ಬೆಂಗಳೂರಲ್ಲಿ ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್; 6 ದಿನ ಹೈಡ್ರಾಲಿಕ್ ವಾಹನ ಕಾರ್ಯಾಚರಣೆ

ಬೆಂಗಳೂರು: ರಾಜಧಾನಿಯಲ್ಲಿ ನಾಯಿಗಳ ಹಾವಳಿಗೆ ಸೂಕ್ತ ಕ್ರಮ ಜರುಗಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದೀಗ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಸಂಚರಿಸುವ ಜಾನುವಾರುಗಳ ನಿಯಂತ್ರಣಕ್ಕೆ ವಿಶೇಷ ಹೈಡ್ರಾಲಿಕ್ ವಾಹನ ವ್ಯವಸ್ಥೆ ಮಾಡಲಾಗಿದೆ. ಈ ವಾಹನ ಕಾರ್ಯಾಚರಣೆಗೆ ಇಂದು ಸೋಮವಾರ (ಅ.5 ) ಚಾಲನೆ ನೀಡಲಾಯಿತು.

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ದನಗಳು ಹಾಗೂ ಇತರೆ ಜಾನುವಾರುಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿಯಂತ್ರಿಸುವುದು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು. ಸಾರ್ವಜನಿಕರ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಹೈಡ್ರಾಲಿಕ್ ವಾಹನದ ಮೂಲಕ ಜಾನುವಾರುಗಳ ನಿಯಂತ್ರಣ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದರು.

Hydraulic Vehicle

ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ವಿಶೇಷ ವಾಹನ

ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಬಿಡಾಡಿಯಾಗಿ ಸಂಚರಿಸುವ ದನ, ಹಸು, ಕರು, ಎಮ್ಮೆ, ಎತ್ತು, ಹೋರಿ ಸೇರಿದಂತೆ ಜಾನುವಾರುಗಳಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ರಸ್ತೆ ಮಧ್ಯದಲ್ಲಿ ಜಾನುವಾರುಗಳು ನಿಂತಿರುವುದು ಅಥವಾ ಮಲಗಿರುವುದರಿಂದ ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇದರಿಂದ ಸಾರ್ವಜನಿಕರು ಹಾಗೂ ಜಾನುವಾರುಗಳಿಗೂ ಅಪಾಯ ಉಂಟಾಗಬಹುದು.

ಕೆಲವು ಸಂದರ್ಭಗಳಲ್ಲಿ ಜಾನುವಾರುಗಳು ಏಕಾಏಕಿ ರಸ್ತೆಗೆ ನುಗ್ಗುವುದರಿಂದ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಜಾನುವಾರುಗಳು ಪರಸ್ಪರ ಗುದ್ದಾಡಿಕೊಂಡು ರಸ್ತೆಯಲ್ಲಿ ಓಡಾಡುವುದರಿಂದಲೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಪಾದಚಾರಿ ಮಾರ್ಗಗಳಲ್ಲಿ ಜಾನುವಾರುಗಳು ಮಲಿನತೆ ಉಂಟುಮಾಡುವುದರಿಂದ ಪಾದಚಾರಿಗಳ ಓಡಾಟಕ್ಕೂ ಅಡಚಣೆಯಾಗುತ್ತಿದೆ ಎಂದು ಅವರು ಜಾನುವಾರುಗಳಿಂದಾಗುತ್ತಿರು ಸಮಸ್ಯೆಗಳನ್ನು ವಿವರಿಸಿದರು.

ಆದ್ದರಿಂದ ಸಾರ್ವಜನಿಕರ ಸುರಕ್ಷತೆ, ಜಾನುವಾರುಗಳ ರಕ್ಷಣೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ ಹೈಡ್ರಾಲಿಕ್ ದನ ಹಿಡಿಯುವ ವಾಹನದ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಕಾರ್ಯಾಚರಣೆ ನಡೆಯಲಿದೆ ಎಂದರು.

ಜಾನುವಾರುಗಳ ವಶ, ನಿಯಮಾನುಸಾರ ಕ್ರಮ, ದಂಡ

ಸಾರ್ವಜನಿಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುವ ಜಾನುವಾರುಗಳನ್ನು ನಗರ ಪಾಲಿಕೆ ಸಿಬ್ಬಂದಿಗಳು ಸುರಕ್ಷಿತವಾಗಿ ವಶಕ್ಕೆ ಪಡೆದು ಜಾನುವಾರುಗಳ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಿದ್ದಾರೆ. ಮಾಲೀಕರಿರುವ ಜಾನುವಾರುಗಳಿಗೆ ನಿಯಮಾನುಸಾರ ದಂಡ ವಿಧಿಸಲಾಗುವುದು. ದಂಡದ ಮೊತ್ತವನ್ನು ಪಾವತಿಸಿದ ನಂತರ ಜಾನುವಾರುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗುವುದು. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದನದ ದೊಡ್ಡಿ ನಿರ್ಮಾಣವಾಗುವವರೆಗೆ ವಶಪಡಿಸಿಕೊಳ್ಳಲಾದ ಜಾನುವಾರುಗಳನ್ನು ಸದ್ಯಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ನಗರ ದನದ ದೊಡ್ಡಿ, ಕೆ.ಆರ್. ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಜಾನುವಾರುಗಳು ಗೋಶಾಲೆಗೆ ಹಸ್ತಾಂತರ

ಮಾಲೀಕರಿಲ್ಲದ ಜಾನುವಾರುಗಳನ್ನು ನಿಯಮಾನುಸಾರ ಗೋಶಾಲೆಗೆ ಹಸ್ತಾಂತರಿಸಲಾಗುವುದು. ಜಾನುವಾರುಗಳನ್ನು ಪದೇ ಪದೇ ಸಾರ್ವಜನಿಕ ರಸ್ತೆಗಳಿಗೆ ಬಿಡುವ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಬಿಡಾಡಿ ಜಾನುವಾರುಗಳಿಂದ ನಗರದ ಸ್ವಚ್ಛತೆಗೆ ಧಕ್ಕೆಯಾಗುವುದರ ಜೊತೆಗೆ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ. ರಸ್ತೆಗಳಲ್ಲಿ ಜಾನುವಾರುಗಳು ಮಲಗುವುದು, ಸಂಚರಿಸುವುದು ಹಾಗೂ ಏಕಾಏಕಿ ವಾಹನಗಳ ಮುಂದೆ ಬರುವುದರಿಂದ ಅಪಘಾತಗಳ ಸಂಭವವಿದೆ.

ಜಾನುವಾರುಗಳ ನಿಯಂತ್ರಣ ಕಾರ್ಯಾಚರಣೆಯು ಸಾರ್ವಜನಿಕರ ಜೀವ ರಕ್ಷಣೆ, ಜಾನುವಾರುಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ನೆರವಾಗಲಿದೆ. ಆದ್ದರಿಂದ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡದಂತೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅಪರ ಆಯುಕ್ತರು (ಅಭಿವೃದ್ಧಿ) ತಿಳಿಸಿದರು.

ನಿಯಮಾನುಸಾರ ದಂಡ ವಸೂಲಿ

ಕರ್ನಾಟಕ ಜಾನುವಾರು ಅತಿಕ್ರಮಣ ಅಧಿನಿಯಮ, 1966ರ ಅಧ್ಯಾಯ-III, ಕಲಂ 10ರ ಉಪಕಲಂ (1)ರ ಅಡಿಯಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ: UDD 569 MNY 2012, BANGALORE, DATED: 05-05-2014ರಂತೆ ಸಾರ್ವಜನಿಕ ರಸ್ತೆಗಳಲ್ಲಿ ಜಾನುವಾರುಗಳನ್ನು ಬಿಡುವ ಮಾಲೀಕರಿಂದ ನಿಯಮಾನುಸಾರ ದಂಡ ವಸೂಲಿ ಮಾಡಲಾಗುವುದು.

ದನ, ಎತ್ತು, ಹಸು, ಎಮ್ಮೆ ಹಾಗೂ ಎಮ್ಮೆ ಎತ್ತುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡುವ ಸಂದರ್ಭದಲ್ಲಿ, ಮೊದಲ ಮೂರು ದಿನಗಳಿಗೆ ಅಥವಾ ಅದರ ಭಾಗಕ್ಕೆ ಪ್ರತಿ ಜಾನುವಾರಿಗೆ ₹600 ಹಾಗೂ ಮೂರು ದಿನಗಳ ನಂತರ ಪ್ರತಿ ದಿನಕ್ಕೆ ₹300 ದಂಡ ವಿಧಿಸಲಾಗುವುದು. ಕರುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡುವ ಸಂದರ್ಭದಲ್ಲಿ, ಮೊದಲ ಮೂರು ದಿನಗಳಿಗೆ ಅಥವಾ ಅದರ ಭಾಗಕ್ಕೆ ಪ್ರತಿ ಕರುವಿಗೆ ₹300 ಹಾಗೂ ಮೂರು ದಿನಗಳ ನಂತರ ಪ್ರತಿ ದಿನಕ್ಕೆ ₹200 ದಂಡ ವಿಧಿಸಲಾಗುವುದು.

ಕುರಿ, ಕುದುರೆ, ಹೆಸರಗತ್ತೆ, ಹಂದಿ ಮಾಲೀಕರಿಗೂ ದಂಡ

ಕುದುರೆ, ಹೆಣ್ಣು ಕುದುರೆ, ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾದ ಗಂಡು ಕುದುರೆ, ಸಣ್ಣ ಗಾತ್ರದ ಕುದುರೆ, ಎಳೆಯ ಗಂಡು ಕುದುರೆ, ಎಳೆಯ ಹೆಣ್ಣು ಕುದುರೆ ಹಾಗೂ ಹೇಸರಗತ್ತೆಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡುವ ಸಂದರ್ಭದಲ್ಲಿ, ಮೊದಲ ಮೂರು ದಿನಗಳಿಗೆ ಪ್ರತಿ ಜಾನುವಾರಿಗೆ ₹100 ರಂತೆ ಹಾಗೂ ಮೂರು ದಿನಗಳ ನಂತರ ಪ್ರತಿ ಜಾನುವಾರಿಗೆ ದಿನಕ್ಕೆ ₹50 ರಂತೆ ದಂಡ ವಿಧಿಸಲಾಗುವುದು.

ಕತ್ತೆ ಅಥವಾ ಹಂದಿಯನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡುವ ಸಂದರ್ಭದಲ್ಲಿ, ಮೊದಲ ಮೂರು ದಿನಗಳಿಗೆ ಪ್ರತಿ ಜಾನುವಾರಿಗೆ ₹50 ರಂತೆ ಹಾಗೂ ಮೂರು ದಿನಗಳ ನಂತರ ಪ್ರತಿ ಜಾನುವಾರಿಗೆ ದಿನಕ್ಕೆ ₹25 ರಂತೆ ದಂಡ ವಿಧಿಸಲಾಗುವುದು. ಕುರಿ, ಮೇಕೆ ಹಾಗೂ ಅವುಗಳ ಮರಿಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡುವ ಸಂದರ್ಭದಲ್ಲಿ, ಮೊದಲ ಮೂರು ದಿನಗಳಿಗೆ ಪ್ರತಿ ಜಾನುವಾರಿಗೆ ₹25 ರಂತೆ ದಂಡ ವಿಧಿಸಲಾಗುವುದು.

ಆ್ಯಪ್, ಸಹಾಯವಾಣಿ ಮೂಲಕ ಮಾಹಿತಿಗೆ ಮನವಿ

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಅಥವಾ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನ, ಹಸು, ಕರು, ಎಮ್ಮೆ, ಕುದುರೆ, ಕುರಿ, ಮೇಕೆ, ಎತ್ತು, ಹೋರಿ ಸೇರಿದಂತೆ ಜಾನುವಾರುಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯ ಆ್ಯಪ್, ನಾಗರಿಕ ಸಹಾಯವಾಣಿ - 1533 ಅಥವಾ ಪಾಲಿಕೆ ನಿಯಂತ್ರಣ ಕೊಠಡಿ ಸಂಖ್ಯೆಗೆ 9480685706 ಕರೆ ಮಾಡಿ ಮಾಹಿತಿ ನೀಡಬಹುದು.

ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡದೆ ಸುರಕ್ಷಿತವಾಗಿ ಸಾಕಬೇಕು. ಸಾರ್ವಜನಿಕರ ಸುಗಮ ಸಂಚಾರ, ಜಾನುವಾರುಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಅವನ್ನು ರಸ್ತೆಗಳಲ್ಲಿ ಬಿಡದಂತೆ ಜಾನುವಾರು ಮಾಲೀಕರಿಗೆ ಪಾಲಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+