ಅಕ್ರಮ ಆಸ್ತಿ ಗಳಿಕೆ: ಶಾಸಕ ಎಂ ಕೃಷ್ಣಪ್ಪಗೆ ಫುಲ್ ರಿಲೀಫ್
ಬೆಂಗಳೂರು, ನ.16:ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹೊತ್ತಿದ್ದ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರು ನಿರಾಳವಾಗಿದ್ದಾರೆ. ಅವರ ಮೇಲಿನ ಆರೋಪ ಖುಲಾಸೆಯಾಗಿದೆ. ಎಂ.ಕೃಷ್ಣಪ್ಪ ಅವರು ಈಗ ಆರೋಪ ಮುಕ್ತರಾಗಿದ್ದಾರೆ. ಎಂ.ಕೃಷ್ಣಪ್ಪ ವಿರುದ್ಧ ಪ್ರಕಾಶ್ ಎಂಬುವವರು 2012ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತರಿಗೆ ನೀಡಿದ್ದ ದೂರಿನ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಲೋಕಾಯುಕ್ತ ಪೋಲೀಸರು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಲೋಕಾಯುಕ್ತ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು ನ್ಯಾಯಾಲಯ ಬಿ ರಿಪೋರ್ಟ್ ಮಾನ್ಯ ಮಾಡಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್‍ನ ಎಂ.ಕೃಷ್ಣಪ್ಪ ಅವರು ಸದ್ಯ ನಿರಾಳರಾಗಿದ್ದಾರೆ.

ಪಿರ್ಯಾದುದಾರ ಪ್ರಕಾಶ್ ಕುಮಾರ್ ಅವರು ಮಾಡಿದ ಆರೋಪದಲ್ಲಿ ಸತ್ಯಾಂಶವಿಲ್ಲ. ರಾಜಕೀಯ ವಿರೋಧಿಗಳು ಅವರ ರಾಜಕೀಯ ಏಳಿಗೆಗೆ ಕಡಿವಾಣ ಹಾಕಲು ಈ ರೀತಿ ಅಸ್ತ್ರ ಪ್ರಯೋಗಿಸಿ ಚುನಾವಣೆಯಲ್ಲಿ ಸೋಲಿಸುವ ತಂತ್ರ ಮಾಡಿದ್ದರು. ಆದರೆ ಈ ತಂತ್ರ ಫಲಿಸಲಿಲ್ಲ. ಅವರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಗೊತ್ತಾಗಿದೆ. ಪೋಲೀಸರು ಬಿ ರಿಪೋರ್ಟ್ ಹಾಕಿ ಲೋಕಾಯುಕ್ತ ಕೋರ್ಟ್ ಅದನ್ನು ಮಾನ್ಯ ಮಾಡುತ್ತಿದ್ದಂತೆ ಕೃಷ್ಣಪ್ಪ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಹೊತ್ತ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 156 (3) ಕಲಮಿನ ಅಡಿ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಲೋಕಾಯುಕ್ತ ಪೊಲೀಸರಿಗೆ ಜನವರಿ 17, 2012ರಂದು ಆದೇಶಿಸಿದ್ದರು.
ರಾಜಾಜಿನಗರ ನಿವಾಸಿ ಎಚ್. ಸಿ.ಪ್ರಕಾಶ್ ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಎಂ. ಕೃಷ್ಣಪ್ಪ, ಅವರ ಪುತ್ರ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ಪತ್ನಿ ಪ್ರಿಯದರ್ಶಿನಿ ಹಾಗೂ ಪ್ರದೀಪ್ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು.












Click it and Unblock the Notifications