ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಹಿಜಾಬ್ ಪ್ರತಿಭಟನೆ ತೀವ್ರ: ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 8: ಕರ್ನಾಟಕದ ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸುವಂತೆ ರಾಜ್ಯ ಸರ್ಕಾರದ ಆದೇಶದ ಹೊರತಾಗಿಯೂ, ಹಿಜಾಬ್ ಪರ ಮತ್ತು ವಿರುದ್ಧ ಸೋಮವಾರ ರಾಜ್ಯದಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ.

ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶಿಸಿದ್ದರೂ ರಾಜ್ಯದ ಅನೇಕ ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಬಿಸಿ ಇನ್ನೂ ಹೆಚ್ಚಾಗಿದೆ. ಇದರ ನಡುವೆ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಹಿಜಾಬ್‌ಗೆ ಅನುಮತಿ ನೀಡುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಸೂಚಿಸಿರುವಂತೆ ಕೋರಿ ವಿದ್ಯಾರ್ಥಿನಿಯರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ತಕರಾರು ಅರ್ಜಿಗಳು ಇಂದು ವಿಚಾರಣೆಗೆ ಬರಲಿದ್ದು, ಎಲ್ಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.

Hijab Dispute: Petition To be Heard Karnataka High Court On Today


ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಸಮವಸ್ತ್ರದ ಬಗ್ಗೆ ಸರ್ಕಾರದ ಆದೇಶವನ್ನು ಪಾಲಿಸುವಂತೆ ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತ ಮಂಡಳಿಗಳಿಗೆ ಮನವಿ ಮಾಡಿದರೂ, ಉಡುಪಿಯ ಹಿಜಾಬ್ ವಿವಾದದ ಮೇಲಿನ ಗಲಾಟೆ ರಾಜ್ಯದ ಇತರ ಭಾಗಗಳಿಗೆ ಹರಡಿದೆ.

ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ಮುಂದುವರಿಸಿದ್ದು, ಮಂಗಳವಾರ ಕರ್ನಾಟಕ ಹೈಕೋರ್ಟ್ ಈ ಸಂಬಂಧ ಅರ್ಜಿ ವಿಚಾರಣೆ ನಡೆಸಲಿದೆ. ವಿದ್ಯಾರ್ಥಿನಿಯರು ಹಿಜಾಬ್‌ನೊಂದಿಗೆ ತರಗತಿಯ ಹೊರಗೆ ಕುಳಿತು ನ್ಯಾಯಾಲಯದ ತೀರ್ಪಿಗಾಗಿ ಕಾಯುವುದಾಗಿ ಹೇಳಿದರು.

ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಅಥವಾ ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ಸ್ಕಾರ್ಫ್ ತೊಡದಂತೆ ಹೇಳಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಿಗೆ ಹಿಂದೂ ಜಾಗರಣ ವೇದಿಕೆ ಬೆಂಬಲ ನೀಡಿತ್ತು. ನಂತರ, ಪ್ರಾಂಶುಪಾಲರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಹಿಜಾಬ್ ಧರಿಸುವುದನ್ನು ನಿಲ್ಲಿಸುವಂತೆ ಸೂಚಿಸಿದರು.

ಇದು ಮತ್ತಷ್ಟು ವಿವಾದವನ್ನು ಹುಟ್ಟುಹಾಕಿ, ಕೆಲವು ಸ್ಥಳಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು. ಕುಂದಾಪುರ ಸರಕಾರಿ ಪಿಯು ಕಾಲೇಜು, ಬಸ್ರೂರಿನ ಶಾರದಾ ಕಾಲೇಜು ಹಾಗೂ ಬೈಂದೂರಿನ ಸರಕಾರಿ ಜೂನಿಯರ್ ಕಾಲೇಜಿನಲ್ಲೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಂಡು ಬಂದಿದೆ. ಕುಂದಾಪುರದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಆರ್‌.ಎನ್‌. ಶೆಟ್ಟಿ ಪಿಯು ಕಾಲೇಜಿಗೆ ರಜೆ ಘೋಷಿಸಲಾಗಿದೆ.

ರಾಜ್ಯದ ಇತರ ಭಾಗಗಳಲ್ಲಿಯೂ ಪ್ರತಿಭಟನೆಗಳು ಹರಡಿದ್ದು, ಮಂಡ್ಯ ವಿಶ್ವವಿದ್ಯಾನಿಲಯದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಘೋಷಣೆ ಕೂಗಿದರು. ಕಳೆದ ಒಂದು ವಾರದಿಂದ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸುತ್ತಿದ್ದಾರೆ ಎಂದು ಹೇಳಿರುವ ಅವರು, ಹುಡುಗಿಯರು ಹಿಜಾಬ್ ಅನ್ನು ದೂರವಿಡುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.

Hijab Dispute: Petition To be Heard Karnataka High Court On Today

ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಉದ್ವಿಗ್ನತೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ವಿಜಯನಗರ, ಶಿವಮೊಗ್ಗ, ಕಲಬುರಗಿ, ವಿಜಯಪುರ, ಗದಗ ಜಿಲ್ಲೆಗಳಲ್ಲೂ ಹಿಂದೂ ವಿದ್ಯಾರ್ಥಿಗಳು ಹಿಜಾಬ್ ಸ್ಥಗಿತ ಅಥವಾ ಕೇಸರಿ ಶಾಲಿನ ಬೇಡಿಕೆ ಇಟ್ಟಿದ್ದರು.

ವಿವಾದಕ್ಕೆ ಮತ್ತೊಂದು ಆಯಾಮ ನೀಡುವಂತೆ, ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹುಜನ ವಿದ್ಯಾರ್ಥಿ ಸಂಘಕ್ಕೆ ಸೇರಿದ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ, ಹಿಜಾಬ್ ಧರಿಸುವ ವಿದ್ಯಾರ್ಥಿನಿಯರ ಹಕ್ಕನ್ನು ಬೆಂಬಲಿಸಿದರು.

ಬೆಂಗಳೂರು ಮತ್ತು ಭದ್ರಾವತಿಯಲ್ಲಿ ಹಿಜಾಬ್ ಧರಿಸುವ ಹಕ್ಕು ನೀಡುವಂತೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು. ಹಲವಾರು ಸಂಘಟನೆಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ಒಗ್ಗಟ್ಟು ವ್ಯಕ್ತಪಡಿಸಿದವು. ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟದ ಸದಸ್ಯರು ಹಿಜಾಬ್ ಬೆಂಬಲಿಸಿ ಪ್ರತಿಭಟನೆ ನಡೆಸಿದರು.

ವಿವಾದದ ನಡುವೆ ಸಮವಸ್ತ್ರವನ್ನು ವಿತರಿಸಿದ ಬಿಬಿಎಂಪಿ
ಶಾಲಾ-ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಕುರಿತು ತೀವ್ರ ವಿವಾದದ ನಡುವೆ ಬಿಬಿಎಂಪಿಯು ಬೆಂಗಳೂರಿನಾದ್ಯಂತ ತನ್ನ ಶಾಲೆಗಳಲ್ಲಿ ಸಮವಸ್ತ್ರವನ್ನು ವಿತರಿಸಲು ಪ್ರಾರಂಭಿಸಿದೆ.

ಆಗಸ್ಟ್‌ನಿಂದ ಶಾಲೆಗಳು ಆಫ್‌ಲೈನ್ ತರಗತಿಗಳಿಗೆ ಪುನರಾರಂಭವಾದಾಗಿನಿಂದ ಸಮವಸ್ತ್ರ ವಿತರಣೆಯು ಬಾಕಿ ಉಳಿದಿದೆ ಎಂದು ಒಪ್ಪಿಕೊಂಡಿದ್ದರೂ, ಹಿಜಾಬ್ ವಿವಾದಕ್ಕೂ ಈ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಸಮವಸ್ತ್ರದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಅದು ಹೇಳಿದೆ.

ಸಂಭವನೀಯ ಕೋವಿಡ್ ಮೂರನೇ ಅಲೆಯು ಆಫ್‌ಲೈನ್ ತರಗತಿಗಳನ್ನು ಮುಂದುವರೆಸುವುದರ ಮೇಲೆ ಅನಿಶ್ಚಿತತೆಯನ್ನು ಸೃಷ್ಟಿಸಿದೆ ಎಂದು ಹಿರಿಯ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಾವು ರಾಜ್ಯ ಸರ್ಕಾರದ ನಿರ್ದೇಶನಗಳಿಗಾಗಿ ಕಾಯುತ್ತಿದ್ದೆವು ಮತ್ತು ಸಮವಸ್ತ್ರದ ಬಣ್ಣಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಹಿಜಾಬ್ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಡಿಸೆಂಬರ್‌ನಲ್ಲಿ ಸಮವಸ್ತ್ರ ವಿತರಿಸುವ ಆದೇಶವನ್ನು ನೀಡಿತು, ಆದರೆ ಓಮಿಕ್ರಾನ್ ಬೆದರಿಕೆಯಿಂದಾಗಿ ಸಮವಸ್ತ್ರವನ್ನು ವಿತರಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಹೇಳಿದರು.

ತಿಂಗಳ ಪೂರ್ತಿ ಸಮವಸ್ತ್ರ ವಿತರಿಸುವ ಯೋಜನೆ ಹೊಂದಿದ್ದು, ಬಿಬಿಎಂಪಿಯು ಕಳೆದ ಶುಕ್ರವಾರ ಆಸ್ಟಿನ್ ಟೌನ್‌ನ ಪಿಯು ಕಾಲೇಜಿನಲ್ಲಿ ಸುಮಾರು 250 ವಿದ್ಯಾರ್ಥಿನಿಯರಿಗೆ ಸಮವಸ್ತ್ರವನ್ನು ನೀಡಿದೆ. ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪಿಯುಸಿ ಸಂಸ್ಥೆಗಳ ಸುಮಾರು 17,500 ವಿದ್ಯಾರ್ಥಿಗಳು ಫೆಬ್ರವರಿ ಅಂತ್ಯದ ವೇಳೆಗೆ ಸಮವಸ್ತ್ರವನ್ನು ಪಡೆಯುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Recommended Video

ಪಂಜಾಬ್ CM ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ನಿರಾಸೆಗೊಂಡ ಸಿಧು ಮುಂದಿನ ನಡೆ? | Oneindia Kannada

English summary
The Hijab issue Petition in Karnataka will be heard by the High Court on today (Tuesday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X