಕ್ಕೆ ಪಡೆದುಕೊಳ್ಳಲಾಗಿದೆ.
ಉಮರ್ ಷರೀಫ್, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ 'ಅಲ್ ಬಶೀರ್' ಎಂಬ ಶಾಲೆ ನಡೆಸುತ್ತಿದ್ದಾನೆ. ಆತ ಐದು ವರ್ಷಗಳಿಂದ ಮನ್ಸೂರ್ ಖಾನ್ ಜತೆ ಇದ್ದು, ಐಎಂಎ ಪರ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ, ಮನ್ಸೂರ್‌ನಿಂದ 60 ಲಕ್ಷ ರೂಪಾಯಿ ಹಣ ಮತ್ತು 15 ಲಕ್ಷ ರೂ. ಮೌಲ್ಯದ ವಾಹನವನ್ನು ಪಡೆದುಕೊಂಡಿದ್ದ ಎಂದು ಪೊಲೀಸ್ ಉಪ ಆಯುಕ್ತ (ಅಪರಾಧ) ಗಿರೀಶ್ ಎಸ್. ತಿಳಿಸಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 16ರಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದ ಎಸ್‌ಐಟಿ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.











Click it and Unblock the Notifications