CN Ashwath Narayan: ತನಿಖೆಗೆ 4 ವಾರ ಹೈಕೋರ್ಟ್ ತಡೆಯಾಜ್ಞೆ, ಸರ್ಕಾರಕ್ಕೆ ನೋಟಿಸ್
CN Ashwath Narayan: ಬೆಂಗಳೂರು, ಮೇ 31: ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕರೆ ನೀಡಿದ್ದ ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ವಿರುದ್ಧದ ತನಿಖೆಗೆ ಹೈಕೋರ್ಟ್ ಮಂಗಳವಾರ ತಡೆ ನೀಡಿ ಆದೇಶ ಹೊರಡಿಸಿದೆ.
2023ರ ವಿಧಾನಸಭಾ ಚುನಾವಣೆ ವೇಳೆ ಭಾಷಣದಲ್ಲಿ ಮೈಸೂರು ಮಾಜಿ ದೊರೆ ಟಿಪ್ಪು ಸುಲ್ತಾನ್ ಅವರನ್ನು ಒಕ್ಕಲಿಗ ಯೋಧರಾದ ಊರಿಗೌಡ ಮತ್ತು ನಂಜೇಗೌಡ ಹತ್ಯೆ ಮಾಡಿದಂತೆ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಮುಗಿಸಬೇಕು' ಎಂದಿದ್ದರು. ಈ ಸಂಬಂಧ ತನಿಖೆಗೆ ಮಾಜಿ ಸಚಿವ ಅಶ್ವಥ್ ನಾರಾಯಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಾಜಿ ಸಚಿವರ ವಿರುದ್ಧ ತನಿಖೆಗೆ ನಾಲ್ಕು ವಾರಗಳ ತಡೆ ನೀಡಿ ಆದೇಶಿಸಿದೆ. ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಅಶ್ವಥ್ ನಾರಾಯಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಮೇ 24ರಂದು ವಿಚಾರಣೆ ನಡೆಸಿತ್ತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಫೆಬ್ರವರಿ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಎನ್‌ಸಿಆರ್ ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಮಂಡನೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಮೇ 24 ರಂದು ದುರುದ್ದೇಶದಿಂದ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ದೂರು ಕಲಂ 14 ಮತ್ತು 21ಕ್ಕೆ ವಿರುದ್ಧ ಆಗಿದ್ದು, ಕಾನೂನುಬಾಹಿರವಾಗಿ ಪ್ರಕರಣ ದಾಖಲಿಸಲಾಗಿದೆ. ಕ್ರಿಮಿನಲ್ ಬೆದರಿಕೆ, ಗಲಭೆ, ಉದ್ದೇಶಪೂರ್ವಕ ಪ್ರಚೋದನೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ ಇದಕ್ಕೆ ಸೂಕ್ತ ಆಧಾರಗಳಿಲ್ಲ ಎಂದು ಹೇಳಿದರು.
ಅಲ್ಲದೆ, ದೂರುದಾರರು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಅರ್ಜಿದಾರರ ಭಾಷಣದಿಂದ ಯಾವುದೇ ಗಲಭೆ ನಡೆದಿಲ್ಲ. ಅಲ್ಲದೆ, ಅರ್ಜಿದಾರರ ಹೇಳಿಕೆಯಿಂದ ಯಾವ ವ್ಯಕ್ತಿಗೆ ನೇರವಾಗಿ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ದೂರು ಕಾಲ್ಪನಿಕವಾಗಿದೆ. ಐಪಿಸಿ ಸೆಕ್ಷನ್ 153 ರ ಅಡಿಯಲ್ಲಿ ಅಪರಾಧವನ್ನು ರೂಪಿಸುವ ಯಾವುದೇ ಅಂಶಗಳು ಇಲ್ಲದಿರುವುದರಿಂದ ಮತ್ತು ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರಕ್ಕೆ ಹೈ ನೋಟಿಸ್
ಇದನ್ನು ಆಕ್ಷೇಪಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಇದು ಜಾಮೀನು ನೀಡಬಹುದಾದ ಪ್ರಕರಣ. ಹೀಗಾಗಿ ಪ್ರಕರಣ ಸಂಬಂಧ ತಡೆ ನೀಡದಂತೆ ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಎಫ್‌ಐಆರ್‌ಗೆ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿದ್ದಲ್ಲದೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.
ಮಂಡ್ಯದ ಸಾತನೂರಿನಲ್ಲಿ ಬಿಜೆಪಿ ಸಚಿವರಾಗಿದ್ದ ಡಾ.ಸಿ.ಎನ್.ಅಶ್ವತ್ಥನಾರಾಯಣ್ 2023ರ ಫೆಬ್ರವರಿ 15ರಂದು ಸಭೆಯೊಂದರಲ್ಲಿ ಮಾತನಾಡುತ್ತಾ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವಿನನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎಂದು ಹೇಳಿದ್ದರು.
ಈ ಹೇಳಿಕೆಗೆ ರಾಜ್ಯದ ಹಲವೆಡೆ ಆಕ್ರೋಶ ವ್ಯಕ್ತವಾಗಿತ್ತು, ಕಾಂಗ್ರೆಸ್ ಕಾರ್ಯಕರ್ತರು ತಿರುಗೇಟು ನೀಡಿದ್ದರು. ಇನ್ನೂ ಕೆಪಿಸಿಸಿ ಕಾರ್ಯದರ್ಶಿ ಎಂ.ಲಕ್ಷ್ಮಣ್ ಮೈಸೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸಿ ಎನ್‌ಸಿಆರ್ ಜಾರಿ ಮಾಡಿರಲಿಲ್ಲ ಎನ್ನಲಾಗಿದೆ. ಇದೀಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಮಾಜಿ ಸಚಿವರ ವಿರುದ್ಧದ ತನಿಖೆಗೆ ನಾಲ್ಕು ವಾರಗಳ ತಡೆ ಆಗಿದೆ.












Click it and Unblock the Notifications