IIHR-ICAR: ರೈತರಿಗೆ ಭರ್ಜರಿ ಗುಡ್‌ನ್ಯೂಸ್: ಬೆಂಗಳೂರಿನ ಹೆಸರಘಟ್ಟದಲ್ಲಿ ಉತ್ಕೃಷ್ಟತಾ ಕೇಂದ್ರ, ತರಬೇತಿ ಕೇಂದ್ರ ಉದ್ಘಾಟನೆ
ಬೆಂಗಳೂರು: ರಾಜ್ಯದ ರೈತರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಐಸಿಎಆರ್-ಐಐಎಚ್‌ಆರ್‌ನಲ್ಲಿ ತೋಟಗಾರಿಕಾ ಬೆಳೆಗಳ ಜೀನೋಮ್ ಎಡಿಟಿಂಗ್‌ಗಾಗಿ ಸ್ಥಾಪಿಸಿದೆ ಉತ್ಕೃಷ್ಟತಾ ಕೇಂದ್ರ ಹಾಗೂ ರೈತರ ತರಬೇತಿ ಕೇಂದ್ರವನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಅವರು ಭಾನುವಾರ ಉದ್ಘಾಟಿಸಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ವತಿಯಿಂದ ರೈತರ ಉನ್ನತ ತರಬೇತಿ ಕೇಂದ್ರ (Advanced Training Centre - ATC) ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಜೀನೋಮ್ ಎಡಿಟಿಂಗ್‌ಗಾಗಿ ಜೈವಿಕ ಸುರಕ್ಷತಾ ಮಟ್ಟ-II (BSL-II) ಪ್ರಯೋಗಾಲಯ ಒಳಗೊಂಡ ಉತ್ಕೃಷ್ಟತಾ ಕೇಂದ್ರವನ್ನು ಬೆಂಗಳೂರಿನ ಹೆಸರಘಟ್ಟದಲ್ಲಿರುವ ನಿರ್ಮಿಸಲಾಗಿದೆ. ಇದರಿಂದ ಕೃಷಿ, ತೋಟಗಾರಿಕೆ ಬೆಳೆಗಾರರಿಗೆ ಸಹಾಯವಾಗಲಿದೆ.

ರೈತರನ್ನುದ್ದೇಶಿಸಿ ಮಾತನಾಡಿದ ಡಾ. ಜಾಟ್ ಅವರು, ಇದು ತೋಟಗಾರಿಕಾ ಬೆಳೆಗಳಲ್ಲಿ ಸುಧಾರಿತ ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಜೀನೋಮ್ ಎಡಿಟಿಂಗ್ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರಗಳ ಸ್ಥಾಪನೆ ಮಹತ್ವದ ಹೆಜ್ಜೆಯಾಗಿದೆ. ಭವಿಷ್ಯದ ಅಗತ್ಯತೆ ಗಮನದಲ್ಲಿಟ್ಟುಕೊಂಡು ವಿಜ್ಞಾನಿಗಳು ಜೀನೋಮ್ ಎಡಿಟಿಂಗ್ ಸಂಶೋಧನೆಗೆ ಅಗತ್ಯವಿರುವ ಜೀನೋಮಿಕ್ ಸಂಪನ್ಮೂಲಗಳಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ಕರೆ ನೀಡಿದರು.
ಸಂಶೋಧನೆಯಲ್ಲಿ ಆದ್ಯತೆ ನಿಗದಿ, ಸೂಕ್ತ ಗುರಿ ನಿರ್ಧಾರ, ಬಲಿಷ್ಠ ದತ್ತಾಂಶ ವ್ಯವಸ್ಥೆಯ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದ ಮತ್ತು ಜಾಗತಿಕವಾಗಿ ಪ್ರಥಮ ಅನ್ನಿಸುವ ಆವಿಷ್ಕಾರಗಳಿಗೆ ಅವಕಾಶವಿರುವ ಕ್ಷೇತ್ರಗಳನ್ನು ಗುರುತಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು.
ಯುವಕರು ಕೃಷಿ, ತೋಟಗಾರಿಕೆಯಲ್ಲಿ ತೊಡಗಬೇಕು
ವಿದ್ಯಾವಂತ ಯುವಜನತೆ, ಎಂಜಿನಿಯರ್‌ಗಳು ಹಾಗೂ ಕೃಷಿ ಪದವೀಧರರು ವೈಜ್ಞಾನಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಹೂಡಿಕೆ ಮಾಡಬೇಕು ಎಂದರು.
ಕೃಷಿ ಸಂಶೋಧನೆಯಲ್ಲಿ ರೈತರೇ ಕೇಂದ್ರ ಬಿಂದು
ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಸಾಂಪ್ರದಾಯಿಕ ಜ್ಞಾನದೊಂದಿಗೆ ಸಮನ್ವಯಗೊಳಿಸುವ ಅಗತ್ಯತೆ ಇದೆ. ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯ ಎಲ್ಲಾ ಚಟುವಟಿಕೆಗಳಲ್ಲಿ ರೈತರೇ ಕೇಂದ್ರ ಬಿಂದುವಾಗಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಮೂಲಕ ನವೀನ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವಲ್ಲಿ ಐಸಿಎಆರ್ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು (KVKs) ಹಾಗೂ ಕೃಷಿ ತಂತ್ರಜ್ಞಾನ ಅನ್ವಯ ಸಂಶೋಧನಾ ಸಂಸ್ಥೆಗಳ (ATARIs) ಪಾತ್ರ ಶ್ಲಾಘಿಸಿದರು.
ವಿಶೇಷವಾಗಿ ಖೇತ್ ಬಚಾವೋ ಅಭಿಯಾನ (KBA) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಶಸ್ವಿ ಅನುಭವಗಳು ಮತ್ತು ನವೀನ ಪ್ರಯೋಗಗಳನ್ನು ದಾಖಲಿಸಿ ದೇಶದಾದ್ಯಂತ ಇತರ ರೈತರಿಗೆ ತಲುಪಿಸುವುದಾಗಿ ಭರವಸೆ ನೀಡಿದರು.
30 ಟ್ರಿಲಿಯನ್ ಆರ್ಥಿಕತೆಯ ಗುರಿ
ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದ ಅವರು,ಯುವ ವಿಜ್ಞಾನಿಗಳ ಪ್ರತಿಭೆಯನ್ನು ಪೋಷಿಸುವುದು ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಬಲಪಡಿಸುವುದು ಅತ್ಯಂತ ಮುಖ್ಯ. ವಿಜ್ಞಾನಿಗಳು ಸಾಂಪ್ರದಾಯಿಕ ಕಾರ್ಯವಿಧಾನಗಳನ್ನು ಮೀರಿ ಹೊಸ ಅವಕಾಶಗಳನ್ನು ಬಳಸಿಕೊಂಡು, 2047ರ ವೇಳೆಗೆ 30 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯ ಭಾರತದ ಗುರಿಯಲ್ಲಿ ಕೃಷಿ ಕ್ಷೇತ್ರದಿಂದ 6 ಟ್ರಿಲಿಯನ್ ಅಮೆರಿಕನ್ ಡಾಲರ್ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಂಶೋಧನಾ ಪ್ರಯೋಗಾಲಯಗಳ ವೀಕ್ಷಣೆ ಹಾಗೂ ಸಂಸ್ಥೆಯ ಸಂಶೋಧನಾ ಕ್ಷೇತ್ರಗಳ ಭೇಟಿ ಕಾರ್ಯಕ್ರಮಗಳೂ ನಡೆದವು. ಈ ಭೇಟಿಯು ಸಂಸ್ಥೆಯ ಸಂಶೋಧನೆ, ಆವಿಷ್ಕಾರ, ರೈತ ಸಂಪರ್ಕ ಕಾರ್ಯಕ್ರಮಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಮಹತ್ವದ ವೇದಿಕೆ ಕಲ್ಪಿಸಿದೆ ಎಂದು ಹೇಳಿದರು.
ರೈತರೊಂದಿಗಿನ ಸಂವಾದದಲ್ಲಿ ರೈತರು ಮಲ್ಚಿಂಗ್, ಸ್ಪ್ರಿಂಕ್ಲರ್ ನೀರಾವರಿ, ಗಡಿ ಬೆಳೆ ಪದ್ಧತಿ, ಅಲ್ಪಾವಧಿಯ ಹೂವು ಮತ್ತು ತರಕಾರಿ ಬೆಳೆಗಳ ಅಂತರ ಬೆಳೆ ಪದ್ಧತಿ ಹಾಗೂ ಹಸಿರೆಲೆ ಗೊಬ್ಬರ ಬಳಕೆಯಂತಹ ಹವಾಮಾನ ವೈಪರೀತ್ಯ ಎದುರಿಸುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ತಮ್ಮ ಅನುಭವ ಹಂಚಿಕೊಂಡರು.




Click it and Unblock the Notifications
