• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿಯ ದಿವಾನನ ಮಗಳು, ಬೆಂಗಳೂರಿನ ಬಿಸಿಲ ಝಳದಲ್ಲಿ ಕರಗಿದ ನೈಜ ಕತೆ!

By ಸಂದೀಪ್ ಈಶಾನ್ಯ
|

ಬೆಳಗಾವಿಯ ದಿವಾನರೊಬ್ಬರ ಮಗಳಾಗಿದ್ದ ಈಕೆ, ಕುಟುಂಬದಿಂದ ಪರಿತ್ಯಕ್ತಳಾಗಿ ಬೆಂಗಳೂರಿನ ಬಿಸಿಲ ಜಳದಲ್ಲಿ ಕರಗಿದ ಮನಮಿಡಿವ ನೈಜ ಕತೆಯೊಂದನ್ನು ಲೇಖಕರಾದ ಸಂದೀಪ್ ಈಶಾನ್ಯ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಆಧುನಿಕ ಯುಗದ 'ಮೆಟಿರಿಯಲಿಸ್ಟಿಕ್' ಮನಸ್ಸುಗಳು ಭಾವನಾತ್ಮಕ ಸಂಬಂಧಗಳಿಗೆ ಹೇಗೆ ಜೀವಂತ ಘೋರಿ ಕಟ್ಟುತ್ತಿವೆ ಎಂಬುದಕ್ಕೆ ಈ ಘಟನೆಯೊಂದು ಅತ್ಯುತ್ತಮ ಉದಾಹರಣೆ.

ಸಂಜೆ ಹೊತ್ತಿಗೆ ಗೇಟಿನ ಮೇಲೆ "To Let" ಬೋರ್ಡು ಹಾಕುತ್ತಾರಂತೆ.

----------------------------------------------------------------------

ಮನಮಿಡಿವ 'ಆ ಸುದ್ದಿ'ಗೆ ಒನ್ಇಂಡಿಯಾ ಓದುಗರ ಹೃದಯಸ್ಪರ್ಶಿ ಪ್ರತಿಕ್ರಿಯೆ

ಬೆಂಗಳೂರಿನ ನನ್ನ ಅಪರೂಪದ ಗೆಳೆಯರಲ್ಲಿ ನನ್ನ ರೂಮಿನ ಪಕ್ಕದಲ್ಲೇ ತರಗೆಲೆಯಂತಿರುವ ಅಜ್ಜಿಯೂ ಒಬ್ಬಳು. ಇವಳು, ನಾನು ಮೈಸೂರಿಗೆ ಹೊರಡುವಾಗ ಮುನಿಸಿಕೊಳ್ಳುತ್ತಾಳೆ. "ಇವತ್ತು ಉಪ್ಪಿಟ್ಟು ಮಾಡಿದೀನಿ" ಎಂದರೆ ಸೀದಾ ಬಟ್ಟಲು ತಂದು, "ಎಲ್ಲಿ ನಂಗೂ ಕೊಡ್ರಾಲ್ಲಾ" ಎನ್ನುವಷ್ಟು ಸಲುಗೆ ಹೊಂದಿದ್ದಾಳೆ.‌ ಸಂಜೆ ಆಫೀಸು ಮುಗಿಸಿ ರೂಮಿಗೆ ಬರುವ ಹಾದಿಯಲ್ಲಿ ಬಾಳೆಹಣ್ಣು ತರದೇ ಬಂದರೆ. ಮುಖ ಗಂಟುಹಾಕಿ. "ನಿನಗೆ ನನ್ನ ಕೂಡ ಪ್ರೀತಿ ಹೋಗೈತಿ ಅದಕ್ಕಾ ಬಾಳೆಹಣ್ಣ ತರದೇ ಬಂದಿದ್ದಿ" ಎಂದು ಸರ್ರನೆ ಅಂದುಬಿಡುತ್ತಾಳೆ. ಅದೊಂದು ಅದೃಶ್ಯವಾದ ನಿತ್ಯದ ತಂತು ಇಬ್ಬರ ನಡುವೆಯೂ ಹೆಣಿಗೆ ಹಾಕುತ್ತಲೇ ಇದೆ.

****

ಎರಡು ವಾರಗಳ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ "ಮಾಯಿ ಕತೆ" ಯನ್ನು ಎದುರು ‌ಕೂರಿಸಿಕೊಂಡು ಅಜ್ಜಿಗೆ ಓದಿ ತೋರಿದೆ. ಕತೆಯ ಭಾವಕ್ಕೆ ತಕ್ಕಂತೆ ಹು, ಅಯ್ಯೋ, ನಿಜಾ ಏನಾ, ಪ್ಚ್ ಪ್ಚ್ ಗಳನ್ನು ಜೋಡಿಸುತ್ತಾ ಕತೆ ಕೇಳಿದಳು. ಕತೆ ಕಡೆಯಾದ ಮೇಲೆ,

ಯಾರಾ ಆಕೀ ಮಾಯಿ, ನೀನು ನಂದೂ ಕತೀ ಬರೀತಿ; ಎಂದಳು.

ಅನಿಸಿದ್ರೆ ಬರೆಯೋದು ಬಿಡಿ.

ಯಪ್ಪಾ, ಬರಿಬೇಡಪಾ, ಆಕೀ ಮನೆಗೂ ಪತ್ರಿಕೆ ಬರ್ತೈತ್ ಇಲ್ಲೋ? ಅವಳು ಓದಿ, ಅದನ್ನ ಆಮೇಲ್ ನಾನಾ ಹೇಳಿ ಬರಿಸೀನಿ ಅಂತ ಊಟ ಕೊಡದೇ ಹೋದ್ರಾ!

ಅವಾಕ್ಕಾದೆ, ಕತೆ ಬರೆಯುವುದು ಕೂಡ ಪಾಪ ಕರ್ಮಗಳ ಪೈಕಿ ಒಂದಾಗಿರಬಹುದೇ ಎಂದು ಅನುಮಾನವಾಯಿತು.

******

ಕಳೆದ ಎಂಟು ತಿಂಗಳಿನಿಂದ ಬಹುತೇಕ ಬದುಕಿನ ಭಾಗವೇ ಆಗಿ ಹೋಗಿರುವ ಈ ಅಜ್ಜಿ ಇನ್ನು ಎರಡು ವಾರಗಳಲ್ಲಿ ಊರು ಸೇರಿಕೊಳ್ಳುತ್ತಾಳೆ.‌ ಅವಳ ಊರು ಬೆಳಗಾವಿ. ಮರಾಠಿ ಮಿಶ್ರಿತ ಕನ್ನಡದಲ್ಲಿ ಮಾತನಾಡುವ ಅಜ್ಜಿ ಯಾಕೋ ಕಳೆದ ಒಂದು ವಾರದಿಂದ ಮೊದಲಿನ ಉತ್ಸಾಹದಲ್ಲಿ ಮಾತನಾಡಿಲ್ಲ.

ಪ್ರವಾಸಕ್ಕೆ ಹೋದ ಬಾಲಕಿಗೆ ವೃದ್ಧಾಶ್ರಮದಲ್ಲಿ ಸಿಕ್ಕರು ಅಜ್ಜಿ: ಕಣ್ಣು ಒದ್ದೆ ಮಾಡುವ ಘಟನೆ

ತೀರಾ ಅನುಕೂಲವಂತರ ಮಗಳಾಗಿದ್ದ ಈ ಅಜ್ಜಿ ಒಂದು ಕಾಲಕ್ಕೆ ಬೆಳಗಾವಿಯಲ್ಲಿ ಸುಖದ ಬದುಕನ್ನು ಕಂಡುಂಡವಳು. ಈಗ ಆ ಯಾವ ಕುರುಹುಗಳು ಅವಳ ಸ್ಮೃತಿಯಲ್ಲೂ ಉಳಿದಿಲ್ಲ. ಎಪ್ಪತ್ತರ ಸಮೀಪದಲ್ಲಿದ್ದಾಳೆ. ಮದುವೆಯಾಗಿಲ್ಲ. ಇಂದಿಗೂ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಈಕೆ. ಬೆಳಗಾವಿಯ ದೊಡ್ಡ ಮನೆಗಳ ಪೈಕಿ ಅಜ್ಜಿಯ ಪಾಲಿ‌ನದೂ ಒಂದು ದೊಡ್ಡ ಮನೆ ಇದೆಯಂತೆ. ಆದರೆ ಅಲ್ಲಿ ಅವಳೊಂದಿಗೆ ಯಾರೆಂದರೆ ಯಾರೂ ಇಲ್ಲ.

ಎಂಟು ತಿಂಗಳ ಹಿಂದೆ ಸಣ್ಣ ಜ್ವರ ಎನ್ನುವ ಕಾರಣಕ್ಕೆ ಬೆಳಗಾವಿಯಿಂದ ಚಿಕಿತ್ಸೆಗೆಂದು ಬೆಂಗಳೂರಿಗೆ ಬಂದವಳು ಅಜ್ಜಿ. ಬೆಂಗಳೂರಿನಲ್ಲಿ ಒಡಹುಟ್ಟಿದ ತಮ್ಮನಿದ್ದಾನೆ ಎನ್ನುವುದು ಅವಳ ಗಾಢವಾದ ಅಷ್ಟೇ ಮೂರ್ಖತನದ ನಂಬಿಕೆ. ಮೊದಲು ಮನೆಯ ಎಲ್ಲರೂ ಉಪಚರಿಸಿದ್ದಾರೆ.‌ ಒಂದಿಷ್ಟೇ ಅದು ಮಾಸಿದೆ.

ಮೊದಲ ಒಂದಿಷ್ಟು ದಿನಗಳ ನಂತರ, ಖಾಯಿಲೆಯ ಮುದುಕಿ‌ ಮನೆಯೊಳಗೆ ಇರುವುದು ಬೇಡ ಎನ್ನುವುದು ತಕರಾರಾಗಿದೆ. ಕಡೆಗೆ ಅದರ ಫಲಿತಾಂಶವಾಗಿ ಮಹಡಿಯ ಸಣ್ಣ ರೂಮಿಗೆ ತಂದು ಬಿಡುವಲ್ಲಿ ತಕರಾರು ಶಮನವಾಗಿತ್ತು.

ಕೆಳಗಿನ ಮನೆಯ ಡೈನಿಂಗ್ ಟೇಬಲ್ ಮೇಲಿನ ಊಟ ಕ್ರಮೇಣವಾಗಿ ನಿಂತಿತು. ಇವಳಿಗಾಗೇ ಪ್ರತ್ಯೇಕ,‌ ಲೋಟ, ಬಟ್ಟಲು, ತಟ್ಟೆಗಳು ಬಂದವು. ಕೆಳಗಡೆಯಿಂದ ಒಂದು ಮುಷ್ಠಿ ಅನ್ನ, ಒಂದಿಷ್ಟು ಸಾಂಬಾರು ಬರಲು ಆರಂಭವಾಗಿತ್ತು. ‌ಕೆಲವೊಮ್ಮೆ ಮಧ್ಯಾಹ್ನ ಅಥವಾ ರಾತ್ರಿಯ ಊಟ ಅಗೋಚರ. ಹೀಗೆ ಬೆಳಗಾವಿಯ ದಿವಾನನ ಮಗಳು ಬಿಸಿಲಿನ ಝಳದಲ್ಲಿ ಕರಗುತ್ತಿದ್ದಾಗ ಪರಿಚಯವಾದಳು.

4 ದಿನಕ್ಕೊಮ್ಮೆ ಬ್ರೆಡ್, 2 ವರ್ಷದಿಂದ ಅದೇ ಬಟ್ಟೆ; ಭೂಮಿ ಮೇಲೆ ಹೀಗೊಂದು ನರಕ

ನಮ್ಮ‌ ನಡುವೆ ಕೆಳಗಡೆ ಮನೆಗೆ ತಿಳಿಯದಂತೆ ಗುಸುಗುಸು ಮಾತುಗಳು ಆರಂಭವಾಗಿ, ಕೆಲವೊಮ್ಮೆ ನಡುರಾತ್ರಿ ಬಾಗಿಲು ತಟ್ಟಿ ಎಬ್ಬಿಸಿ, ಟೇರೆಸ್ ಮೇಲೆ ಕೂತು ಹರಟೆ ಹೊಡೆಯುವವರೆಗೆ ವರ್ಗವಾಗಿತ್ತು. ಸಾಮಾನ್ಯವಾಗಿ ತಿಂಡಿಗೆ ಅವಲಕ್ಕಿ ಮಾಡುವಾಗ ನನಗೆ ಒಂದು ಮುಷ್ಠಿ ಅಣ್ಣನಿಗೆ ಒಂದು ಮುಷ್ಠಿ ಎನ್ನುವ ನಮ್ಮ ನಿತ್ಯದ ಲೆಕ್ಕಕ್ಕೆ ಅಜ್ಜಿಯ ಮುಷ್ಠಿ ಅವಲಕ್ಕಿಯೂ ಸೇರಿಕೊಂಡಿತ್ತು. ವಾಟ್ಸಪ್ ನಲ್ಲಿ, ಇವತ್ತು ನಾನು ಬರುವುದು ಲೇಟ್ ಆಗತ್ತೆ ಅಜ್ಜಿಗೆ ನೀನೇ ಬಾಳೆಹಣ್ಣು ತಂದು ಬಿಡು ಎನ್ನುವ ಮಾತುಗಳು‌ ನನ್ನ ಅಣ್ಣನ ನಡುವೆ ಆರಂಭವಾದವು. ಒಂದೇ ಒಂದು ಜತೆ ಊಟಕ್ಕೆ ಭಾನುವಾರಕ್ಕಾಗಿ ಮೂವರೂ ಕಾಯತೊಡಗಿದೆವು.

ನಾಳೆ ತಿಂಡಿಯನ್ನು ಅಜ್ಜಿಯೇ ಹೇಳುತ್ತಿದ್ದಳು.‌ ಕಸದ ಡಸ್ಟ್ ಬಿನ್ ತುಂಬಿಸಿ ಹೊರಗಿಟ್ಟು ಬಿಬಿಎಂಪಿ ಆಟೋ ಕಾಯುವ ಮೊದಲೇ, ತಿಳಿಯಂತೆ ಖಾಲಿ ಮಾಡಿಬಿಡುತ್ತಿದ್ದಳು. ಕೇಳಿದರೆ ಸಿಟ್ಟಾಗುತ್ತಿದ್ದಳು. ದಿನೇ ದಿನೇ ಕುಗ್ಗುತ್ತಲೇ ಇರುವ ಅಜ್ಜಿ ಎಲ್ಲಿ ಮಾಯಾವಾಗಿ ಬಿಡಬಹುದೇ ಎಂದು ಭಯಗೊಂಡ ದಿನಗಳು ಇವೆ.

****

ಅವರೆಲ್ಲರೂ ಕಾಶಿಗೆ ಹೊರಡುತ್ತಿದ್ದಾರೆ. ಅದಕ್ಕೆ ಇಡೀ ಬಿಲ್ಡಿಂಗ್ ಹೊಸ ಬಣ್ಣದಿಂದ ಕಂಗೊಳಿಸುತ್ತಿದೆ. ನಿನ್ನೆ ನನ್ನ ಪುಟ್ಟ ರೂಮಿಗೆ ಬಣ್ಣ ಬಳಿಯಲಾಯಿತು. ಒಬ್ಬನೇ ಇದ್ದವನು ರೂಮಿನ ಎಲ್ಲಾ ಸಾಮಾನುಗಳನ್ನು ಹೊರಗಿಟ್ಟಿದ್ದೆ, ಮಣರಾಶಿಯಷ್ಟು ಪುಸ್ತಕಗಳನ್ನು ಹೊರಗಿಟ್ಟು ಉಳಿದ ಕೆಲಸಗಳಲ್ಲಿ‌ ತೊಡಗಿಕೊಂಡಿದ್ದೆ. ಇದ್ದಕ್ಕಿದ್ದಂತೆ ಮಳೆ ಜಪ್ಪಿ‌ಬಂತು. ಇದ್ದ ಎರಡೇ ಕೈಗಳಲ್ಲಿ ಎಲ್ಲವನ್ನೂ ರಕ್ಷಿಸಿಕೊಳ್ಳುವುದು ಅಸಾಧ್ಯವಾಗಿತ್ತು.

ದೆಹಲಿ ಜನರ ಬಾಯಾರಿಕೆ ತಣಿಸುತ್ತಿರುವ ಬೆಂಗಳೂರು ಮೂಲದ 'ಭಗೀರಥ'

ಸಿಕ್ಕ ಪುಸ್ತಕಗಳನ್ನು ಅಜ್ಜಿಯ ರೂಮಿಗೆ ದಬದಬನೆ ಎಸೆದೆ, ಲಾಪ್ ಟಾಪ್, ಹಾಸಿಗೆ, ರೀಡಿಂಗ್ ಟೇಬಲ್ ನೆನೆದು ಹೋದವು. ಬಟ್ಟೆಗಳು ಒಜ್ಜೆಯಾದವು.‌ ನಾನು ಸುಮ್ಮನಾಗಿಹೋದೆ. ನಾನು ಒಬ್ಬನೇ ಕೆಲಸ ಮಾಡುತ್ತಿದ್ದನ್ನು ನೋಡಿದ್ದ ಅಜ್ಜಿ ಸುರಿಯುವ ಮಳೆಯಲ್ಲೇ ನೆಡೆದು ಬಂದು ಜತೆಯಾದಳು.‌ ಕರಿಯಾಕ್ಕಿಲ್ಲಾ ನೀನು ನನ್ನ, ಒಬ್ಬನಾ ಮಾಡಬೇಕು ಅಂತೀ ಎಂದು ಸಿಟ್ಟಾದಳು. ನಾನು ಸುಮ್ಮನಾದೇ. ತನ್ನ ಸವೆದ ಕೈಗಳಲ್ಲಿ ತಾನೇ ಎಲ್ಲ ಪುಸ್ತಕಗಳನ್ನು ತನ್ನ ರೂಮಿನಲ್ಲೇ ಜೋಡಿಸಿಕೊಂಡಳು. ಹಾಗೇ ಇಬ್ಬರು ಎಲ್ಲೋ ಮಲಗಿದೆವು ಕಳೆದವು. ರಾತ್ರಿಯೂ ಕಳೆದುಹೋಗಿತ್ತು.

*****

ಆಫೀಸಿಗೆ ಹೊರಡಲು ಕೆಳಗೆ ಬಂದೆ. ಬೆಳಗ್ಗೆ ಮನೆಯ ದೊಡ್ಡ ಗೇಟಿಗೆ To let ಬೋರ್ಡು ಹಾಕುತ್ತಿದ್ದರು.‌ ಮಾಮೂಲಿನ ದನಿಯಲ್ಲಿ ಯಾವ ರೂಮ್ ಖಾಲಿ ಇದೆ ಎಂದು ಕೇಳಿದೆ. ಮಾಲೀಕರ ಕೊನೆಯ ಮಗ ನಗುತ್ತಾ, ಅಜ್ಜಿ ಊರಿಗೆ ಹೋಗ್ತಾರೆ ಆ ರೂಮನ್ನ ಬಾಡಿಗೆಗೆ ಕೊಡಣಾ ಅಂತ ಎಂದರು ನಗುತ್ತಾ. ಏನೋ ನೆಪ ಕಂಡವನಂತೆ ತಿರುಗಿ ಮೆಟ್ಟಿಲು ಹತ್ತಿ, "ಅಜ್ಜಿ ನೀವು ಊರಿಗೆ ಹೋಗ್ತೀರಿ" ಎಂದು ಕೇಳಿದೆ.

"ಅವರು ಕಾಶಿಗೆ ಹೊಂಟಾರಲ್ಲ, ನಂಗಾ ಯಾರು ಊಟ ಹಾಕ್ತಾರಾ?, ಅದಕ್ಕಾ ಊರಿಗೆ ಹೋಗು ಅಂತ ಅಂದ್ರಾ," ಎಂದಳು ತಣ್ಣಗೆ.

ಒತ್ತರಿಸಿ ಬಂತು. ನಡೆದು ಕೆಳಗಡೆ ಬಂದೆ. ನಡೆದುಹೋಗುವಾಗ ಸರ್ಕಲ್ ನಲ್ಲಿ‌ ದಿನವೂ ಅಜ್ಜಿಗೆ ಬಾಳೆ ಹಣ್ಣು ಕೊಡುವ ಮಂಡಿಯವನು, ಈಶಾನ್ಯ ಸರ್ ನಿಮ್ಮಜ್ಜಿಗೆ ಇನ್ಮೇಲೆ ಒಳ್ಳೆ ಬಾಳೆಹಣ್ಣು ಸಿಗತ್ತೆ ಎಂದು ಕೂಗಿದ.

ಇನ್ಮೇಲೆ‌ ಬೇಡ ಬಿಡಿ ಎಂದು ಅಜ್ಜಿಯಷ್ಟೇ ತಣ್ಣಗೆ ಹೇಳಿದೆ. ಅವನು ನೋಡುತ್ತಲೇ ಇದ್ದ.

ಅಜ್ಜಿ ಹೊರಡುವುದಕ್ಕೆ ಇನ್ನು ಎರಡು ವಾರವಷ್ಟೇ ಬಾಕಿ ಇದೆ.‌

ಸಂಜೆ ನಾನು ಆಫೀಸು ಮುಗಿಸಿ ರೂಮಿಗೆ ಬರುವ ಹೊತ್ತಿಗೆ, ಮನೆಯ ದೊಡ್ಡ ಗೇಟಿನ ಮೇಲೆ To let ಬೋರ್ಡು ಬಿದ್ದಿರಬಹುದಾ ಎಂದು ಆಂತಕವಾಗುತ್ತಿದೆ.

English summary
Here is a story of a human interest story of a grandmother who is abandoned by her own family. She spent a comfortable life in Belagavi in her past and now she is leaving in a small hut like home in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X