ಹುಡುಗಿ "Hi" ಸಂದೇಶಕ್ಕೆ 5 ಲಕ್ಷ ರೂ. ಕೊಟ್ಟ ಬ್ಯಾಂಕ್ ಉದ್ಯೋಗಿಗೆ ಆಗಿದ್ದೇನು ?
ಬೆಂಗಳೂರು, ನ. 04: ಬಹುತೇಕರ ಮೊಬೈಲ್‌ಗೆ ಅಪರಿಚಿತರಿಂದ "Hi" ಎಂಬ ಸಂದೇಶ ಬರುತ್ತಲೇ ಇರುತ್ತವೆ. ಅಪರಿತರು ಕಳಿಸುವ ಸಂದೇಶಗಳಿಗೆ ಉತ್ತರಿಸಿ ಅವರ ಜತೆ ಸಂವಹನ ಮಾಡಿದರೆ ಹನಿ ಟ್ರ್ಯಾಪ್ ಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಅಪಾಯವಿರುತ್ತದೆ! ಹೌದು. ಬೆಂಗಳೂರಿನಲ್ಲಿ ಅಪರಿಚಿತರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುವ ಹೊಸ ಜಾಲ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಈ ಜಾಲಕ್ಕೆ ಬಿದ್ದ ಬ್ಯಾಂಕ್ ಉದ್ಯೋಗಿಯ ಬಳಿ ಐದು ಲಕ್ಷ ರೂ. ಪೀಕಿದ್ದ ಹನಿಟ್ರ್ಯಾಪ್ ಗ್ಯಾಂಗ್‌ನ ಕಿಂಗ್‌ಪಿನ್‌ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ಆತನ ಹೆಸರು ದ್ವಾರಕಾನಾಥ್. ಬ್ಯಾಂಕ್ ಉದ್ಯೋಗಿ. ಕೆಲ ದಿನಗಳ ಹಿಂದೆ ದ್ವಾರಕಾನಾಥ್ ಮೊಬೈಲ್‌ಗೆ 'ಹಾಯ್' ಎಂಬ ಸಂದೇಶ ಬಂದಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ದ್ವಾರಕಾನಾಥ್ ಜತೆ ಯುವತಿಯೊಬ್ಬಳು ಚಾಟ್ ಮಾಡುತ್ತಿದ್ದಳು. ಇಬ್ಬರ ನಡುವೆ ವಾಟ್ಸಪ್ ಸಂದೇಶ ರವಾನೆಯಾಗುತ್ತಿದ್ದವು. ನನ್ನ ಬಳಿ ಮಾತನಾಡುತ್ತಿರುವುದು ಹುಡುಗಿಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ದ್ವಾರಕಾನಾಥ್ ಕರೆ ಮಾಡಿದ್ದ. ಆ ಕಡೆಯಿಂದ ಯುವತಿಯೇ ಮೆಲು ಧ್ವನಿಯಲ್ಲಿ ಮಾತನಾಡಿದ್ದಳು.
ಕಳೆದ ಅ. 10 ರಂದು ಆ ಅಪರಿಚಿತ ಯುವತಿ ಕರೆ ಮಾಡಿ, ವೀರಣ್ಣಪಾಳ್ಯದ ಹೋಟೆಲೊಂದರ ಹತ್ತಿರ ಬರುವಂತೆ ಹೇಳಿದರು. ನಾವಿಬ್ಬರು ಭೇಟಿ ಮಾಡೋಣ ಬನ್ನಿ ಎಂದು ಕರೆದಿದ್ದಳು. ತನಗೆ ಐವತ್ತು ವರ್ಷ ಇದ್ದರೂ ಯುವತಿಯೊಬ್ಬಳು ಸಿಕ್ಕಳಲ್ಲ ಎಂಬ ಖುಷಿಯಿಂದ ದ್ವಾರಕಾನಾಥ್ ಹೋಟೆಲ್ ಬಳಿ ಧಾವಿಸಿದರು. ಇಬ್ಬರೂ ಹೋಟೆಲ್ ಬಳಿ ಕೆಲ ಕಾಲ ಮಾತನಾಡುತ್ತಾ ಕುಳಿತಿದ್ದರು. ಬಳಿಕ ಅದೇ ಹೋಟೆಲ್‌ನಲ್ಲಿ ಕೊಠಡಿಯೊಂದನ್ನು ಬುಕ್ ಮಾಡಿ ಏಕಾಂತವಾಗಿ ಖಾಸಗಿ ಕ್ಷಣ ಕಳೆಯಲು ಮುಂದಾಗಿದ್ದರು.
ಇದೇ ವೇಳೆ ಪೊಲೀಸರ ಸೋಗಿನಲ್ಲಿ ರೂಮ್‌ಗೆ ನುಗ್ಗಿದ ಮೂವರು, ನಾವು ಪೊಲೀಸರು, ನೀನು ಮಾದಕ ವಸ್ತು ಮಾರುತ್ತಿದ್ದೀಯ, ಇಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದೀಯ ಎಂದು ಹೆದರಿಸಿದ್ದಾರೆ. ದ್ವಾರಕಾನಾಥ್‌ನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೇ ವೇಳೆ ದ್ವಾರಕಾನಾಥ್ ನನ್ನು ಬಂಧಿಸುವುದಾಗಿ ಹೆದರಿಸಿ ಆತನ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಮೂರು ಲಕ್ಷ ರೂ. ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಆ ಬಳಿಕ ಎರಡು ಲಕ್ಷ ರೂ. ಸೇರಿ ಒಟ್ಟು ಐದು ಲಕ್ಷ ರೂ. ಹಣ ಕಸಿದುಕೊಂಡು, ಖಾಸಗಿ ಹೋಟೆಲ್ ನ ರೂಮ್ ನಲ್ಲಿಯೇ ಕೂಡಿ ಹಾಕಿ ಪರಾರಿಯಾಗಿದ್ದಾರೆ. ಈ ಕುರಿತು ದೂರು ನೀಡಲು ಮುಜಗರಕ್ಕೆ ಒಳಗಾಗಿ ದ್ವಾರಕಾನಾಥ್ ವಾಪಸು ಮನೆಗೆ ತೆರಳಿದ್ದರು. ಮೂರು ದಿನದ ಬಳಿಕ ಕೃತ್ಯ ನಡೆದ ಬಗ್ಗೆ ಗೋವಿಂದಪುರ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಓರ್ವ ಕಿಂಗ್ ಪಿನ್ ಸಿಕ್ಕಿಬಿದ್ದಿದ್ದು, ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಮಹಮದ್ ಬಂಧಿತ ಹನಿಟ್ರ್ಯಾಪ್ ಕಿಂಗ್ ಪಿನ್ .ಆರೋಪಿ ಉತ್ತರ ಭಾರತೀಯ ಮೂಲದ ಯುವತಿಯರ ಸೋಗಿನಲ್ಲಿ ಹಿರಿಯ ವಯಸ್ಕರರಿಗೆ ಗಾಳ ಹಾಕುತ್ತಿದ್ದರು. ಯುವತಿಯ ಜತೆ ಮಾತನಾಡಿಸಿ, ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಸುಮಾರು 20 ಕ್ಕೂ ಹೆಚ್ಚು ಮಂದಿಗೆ ಈ ರೀತಿ ಸುಲಿಗೆ ಮಾಡಿರುವುದು ಗೊತ್ತಾಗಿದ್ದು, ತಲೆ ಮರೆಸಿಕೊಂಡಿರುವ ಯುವತಿ ಹಾಗೂ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಎಚ್ಚರಿಕೆ: ಅವಿವಾಹಿತರಿಗೆ, ಖಾಸಗಿ ಕಂಪನಿ ಉದ್ಯೋಗಿಗಳಿಗೆ, ಮಧ್ಯ ವಯಸ್ಕರರಿಗೆ ಯುವತಿಯರ ಸೋಗಿನಲ್ಲಿ ಸಂದೇಶ ಕಳುಹಿಸಿ ಹಣ ಸುಲಿಗೆ ಮಾಡುವ ಜಾಲ ಸಕ್ರಿಯವಾಗಿದೆ. ಮಾತ್ರವಲ್ಲ ಸಾಮಾಜಿಕ ಜಾಲ ತಾಣದಲ್ಲಿ ಕೂಡ ಎಸ್ಕಾರ್ಟ್ ಸೇವೆ ಹೆಸರಿನಲ್ಲಿ ದೋಖಾ ಮಾಡುವ ಗ್ರೂಪ್ ಗಳು ಸಕ್ರಿಯವಾಗಿವೆ. ಮಾನಿನಿಯರ ಆಸೆಗೆ ಬಿದ್ದರೆ ಒಮ್ಮೆ ಹನಿಟ್ರ್ಯಾಪ್ ಗೆ ಒಳಗಾಗಿ ಹಣ ಕಳೆದುಕೊಳ್ಳಬೇಕಾದೀತು. ಇಂತಹ ಪ್ರಕರಣದಲ್ಲಿ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಅಂಜಿ ಬಹುತೇಕ ಮಂದಿ ದೂರು ನೀಡಲು ಮುಂದಾಗುವುದಿಲ್ಲ. ಹೀಗಾಗಿ ಇಂತಹ ಜಾಲಗಳಿಗೆ ಬೀಳದಂತೆ ಎಚ್ಚರಿಕೆ ವಹಿಸುವುದೇ ಏಕೈಕ ಪರಿಹಾರ ಮಾರ್ಗ. ಒಂದು ವೇಳೆ ಜಾಲಕ್ಕೆ ಬಿದ್ದರೂ ಯಾವ ಮರ್ಯಾದೆಗೂ ಅಂಜದೇ ಪೊಲೀಸರಿಗೆ ದೂರು ನೀಡಬೇಕು. ಘಟನೆ ನಡೆದ ಕೂಡಲೇ ದೂರು ನೀಡಿದರೆ, ಆರೋಪಿಗಳ ಪತ್ತೆಗೆ ಪೊಲೀಸರಿಗೆ ಅನುಕೂಲವಾಗಲಿದೆ.