ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಭಾಗದಲ್ಲಿ ಭಾರೀ ವಿರೋಧ, ಯಾಕೆ ?
Bengaluru Second Airport: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅತೀ ದೊಡ್ಡ ಸಂಕಷ್ಟ ಎದುರಾಗಿದೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರವು 5 ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ. ಈ ರೀತಿ ಶಾರ್ಟ್ ಲಿಸ್ಟ್ ಮಾಡಿರುವ ಜಾಗಗಳಲ್ಲಿ ಈಗಾಗಲೇ ಕೇಂದ್ರ ತಂಡವು ಪರಿಶೀಲನೆ ನಡೆಸಿದೆ. ಆದರೆ, ಇದೀಗ ಕನ್ನಡಿಗರಿಂದಲೇ ಈ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಎರಡನೇ ವಿಮಾನ ನಿಲ್ದಾಣದ ನಿರ್ಮಾಣವಾದರೆ ಭೂಮಿಯ ಬೆಲೆ ಹೆಚ್ಚಳವಾಗಲಿದೆ. ಅಲ್ಲದೇ ಹಲವು ಬಂಪರ್ ಲಾಭಗಳಿವೆ ಎನ್ನುವುದರ ಹೊರತಾಗಿಯೂ ಭೂಮಿಗೆ ಸಂಬಂಧಿಸಿದಂತೆ ದೊಡ್ಡ ತೊಡಕು ಸೃಷ್ಟಿಯಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ..
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲ್ಲೇ ಇವೆ. ಇದೀಗ ಭೂಮಿಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಎದುರಾಗಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಮ್ಮ ಜಿಲ್ಲೆಯಲ್ಲಿ ಮಾಡಿ ಎಂದು ಹಲವು ಜಿಲ್ಲೆಗಳಲ್ಲಿನ ರೈತರು ಒತ್ತಾಯ ಮಾಡುತ್ತಿರುವ ಸಂದರ್ಭದಲ್ಲಿಯೇ... ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಾರ್ಟ್ ಲಿಸ್ಟ್ ಆಗಿರುವ ಜಾಗದಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಯಾವ ಭಾಗದಲ್ಲಿ ಭೂಮಿಗೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತವಾಗುತ್ತಿದೆ ಎನ್ನುವ ಮಾಹಿತಿ ನೋಡೋಣ...

ನಗರದ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಭೂಮಿಯನ್ನು ನೀಡಲು ಸಾಧ್ಯವಿಲ್ಲ ಎಂದು ರೈತರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಮನೆ ಹಾಗೂ ಜಮೀನು ಉಳಿಸಿಕೊಳ್ಳುವುದಕ್ಕೆ ಒಂದೆಡೆ ಸೇರಿ ಹಲವು ಹಳ್ಳಿಗಳ ರೈತರು ಮತ್ತು ರೈತ ಮುಖಂಡರು ಸಭೆ ಮಾಡಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
ವಿಮಾನ ನಿಲ್ದಾಣಕ್ಕೆ ಒಟ್ಟು 5 ಜಾಗಗಳು ಪ್ರಾಥಮಿಕ ಹಂತದಲ್ಲಿ ಶಾರ್ಟ್ ಲಿಸ್ಟ್ ಆಗಿವೆ. ಅವುಗಳಲ್ಲಿ ನೆಲಮಂಗಲ - ಕುಣಿಗಲ್ ರಸ್ತೆಯ ಎರಡು ಜಾಗಗಳು ಸೇರಿವೆ. ಇಲ್ಲಿ ಕೇಂದ್ರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ವರದಿಯನ್ನೂ ಸಲ್ಲಿಕೆ ಮಾಡಿದೆ. ಆದರೆ, ಇದೀಗ ನೆಲಮಂಗಲ ವಿಧಾನಸಭೆ ಕ್ಷೇತ್ರದ ಪೆಮ್ಮನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ನೂರಾರು ರೈತರ ಸಭೆ ಮಾಡಿದ್ದಾರೆ.
ಆಸ್ತಿ ಕಳೆದುಕೊಳ್ಳುವ ಆತಂಕ!
ಇನ್ನು ಈ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ, ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಮನೆ ಹಾಗೂ ಕೃಷಿ ಭೂಮಿಯನ್ನು ಕಳೆದುಕೊಳ್ಳಲಿದ್ದೇವೆ. ಈ ಭಾಗದ ದೇವಾಲಯಗಳು ಸೇರಿದಂತೆ ನಮ್ಮ ಅಸ್ಥಿತ್ವಕ್ಕೆ ಧಕ್ಕೆ ಬರಲಿದೆ ಎನ್ನುವುದು ಈ ಭಾಗದ ಜನ ಹಾಗೂ ರೈತರ ಆತಂಕವಾಗಿದೆ. ಹೀಗಾಗಿ, ನೂರಾರು ಜನ ರೈತರು ಒಂದೆಡೆ ಸೇರಿ ಈ ಸಂಬಂಧ ಸಭೆ ಮಾಡಿದ್ದಾರೆ. ಈ ಭಾಗವೇ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತಿಮವಾದರೆ, ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಹಾಗೂ ಸರ್ಕಾರದ ಮೇಲೆ ಯಾವ ರೀತಿ ಒತ್ತಡ ಹೇರಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಒಂದಾದ ರೈತರು: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಈ ಭಾಗದ ರೈತರು ಒಂದಾಗಿದ್ದಾರೆ. ರೈತರು ತಮ್ಮ ಮನೆ, ಜಾಗ ಹಾಗೂ ಆಸ್ತಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದು, ಇದನ್ನು ವಿರೋಧಿಸಿ ಒಂದೆಡೆ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications