ಹನಿಟ್ರ್ಯಾಪ್: 'ನ್ಯಾಯಾಧೀಶರು, ಕೇಂದ್ರ ಸಚಿವರು ಹೆಸರು: CBI ಇಲ್ಲವೇ ನ್ಯಾಯಾಂಗ ತನಿಖೆ ಆಗಲಿ'
ಬೆಂಗಳೂರು, ಮಾರ್ಚ್ 21: ವಿಧಾನಮಂಡಲ ಕಲಾಪದಲ್ಲಿ ಹನಿಟ್ರ್ಯಾಪ್ ಕುರಿತು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಪ್ರಸ್ತಾಪಿಸಿದ್ದಾರೆ. ರಾಜ್ಯದ ಸುಮಾರು 48 ಮಂದಿ ನಾಯಕರು ಈ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದಾರೆ. ಪೆನ್‌ಡ್ರೈವ್ ಸಿಡಿ ಮಾಡಿಟ್ಟುಕೊಳ್ಳಲಾಗದೆ ಎಂದಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಹನಿಟ್ರ್ಯಾಪ್ ಮಾಡಿದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕರು ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ವಿಪಕ್ಷ ನಾಯಕರ ಆರ್.ಅಶೋಕ್, ಸಚಿವ ಕೆ.ಎನ್.ರಾಜಣ್ಣ ಅವರು ವಿಧಾನಸಭೆಯಲ್ಲಿ ಎಲ್ಲರ ಮುಂದೆ ಹನಿಟ್ರ್ಯಾಪ್ ಬಗ್ಗೆ ಹೇಳಿದ್ದಾರೆ. ಅವರನ್ನು ಹನಿಟ್ರ್ಯಾಪ್ ಮಾಡಿದ ಪ್ರಕರಣ ಸೂಕ್ತ ತನಿಖೆ ನಡೆಯಬೇಕು. ಇದರಲ್ಲಿ ನ್ಯಾಯಾಧೀಶರು, ಕೇಂದ್ರದ ನಾಯಕರ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೀಗೆ ಹೇಳಿ ಎಂದು ರಾಜಣ್ಣ ಅವರಿಗೆ ಸೂಚನೆ ನೀಡಿ ಕಳಿಸಿದ್ದಾರೆ ಎಂದು ಗೊತ್ತಾಗಿದೆ. ಇಷ್ಟೆಲ್ಲ ಆದ ಮೇಲೂ ಇದನ್ನು ತನಿಖೆ ಮಾಡದೆ ಸುಮ್ಮನೆ ಬಿಡಬಾರದು ಎಂದು ಹೇಳಿದರು.

ಸಚಿವ ರಾಜಣ್ಣ ಅವರು ಪರಿಶಿಷ್ಟ ವರ್ಗಕ್ಕೆ ಸೇರಿದವರು. ಒಂದು ಕಡೆ ಕಾಂಗ್ರೆಸ್ ಸರ್ಕಾರ ದಲಿತರ ಹಣವನ್ನು ಗ್ಯಾರಂಟಿಗೆ ದುರ್ಬಳಕೆ ಮಾಡುತ್ತಿದೆ. ಮತ್ತೊಂದು ಕಡೆ ಪರಿಶಿಷ್ಟ ವರ್ಗದವರ ಅಹವಾಲುಗಳನ್ನು ಆಲಿಸುತ್ತಿಲ್ಲ. ಕೂಡಲೇ ಸರ್ಕಾರ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಕೆ.ಎನ್.ರಾಜಣ್ಣ ಸದನದಲ್ಲೇ ಮಾತಾಡಿದ್ದಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರ ಹೇಳಿಕೆ ಈಗ ಸದನದ ಆಸ್ತಿಯಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಹನಿಟ್ರ್ಯಾಪ್ ನಡೆಯುತ್ತಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಮರ ಹಲಾಲ್ ಬಜೆಟ್ ಮಂಡಿಸಿದ್ದಾರೆ. ಹಿಂದುಳಿದ ಜನರ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡಲಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ. ಬಿಜೆಪಿಯಲ್ಲಿ ಯಾರೂ ಸಂಧಾನಕ್ಕೆ ಸಿದ್ಧವಿಲ್ಲ ಎಂದರು.

ಶುಕ್ರವಾರ ಸಹ ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ಕುರಿತು ಸಾಕಷ್ಟು ಕೋಲಾಹಲ ಸೃಷ್ಟಿಯಾಯಿತು. ಬಿಜೆಪಿ ನಾಯಕರು ಆಡಳಿತ ಪಕ್ಷದ ಮೇಲೆ ಮುಗಿ ಬಿದ್ದರು. ಸಭಾಪತಿ ಯು.ಟಿ ಖಾದರ್ ಅವರತ್ತ ವಿಪಕ್ಷ ನಾಯಕರು ಹಾಳೆ ತೂರಿದರು. ಹೈಡ್ರಾಮಾವೇ ನಡೆಯಿತು. ಕಲಾಪದಲ್ಲಿ ಎದ್ದು ನಿಂತು ಪ್ರಕರಣ ತನಿಖೆಗೆ ನೀಡಬೇಕು ಎಂದರು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹನಿಟ್ರ್ಯಾಪ್‌ಗೆ ಕಾರಣರಾದವರನ್ನು ವಜಾಗೊಳಿಸಬೇಕು. ಸದನದಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಗಳು ಉತ್ತರಿಸಬೇಕು. ಸದನದ ಮೌಲ್ಯ ಎತ್ತಿಹಿಡಿಯವುಂತೆ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್ ಅವರ ಆಗ್ರಹಿಸಿದರು. ಬಳಿಕ ಮುಖ್ಯಮಂತ್ರಿಗಳು ಹನಿಟ್ರ್ಯಾಪ್ ವಿಚಾರವಾಗಿ ಯಾರನ್ನು ರಕ್ಷಣೆ ಮಾಡುವುದಿಲ್ಲ ಪ್ರಶ್ನೆಯೇ ಇಲ್ಲ ಎಂದರು.












Click it and Unblock the Notifications