ಹೆಬ್ಬಾಳ ಫ್ಲೈಓವರ್ ಮೇಲೆ ವಾಹನ ಸಂಚಾರ ಬಂದ್: ಎಷ್ಟು ದಿನ, ಯಾಕೆ?
ಬೆಂಗಳೂರಿನ ಪ್ರವೇಶದ್ವಾರ ಎಂದೇ ಕರೆಸಿಕೊಂಡಿರುವ ಹೆಬ್ಬಾಳ ಫ್ಲೈಓವರ್ ಮೂಲಕ ಸಂಚರಿಸುವವರಿಗೆ ಕಹಿಸುದ್ದಿಯೊಂದು ಹೊರಬಿದ್ದಿದೆ. ಈಗಾಗಲೇ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿರುವ ಈ ಫ್ಲೈಓವರ್ ಬಂದ್ ಆಗಲಿದೆ. ಈ ಭಾಗದಲ್ಲಿ ಟ್ರಾಫಿಕ್ ತಗ್ಗಿಸಲು ಈ ಫ್ಲೈಓವರ್ ಬಳಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ನಡುವೆ ಫ್ಲೈಓವರ್ ಬಂದ್ ಮಾಡಲು ಮುಂದಾಗಿದ್ದಾರೆ. ಯಾವ ಕಾರಣಕ್ಕೆ ಹೆಬ್ಬಾಳ ಮೇಲ್ಸೇತುವೆ ಬಂದ್ ಮಾಡಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.
ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಏರ್‌ಪೋರ್ಟ್ ರಸ್ತೆಯ ಎಸ್ಟೀಮ್ ಮಾಲ್ನಿಂದ ಶುರುವಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗವು ಬಂದ್ ಆಗಲಿದೆ. ಈ ಅವಧಿಯಲ್ಲಿ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ. ಹೆಬ್ಬಾಳ ಫ್ಲೈಓವರ್ ಮೇ 17ರಿಂದ ಮೇ 21ರವರೆಗೆ ಬಂದ್ ಆಗಲಿದೆ. ಆದರೆ ದಿನವಿಡೀ ಫ್ಲೈಓವರ್ ಬಂದ್ ಮಾಡುವುದಿಲ್ಲ. ಬದಲಾಗಿ ಪ್ರತಿದಿನ ಕೇವಲ ಮೂರು ಗಂಟೆ ಮಾತ್ರವೇ ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಈ ಐದೂ ದಿನ ರಾತ್ರಿ 12 ಗಂಟೆಯಿಂದ 3 ಗಂಟೆಯವರೆಗೆ ಫ್ಲೈಓವರ್ ಬಂದ್ ಆಗಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಕೆ.ಆರ್.ಪುರ ಕಡೆಯಿಂದ ಮೇಖ್ರಿ ಸರ್ಕಲ್‌ವರೆಗಿನ ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ಕ್ಯಾಂಪ್ಗಳನ್ನು ನಿರ್ಮಿಸುವ ಕಾಮಗಾರಿ ಶುರುವಾಗಿದ್ದು, ಈ ಕಾಮಗಾರಿಯ ಭಾಗವಾಗಿ ರೈಲ್ವೆ ಹಳಿಗಳ ಮೇಲೆ 33.5 ಮೀಟರ್ ಉದ್ದದ 7 ಉಕ್ಕಿನ ಗರ್ಡರ್‌ಗಳನ್ನು ಅಳವಡಿಸುವ ಕಾಮಗಾರಿ ಶನಿವಾರದಿಂದಲೇ ಶುರುವಾಗಿ ಮೇ 21ರವರೆಗೆ ನಡೆಯಲಿದೆ. ಈ ಕಾರಣಕ್ಕೆ ರಾತ್ರಿ ವೇಳೆ ಮೂರು ಗಂಟೆಗಳ ಕಾಲ ಫ್ಲೈಓವರ್ ಬಂದ್ ಮಾಡಲಿದ್ದಾರೆ.
ಕಾಮಗಾರಿ ನಡೆಯುವ ಕಾರಣಕ್ಕೆ ಪ್ರತಿದಿನ ಮೂರು ಗಂಟೆಗಳ ಕಾಲ, ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಫ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ವಾಹನ ಸವಾರರು ಈ ಸಮಯದಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಸೂಚಿಸಿದ್ದಾರೆ. ಹೆಬ್ಬಾಳ ಮೇಲ್ಸೇತುವೆಯ ಎಸ್ಟೀಮ್ ಮಾಲ್ನಿಂದ ಮೇಖ್ರಿ ಸರ್ಕಲ್ ಕಡೆಗೆ ಹೋಗುವವರು ರಾತ್ರಿ 12ರಿಂದ ಬೆಳಿಗ್ಗೆ 3 ಗಂಟೆವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬಾಕಿ ಸಮಯದಲ್ಲಿ ಎಂದಿನಂತೆ ವಾಹನಗಳ ಸಂಚಾರಕ್ಕೆ ಅವಕಾಶ ಇರುತ್ತದೆ.
ಪರ್ಯಾಯ ಮಾರ್ಗಗಳು
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆ ಮೂಲಕ ಹೆಬ್ಬಾಳ ಸರ್ಕಲ್ ಮೂಲಕ ತುಮಕೂರು ಮಾರ್ಗವಾಗಿ ಚಲಿಸಿ ಮುಂದೆ ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು, ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಅನ್ನು ತಲುಪಬಹುದು ಎಂದು ಸೂಚನೆ ನೀಡಿದೆ. ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇರುವುದರಿಂದ ಈ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಹಾಗಾಗಿ ವಾಹನ ಸವಾರರು ಸಹಕರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications