ಭೋವಿ ನಿಗಮದ ಅಕ್ರಮ ಪ್ರಕರಣ: ಗೂಳಿಹಟ್ಟಿ ಶೇಖರ್ ಪ್ರಯತ್ನಕ್ಕೆ ಹಿನ್ನಡೆ, ಇಲ್ಲಿದೆ ಕೇಸ್ ಮಾಹಿತಿ
ಬೆಂಗಳೂರು, ಡಿಸೆಂಬರ್ 22: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ಎ.ಡಿ.ನಾಗರಾಜು ಅವರ ವರ್ಗಾವಣೆ ಪ್ರಶ್ನಿಸಿ ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದರಿಂದಾಗಿ ಭೋವಿ ನಿಗಮದಲ್ಲಿನ ಅಕ್ರಮಗಳನ್ನು ಹೊರಹಾಕಬೇಕು ಎನ್ನುವ ಗೂಳಿಹಟ್ಟಿ ಶೇಖರ್ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಶೇಖರ್ ಸಲ್ಲಿಸಿದ್ದ ಪಿಐಎಲ್‌ಅನ್ನು ಆಲಿಸಿದ ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಸರ್ಕಾರಿ ಅಧಿಕಾರಿಗಳಿಗೆ ನಿಗದಿ ಅವಧಿಯಲ್ಲಿ ನಿಯಮದಂತೆ ವರ್ಗಾವಣೆ ಮಾಡಲಾಗುತ್ತದೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿ ವರ್ಗಾವಣೆ ಮಾಡಿದರೆ, ಅದರಿಂದ ಬಾಧಿತನಾಗುವ ವ್ಯಕ್ತಿ ಅದನ್ನು ಪ್ರಶ್ನಿಸಬೇಕು. ಇದರಲ್ಲಿ ಮೂರನೇ ವ್ಯಕ್ತಿಗೆ ಯಾವುದೇ ಹಕ್ಕು ಇರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಅರ್ಜಿದಾರರು ವರ್ಗಾವಣೆಯನ್ನು ಪ್ರಶ್ನಿಸುವ ಅಧಿಕಾರವಿಲ್ಲ ಎಂದು ಆದೇಶಿಸಿದೆ.
ಅರ್ಜಿಯನ್ನು ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಎಂದು ವಜಾಗೊಳಿಸಿರುವ ನ್ಯಾಯಾಲಯ, ಅವರ ವಾದದಿಂದ ನ್ಯಾಯಾಲಯಕ್ಕೆ ಹೆಚ್ಚಿನ ವಿಶ್ವಾಸ ಮೂಡಿಲ್ಲ ಎಂದು ತಿಳಿಸಿದೆ.
"ಸಾರ್ವಜನಿಕ ಹಿತಾಸಕ್ತಿಯ ರಕ್ಷಕ ಮತ್ತು ಪ್ರಧಾನ ಉದ್ಯೋಗದಾತನಾಗಿರುವ ಸರ್ಕಾರಕ್ಕೆ ಯಾವ ಅಧಿಕಾರಿಯನ್ನು ಯಾವ ಸ್ಥಾನಕ್ಕೆ ವರ್ಗಾವಣೆ ಮಾಡಬೇಕು, ಯಾವ ಅಧಿಕಾರಿಯನ್ನು ಯಾವ ಹುದ್ದೆಯಲ್ಲಿ ಮುಂದುವರಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿದೆ. ಅಧಿಕಾರಿಗಳು ಬರಬಹುದು ಅಥವಾ ಹೋಗಬಹುದು, ಆದರೆ ಪ್ರಕ್ರಿಯೆ ಯಾವುದೇ ಅಡೆತಡೆ ಇಲ್ಲದೆ ಸಾಗಬೇಕು ಅಷ್ಟೇ '' ಎಂದು ನ್ಯಾಯಾಲಯ ಹೇಳಿದೆ.
ಭೋವಿ ನಿಗಮದ ಅಕ್ರಮ: ತನಿಖೆಗೆ ಅರ್ಧಕ್ಕೆ ಸ್ಥಗಿತ
ಅರ್ಜಿದಾರರ ಪರ ವಕೀಲರು, ತನಿಖೆಯ ಅರ್ಧಕ್ಕೆ ನಿಂತು ಹೋಗಿದೆ, ತನಿಖಾಧಿಕಾರಿಯನ್ನು ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ಈವರೆಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ಅದೇ ಸ್ಥಾನದಲ್ಲಿ ಮುಂದುವರಿಸಬೇಕು ಮತ್ತು ಕಳಂಕಿತ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ತನಿಖೆ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸಲ್ಲಿಸುವವರೆಗೆ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ವ್ಯವಸ್ಥಾಪಕರು ಹಾಗೂ ಇತರೆ ಸಿಬ್ಬಂದಿಯನ್ನು ಅದೇ ನಿಗಮದಲ್ಲಿ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರು.
ಅಲ್ಲದೆ, ಇದು ರಾಜಕೀಯ ಪ್ರೇರಿತ ವರ್ಗಾವಣೆಯಾಗಿದೆ. ಕೆಲವು ಪ್ರಭಾವಿ ರಾಜಕೀಯ ವ್ಯಕ್ತಿಗಳು ನಿಗಮದಲ್ಲಿನ ಅಕ್ರಮಗಳನ್ನು ಮುಚ್ಚಿಹಾಕಲು ವರ್ಗಾವಣೆಯ ಪಿತೂರಿ ನಡೆಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ ಆ ವಾದವನ್ನು ವಿರೋಧಿಸಿದ ಸರ್ಕಾರಿ ವಕೀಲರು, ಯಾವ ಅಧಿಕಾರಿಯನ್ನು ಎಲ್ಲಿ ನಿಯೋಜಿಸಬೇಕು, ಎಲ್ಲಿ ನಿಯೋಜಿಸಬಾರದು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಯಾರೂ ಮಧ್ಯಪ್ರವೇಶ ಮಾಡಲು ಅಧಿಕಾರವಿಲ್ಲ ಎಂದರು.












Click it and Unblock the Notifications