E Khata: ಬೆಂಗಳೂರಿನ ಈ ಭಾಗದಲ್ಲಿ ಬೃಹತ್ ಇ - ಖಾತಾ ಮೇಳ: ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್!
E Khata: ಬೆಂಗಳೂರಿನ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಬೆಂಗಳೂರಿನ ಆಸ್ತಿದಾರರು ಇ ಖಾತಾ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಇ - ಖಾತಾ ಮೇಳವನ್ನು ಆಯೋಜಿಸಲಾಗುತ್ತಿದೆ. ಇದೀಗ ಇ - ಖಾತಾ ಮೇಳವನ್ನು ಮತ್ತೊಂದು ಪ್ರಮುಖ ಪ್ರದೇಶದಲ್ಲಿ ಆಯೋಜನೆ ಮಾಡಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆರ್.ಟಿ ನಗರದ ಹೆಚ್.ಎಂ.ಟಿ ಮೈದಾನದಲ್ಲಿ 22 ಹಾಗೂ 23ನೇ ಜುಲೈ 2025 ರಂದು(ಮಂಗಳವಾರ ಮತ್ತು ಬುಧವಾರ) 2 ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ "ಬೃಹತ್ ಇ-ಖಾತಾ ಮೇಳ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಬಿ.ಎಸ್. ಸುರೇಶ್(ಭೈರತಿ) ಅವರು 22ನೇ ಜುಲೈ 2025 ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 3ನೇ ಅಕ್ಟೋಬರ್ 2024 ರಿಂದ ಸಾರ್ವಜನಿಕರಿಗೆ ಇ-ಖಾತಾ ನೀಡುವ ಬೃಹತ್ ಕಾರ್ಯವು ಪ್ರಾರಂಭವಾಗಿ ಈವರೆಗೆ ಒಟ್ಟು ಪಾಲಿಕೆಯ 25 ಲಕ್ಷ ಸ್ವತ್ತುಗಳ ಪೈಕಿ ಈಗಾಗಲೇ 6.5 ಲಕ್ಷ ಸ್ವತ್ತುಗಳಿಗೆ ಖಾತಾದಾರರು ಅಂತಿಮ ಇ-ಖಾತಾವನ್ನು ಪಡೆದಿದ್ದಾರೆ.
* ಪೂರ್ವ ವಲಯದಲ್ಲಿ ಒಟ್ಟು 3,45,858 ಸ್ವತ್ತುಗಳ ಪೈಕಿ 55,917 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ.
* ಹೆಬ್ಬಾಳ ವಿಭಾಗದಲ್ಲಿ ಒಟ್ಟು 50,000 ಸ್ವತ್ತುಗಳ ಪೈಕಿ 13,000 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದ್ದು, ಉಳಿದಂತೆ 37,000 ಸ್ವತ್ತುಗಳ ಮಾಲೀಕರು ಅಂತಿಮ ಇ-ಖಾತಾವನ್ನು ಪಡೆಯಬೇಕಾಗಿರುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೃಹತ್ ಇ- ಖಾತಾ ಮೇಳದಲ್ಲಿ ಇ-ಖಾತೆ ಪಡೆಯಲು ತರಬೇಕಾದ ದಾಖಲೆಗಳು:
* ನೋಂದಾಯಿತ ಆಸ್ತಿ ಪತ್ರ
* ಆಸ್ತಿ ತೆರಿಗೆ ರಶೀದಿ
* ಬೆಸ್ಕಾಂ ಮೀಟರ್ ಸಂಖ್ಯೆ
* ಆಸ್ತಿಯ GPS ಸಹಿತ ಫೋಟೋ
* ಆಧಾರ್ ಕಾರ್ಡ್ ಪ್ರತಿ
* ಇಸಿ(ಖುಣಭಾರ ಪತ್ರ)
* ಖಾತಾ ಪ್ರತಿ
ಇನ್ನು ಸಾರ್ವಜನಿಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು, ಅಗತ್ಯ ದಾಖಲೆಗಳನ್ನು ಮೇಳಕ್ಕೆ ತಂದು ತಮ್ಮ ಆಸ್ತಿಯ ಇ-ಖಾತಾವನ್ನು ಪಡೆದುಕೊಳ್ಳಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇ-ಖಾತಾ ಮೇಳ ಆಯೋಜಿಸಿ: ಇನ್ನು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾರ್ವಜನಿಕರಿಗೆ ಹಾಗೂ ಆಸ್ತಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಇ-ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಈ ಸಂಬಂಧ ಮಹದೇವಪುರ ವಲಯ ವ್ಯಾಪ್ತಿಯಲ್ಲಿಯ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲಿ 'ಬೃಹತ್ ಇ-ಖಾತಾ ಮೇಳ' ಆಯೋಜಿಸಲು ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ.












Click it and Unblock the Notifications