ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ, ಹೈಕೋರ್ಟ್ ಗರಂ

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯದ ಕುರಿತು ಸ್ವಯಂ ಪ್ರೇರಿತ ದೂರನ್ನು ಹೈಕೋರ್ಟ್ ದಾಖಲಿಸಿಕೊಂಡಿದೆ. ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಸರ್ಕಾರ ನಿಶ್ಯಬ್ದ ವಲಯ ಎಂದು ಗುರುತಿಸಿದ ಸ್ಥಳಗಳಲ್ಲಿಯೇ ಹೆಚ್ಚಿನ ಶಬ್ದ ಮಾಲಿನ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸುವುದು ಹೇಗೆ? ಎಂದು ಸರ್ಕಾರವನ್ನು ಪ್ರಶ್ನಿಸಿತು. ನಿಶ್ಯಬ್ದ ವಲಯದಲ್ಲಿ ಕರ್ಕಶ ಶಬ್ದ ಮಾಡುವ ವಾಹನಗಳ ಮಾಲೀಕರಿಗೆ ದಂಡ ಹಾಕಬೇಕು. ಆ ಮೂಲಕ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ಎಷ್ಟು ಪ್ರಕರಣ ದಾಖಲಿಸಲಾಗಿದೆ? ಎಷ್ಟು ದಂಡ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ.
ಪೊಲೀಸರು ಪ್ರತಿಮೆಯಲ್ಲ : ಕಾನೂನಿನ ಅಸ್ತ್ರವನ್ನು ನೀವು ಸರಿಯಾಗಿ ತೋರಿಸಿದರೆ, ಆಗ ಸಾಮಾನ್ಯ ಪೊಲೀಸ್ ಪೇದೆಯೂ ದೂರು ದಾಖಲಿಸಿಕೊಂಡು ದಂಡ ವಿಧಿಸುತ್ತಾನೆ. ಇಲ್ಲವಾದರೆ ಪ್ರತಿಮೆಯಂತೆ ಸುಮ್ಮನೆ ನಿಂತಿರುತ್ತಾನೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಶಬ್ದ ಮಾಲಿನ್ಯ ನಿಯಂತ್ರಣ ಮಾಡಲು ಸರ್ಕಾರ ವಿಫಲವಾದರೆ, ಸರ್ಕಾರ ವಿರುದ್ಧ ನ್ಯಾಯಾಂಗ ನಿಂದನೆ ದುರು ದಾಖಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, ಕೆಲವು ಭಾರಿ ವಾಹನಗಳು ಬ್ರೇಕ್ ಹಾಕಿದಾಗ ನಾನಾ ಬಗೆಯ ವಿಚಿತ್ರ ಕರ್ಕಶ ಶಬ್ದ ಬರುತ್ತದೆ. ಎಷ್ಟೋ ಸಾರಿ ಆಂಬ್ಯುಲೆನ್ಸ್ ಚಾಲಕರು ಒಳಗೆ ರೋಗಿ ಇಲ್ಲದಿದ್ದರೂ, ಸೈರನ್ ಹಾಕಿಕೊಂಡು ತಿರುಗಾಡುತ್ತಾರೆ ಎಂಬ ಅಂಶವನ್ನು ಸರ್ಕಾರದ ಗಮನಕ್ಕೆ ತಂದರು.
ಶಬ್ದ ಮಾಲಿನ್ಯ ತಡೆಗಟ್ಟಲು ನಿಯಮ ರೂಪಿಸಿ ಎಂದು ಸರ್ಕಾರಕ್ಕೆ ಸೂಚಿಸಿ ಪ್ರಕರಣ ವಿಚಾರಣೆಯನ್ನು ಅ.21ಕ್ಕೆ ಮುಂದೂಡಲಾಗಿದೆ. ಕೋರ್ಟ್ ನಿರ್ದೇಶನದಂತೆ ಇನ್ನು ನಿಶ್ಯಬ್ದ ವಲಯದಲ್ಲಿ ಹಾರ್ನ್ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ.












Click it and Unblock the Notifications