ಮೆಟ್ರೋದಲ್ಲಿ ಹಿಂದಿ - ಉರ್ದು ಭಾಷೆ ಬಳಕೆ: ಕನ್ನಡಿಗರು ಹೇಳಿದ್ದೇನು ?
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಲಾಗುತ್ತಿದೆ. ಹಿಂದಿ ಭಾಷೆಯ ಅಳವಡಿಕೆಯನ್ನು ವಿರೋಧಿಸಿ ಕನ್ನಡಿಗರು ಹಾಗೂ ಕನ್ನಡಪರ ಹೋರಾಟಗಾರರು ಬೃಹತ್ ಅಭಿಯಾನವನ್ನೇ ನಡೆಸಿದ್ದರು. ಅದರ ಪರಿಣಾಮವಾಗಿ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆ ಬಳಕೆ ಇಲ್ಲ.
ಇದು ಸುದೀರ್ಘ ಹೋರಾಟವಾಗಿತ್ತು. ಆದರೆ, ಇದೀಗ ನೆರೆಯ ತೆಲಂಗಾಣದ ರಾಜಧಾನಿ ಹೈದರಾಬಾದ್ ಮೆಟ್ರೋದಲ್ಲಿ ಹಿಂದಿ ಹಾಗೂ ಉರ್ದು ಭಾಷೆಯನ್ನೂ ಬಳಸಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡಿಗರು ಹಿಂದಿ - ಉರ್ದು ಹೇರಿಕೆ ಆಗದಂತೆ ನೋಡಿಕೊಂಡಿದ್ದೇವೆ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಬೆಂಗಳೂರು ನಮ್ಮ ಮೆಟ್ರೋದ ವಿಸ್ತೀರ್ಣ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಬೆಂಗಳೂರು ನಮ್ಮ ಮೆಟ್ರೋ ಬಳಸುವವರ ಸಂಖ್ಯೆ ಹೆಚ್ಚಳವಾಗಿದೆ. ಇದರೊಂದಿಗೆ ಬೆಂಗಳೂರಿಗರ ಸಂಚಾರ ಸಾರಥಿಯಾಗಿ ನಮ್ಮ ಮೆಟ್ರೋ ಬದಲಾಗಿದೆ.
ಬೆಂಗಳೂರಿನ ಮೆಟ್ರೋದಲ್ಲಿ ಈ ಮೊದಲು ಅಥವಾ ಪ್ರಾರಂಭದ ದಿನಗಳಲ್ಲಿ ಹಿಂದಿ ಭಾಷೆಯನ್ನು ಮೂರನೇ ಭಾಷೆಯನ್ನಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡಿಗರ ತೀವ್ರ ವಿರೋಧದ ನಂತರ ಹಿಂದಿ ಭಾಷೆ ಬಳಕೆಯನ್ನು ಕೈಬಿಡಲಾಗಿದೆ. ಇದೀಗ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಲಾಗುತ್ತಿದೆ. ನಾಮಫಲಕ ಹಾಗೂ ಪ್ರಮುಖ ಸೂಚನೆಗಳಲ್ಲೂ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.
ಇದೀಗ ತೆಲಂಗಾಣದ ಹೈದರಾಬಾದ್‌ನಲ್ಲಿ ಹಿಂದಿ - ಉರ್ದು ಭಾಷೆಗೆ ಪ್ರಾಧಾನ್ಯತೆ ಕೊಡಲಾಗಿದ್ದು. ಕನ್ನಡಿಗರು "ನಮ್ಮ ಮೆಟ್ರೋದಲ್ಲಿ ಕನ್ನಡ ಪ್ರಾಧಾನ್ಯತೆ"ಗೆ ನಡೆಸಿದ್ದ ತಮ್ಮ ಹೋರಾಟವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರು ಈ ಬೆಳವಣಿಗೆಗೆ ಹೇಳಿದ್ದೇನು, ಅಂದಿನ ಹೋರಾಟದ ನೆನಪಿನ ಬಗ್ಗೆ ಕನ್ನಡಿಗರು ಹೇಳಿದ್ದೇನು ಎನ್ನುವುದನ್ನು ನೋಡೋಣ.
ಮೆಟ್ರೋದಲ್ಲಿ ಹಿಂದಿ - ಉರ್ದು ಬಳಕೆ ಸೋಷಿಯಲ್ ಮೀಡಿಯಾ ಚರ್ಚೆ
ರಘು ಎನ್ನುವವರು ಜನರು ಹಿಂದಿ ಹೇರಿಕೆ ವಿರೋಧಿಸಿ ಏಕೆ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಶ್ನಿಸಿದವರಲ್ಲಿ ನಾನೂ ಒಬ್ಬನಾಗಿದ್ದೆ. ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಕನ್ನಡ ಅಸ್ತಿತ್ವದಲ್ಲಿತ್ತು, ಹಾಗಾದರೆ ಸಮಸ್ಯೆ ಏನು? ಕನ್ನಡಕ್ಕೆ ಸ್ಥಳವಿರುವವರೆಗೆ, ಎಲ್ಲವೂ ಸರಿಯಾಗಿಯೇ ಇತ್ತು.
ಆದರೆ ಕೋವಿಡ್ ಸಮಯದಲ್ಲಿ ಮತ್ತು ನಂತರ, ಕೇಂದ್ರ ಸರ್ಕಾರಿ ಕಚೇರಿಗಳ ನಾಮಫಲಕಗಳಲ್ಲಿ ಹಿಂದಿ ಹೇಗೆ ಕನ್ನಡದ ಜಾಗವನ್ನು ಸ್ಥಿರವಾಗಿ ತಿನ್ನುತ್ತಿದೆ ಎಂಬುದನ್ನು ನಾನು ಗಮನಿಸಲು ಪ್ರಾರಂಭಿಸಿದೆ. ಜೊತೆಗೆ ಹಿಂದಿ ಪರವಾಗಿ ಮತ್ತು ಇತರ ಭಾರತೀಯ ಭಾಷೆಗಳ ವಿರುದ್ಧ ಸ್ಪಷ್ಟವಾದ ಪಕ್ಷಪಾತವೂ ಇದೆ ಎನ್ನುವುದು ತಿಳಿಯಿತು ಎಂದಿದ್ದಾರೆ.
ತೆರಿಗೆ ವಿಕೇಂದ್ರೀಕರಣ ಪಕ್ಷಪಾತವು ಗಾಯಕ್ಕೆ ಉಪ್ಪು ಸೇರಿಸುತ್ತಿದೆ, ಹಿಂದಿ ಮಾತನಾಡುವ ರಾಜ್ಯಗಳಿಗೆ ಹೆಚ್ಚು ಲಾಭ ಸಿಗುತ್ತಿದೆ ಮತ್ತು ಕೇಂದ್ರ ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಕ್ಕಾಗಿ ದಕ್ಷಿಣ ರಾಜ್ಯಗಳಿಗೆ ದಂಡ ವಿಧಿಸುತ್ತದೆ.
ಇದು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸುವ ಬಗ್ಗೆ ಅಲ್ಲ. ನಿಜವಾದ ಸಮಸ್ಯೆ ಭಾರತ ಕೇಂದ್ರ ಸರ್ಕಾರದ ಬಳಿ ಇದೆ. ನಾವು ಕಠಿಣವಾಗಿ ಹಿಂದಕ್ಕೆ ತಳ್ಳುವ ಮತ್ತು ನಮ್ಮ ವಿರುದ್ಧದ ಈ ಅನ್ಯಾಯಗಳನ್ನು ರದ್ದುಗೊಳಿಸುವ ಸಮಯ ಇದು ಎಂದು ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರಿಗೆ ಧನ್ಯವಾದವನ್ನೂ ಹೇಳಿದ್ದಾರೆ.
Hyderabad is purely is dominated by Hindi and Muslim people
— ꜱᴘɪᴅᴇʏツ (@Spidey_RCB) December 13, 2025
Thanks to Kannada horatagararu for saving Karnataka🙏 pic.twitter.com/vcQyG8t2ix
ನಾಲ್ಕು ಭಾಷೆ ಬಳಕೆ: ಇನ್ನು ಹೈದರಾಬಾದ್ ಮೆಟ್ರೋದ ಭಾಷಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಲವರು ಹೈದರಾಬಾದ್ ಮೆಟ್ರೋದಲ್ಲಿ ತೆಲುಗು, ಹಿಂದಿ, ಇಂಗ್ಲಿಷ್ ಹಾಗೂ ಉರ್ದು ನಾಲ್ಕು ಭಾಷೆಗಳನ್ನು ಬಳಸಲಾಗುತ್ತಿದೆ. ಅನವಶ್ಯಕವಾದ ವಿವಾದ ಸೃಷ್ಟಿ ಮಾಡುವ ಅಗತ್ಯ ಇಲ್ಲ ಎಂದೂ ಪ್ರತಿಪಾದಿಸಿದ್ದಾರೆ. ಕನ್ನಡಿಗರು ಹೋರಾಟ ಮಾಡದೆ ಇದ್ದರೆ ಇಂದು ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿರುತ್ತಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications