ಬೆಂಗಳೂರು: ಹೆಂಡತಿಯನ್ನು ಕೊಂದು ಸೂಟ್‌ಕೇಸ್‌ಗೆ ತುಂಬಿದ ಗಂಡ
ಬೆಂಗಳೂರು, ಮಾರ್ಚ್ 28: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ದೇಶದ ಯಾವುದೋ ಭಾಗದಲ್ಲಿ ನಡೆಯುತ್ತಿದ್ದ ಸೂಟ್‌ಕೇಸ್‌ನಲ್ಲಿ ಹೆಣ ಪ್ರಕರಣ ಇದೀಗ ರಾಜಧಾನಿ ಬೆಂಗಳೂರಿನಲ್ಲೇ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿಯನ್ನು ಕೊಂದು ತುಂಡರಿಸಿ ಸೂಟ್ ಕೇಸ್‌ಗೆ ತುಂಬಿದ ಘಟನೆ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ ನಡೆದಿದೆ. ರಾಕೇಶ್ ಕೊಲೆಯ ಆರೋಪಿಯಾಗಿದ್ದು, ಗೌರಿ ಅನಿಲ್‌ಸಾಂಬೇಕರ್ ಪತಿಯಿಂದಲೇ ಕೊಲೆಯಾದ ಪತ್ನಿ ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದಿದ್ದ ರಾಕೇಶ್ ಇಲ್ಲಿಯೇ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ. ಪತ್ನಿ ಗೌರಿ ಅನಿಲ್ ಸಾಂಬೆಕರ್ ಸದ್ಯ ಹೌಸ್ ವೈಫ್ ಆಗಿದ್ದು, ವಿದ್ಯಾವಂತೆಯಾದ ಕಾರಣ ಬೆಂಗಳೂರಿನಲ್ಲಿಯೇ ಕೆಲಸ ಹುಡುಕುತ್ತಿದ್ದಳು.

ಕಳೆದ ಒಂದು ತಿಂಗಳ ಹಿಂದಷ್ಟೇ ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆಗೆ ಬಂದಿದ್ದರು. ಸುಂದರವಾದ ಪತ್ನಿ, ಕೈ ತುಂಬ ಸಂಬಳದ ಕೆಲಸ ಒಟ್ಟಾರೆಯಾಗಿ ಒಂದು ಸುಂದರ ಜೀವನ ರೂಪಿಸಿಕೊಳ್ಳಲು ಇರಬೇಕಾದ ಎಲ್ಲಾ ಸವಲತ್ತುಗಳು ಕೂಡ ರಾಕೇಶ್ ಬದುಕಿನಲ್ಲಿ ಇತ್ತು. ಇಬ್ಬರು ಅನ್ಯೋನ್ಯವಾಗಿ ಇದ್ದರೂ ಕೂಡ. ಹೀಗಿರುವಾಗ ಈ ದಂಪತಿಯ ಮೇಲೆ ಅದ್ಯಾವ ಕೆಟ್ಟದೃಷ್ಟಿ ಬಿತ್ತೋ ಗೊತ್ತಿಲ್ಲ. ಒಬ್ಬರ ಜೀವ ಅಂತ್ಯವಾದರೆ ಇನ್ನೊಬ್ಬರ ಜೀವನ ಅಂತ್ಯವಾಗಿದೆ.
ಹೌದು ಬುಧವಾರ ರಾತ್ರಿ ಕೆಲಸದಿಂದ ಬಂದ ರಾಕೇಶ್‌ಗೆ ಅದೇನಾಯ್ತೋ ಗೊತ್ತಿಲ್ಲ ಪತ್ನಿಯ ಜೊತೆ ಜಗಳ ಮಾಡಿಕೊಂಡಿದ್ದಾನೆ. ಈ ಗಲಾಟೆ ವಿರೋಪಕ್ಕೆ ತಿರುಗಿ ರಾಕೇಶ್ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಬಳಿಕ ಏನು ಮಾಡುವುದು ಎಂದು ತಿಳಿಯದೇ ಹೆಣ ಸಾಗಿಸಲು ಪತ್ನಿಯ ಕುತ್ತಿಗೆ, ಹೊಟ್ಟೆ ಕೊಯ್ದು ಸೂಟ್ಕೇಸ್ಗೆ ತುಂಬಿದ್ದಾನೆ. ಪತ್ನಿ ಕೊಲೆ ಬಳಿಕ ಮನೆಯಿಂದ ಪರಾರಿಯಾಗಲು ಯತ್ನಿಸಿದ ರಾಕೇಶ್ ಮೊದಲು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಮನೆಯಿಂದ ಹೊರಟವನಿಗೆ ಪಾಪಪ್ರಜ್ಞೆ ಕಾಡಿದ್ದು, ತಾವು ಬಾಡಿಗೆ ಇದ್ದ ಕೆಳಗಿನ ಮನೆಯವರಿಗೂ ಹಾಗೂ ಪತ್ನಿ ಗೌರಿ ಮನೆಯವರಿಗೂ ಕರೆ ಮಾಡಿ ಕೊಲೆ ಮಾಡಿರುವ ವಿಷಯ ತಿಳಿಸಿದ್ದಾನೆ. ಕೂಡಲೇ ಮನೆ ಮಾಲೀಕರು ಹುಳಿಮಾವು ಠಾಣಾ ಪೊಲೀಸರಿಗೆ ಈ ವಿಷಯ ಮುಟ್ಟಿಸಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದಾಗ ರಾಕೇಶ್ ಮನೆಯ ಬಾತ್‌ರೂಮಿನಲ್ಲಿ ಒಂದು ಸೂಟ್ಕೇಸ್ ಪತ್ತೆಯಾಗಿದೆ. ಈ ಸೂಟ್ಕೇಸ್ ತೆಗೆದು ನೋಡಿದಾಗ ಅದರಲ್ಲಿ ಪತ್ನಿ ಗೌರಿ ಅನಿಲ್ ಸಾಂಬೆಕರ್ ಮೃತದೇಹ ಪತ್ತೆಯಾಗಿದೆ. ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದು, ಪುಣೆಯ ಶಿರವಾಲ್ ಬಳಿ ಪೊಲೀಸರು ಆರೋಪಿ ರಾಕೇಶ್‌ನನ್ನು ಬಂಧಿಸಿದ್ದಾರೆ.












Click it and Unblock the Notifications