Hebbal Flyover: ದಶಕದಿಂದ ವಿಳಂಬ, ಒಂದೂವರೆ ವರ್ಷ ಹಗಲಿರುಳು ಶ್ರಮ: ಹೆಬ್ಬಾಳ ಫ್ಲೈಓವರ್ ಕಾಮಗಾರಿ ಮುಗಿದಿದ್ದೇ ರೋಚಕ
ಬೆಂಗಳೂರಿನ ವಾಹನ ಸವಾರರಿಗೆ, ವಿಶೇಷವಾಗಿ ಉತ್ತರ ಬೆಂಗಳೂರಿನ ಕಡೆ ಸಂಚರಿಸುವವರಿಗೆ ಹೆಬ್ಬಾಳ ಫ್ಲೈಓವರ್ ಎಂದರೆ ಟ್ರಾಫಿಕ್ ಜಾಮ್‌ನ ದುಃಸ್ವಪ್ನ ಎಂದೇ ಪರಿಚಿತ. ಆದರೆ, ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಬ್ಬಾಳ ಫ್ಲೈಓವರ್‌ನ ಇಳಿಜಾರು ರಸ್ತೆ (ಡೌನ್‌ರ‍್ಯಾಂಪ್) ಕಾಮಗಾರಿ ಈಗ ಪೂರ್ಣಗೊಂಡಿದೆ. ಈ ಯಶಸ್ಸಿನ ಹಿಂದೆ ಕಾಂಕ್ರೀಟ್ ಮತ್ತು ಕಬ್ಬಿಣದಷ್ಟೇ ಗಟ್ಟಿಯಾದ ಬಿಡಿಎ ಇಂಜಿನಿಯರ್‌ಗಳ ಪರಿಶ್ರಮದ ಕಥೆಯಿದೆ. ಸಾಮಾನ್ಯವಾಗಿ 3 ವರ್ಷ ತೆಗೆದುಕೊಳ್ಳುವ ಈ ಯೋಜನೆಯನ್ನು ಕೇವಲ 18 ತಿಂಗಳಲ್ಲಿ (1.5 ವರ್ಷ) ಮುಗಿಸಿರುವುದು ಒಂದು ದಾಖಲೆಯೇ ಸರಿ.
ಸವಾಲುಗಳನ್ನು ಮೆಟ್ಟಿ ನಿಂತ ತಂಡ
ವಿನ್ಯಾಸ ಬದಲಾವಣೆ, ಆಡಳಿತಾತ್ಮಕ ವಿಳಂಬ ಮತ್ತು ಇತರೆ ಸಮಸ್ಯೆಗಳಿಂದಾಗಿ ಈ ಯೋಜನೆ ಹಲವು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. 2024ರ ಆರಂಭದಲ್ಲಿ ಕಾಮಗಾರಿ ಪುನರಾರಂಭಗೊಂಡಾಗ, ಬಿಡಿಎ ಅಧಿಕಾರಿಗಳ ಮುಂದೆ ದೊಡ್ಡ ಸವಾಲಿತ್ತು. ಮೆಟ್ರೋ ಕಾಮಗಾರಿ, ರೈಲ್ವೆ ಮಾರ್ಗಗಳು ಮತ್ತು ಅತಿಯಾದ ವಾಹನ ದಟ್ಟಣೆಯ ನಡುವೆ 1 ಕಿ.ಮೀ ಉದ್ದದ ಮತ್ತು 6 ಮೀಟರ್ ಅಗಲದ ರ‍್ಯಾಂಪ್ ನಿರ್ಮಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ, ಇಂಜಿನಿಯರ್‌ಗಳು ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿ ಇದನ್ನು ಸಾಧಿಸಿದ್ದಾರೆ.

ಈ ಯೋಜನೆಯ ಯಶಸ್ಸಿನ ಹಿಂದೆ ಇಂಜಿನಿಯರ್‌ಗಳ ವೈಯಕ್ತಿಕ ತ್ಯಾಗಗಳಿವೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶರಣ್ ಎಂ.ಎಸ್. ಅವರು ಹೇಳುವಂತೆ, "ನನ್ನ ಮದುವೆಯಾದ ಒಂದೇ ತಿಂಗಳಿಗೆ ಬೋಲ್ಟ್‌ಗಳ ಗುಣಮಟ್ಟ ಪರಿಶೀಲಿಸಲು ನನ್ನನ್ನು ಲೂಧಿಯಾನಕ್ಕೆ ಕಳುಹಿಸಲಾಯಿತು. ಕಾರ್ಖಾನೆಯ ನೆಲದ ಮೇಲೆ ಮಲಗಿದೆವು, ರಸ್ತೆ ಬದಿಯ ಡಾಬಾಗಳಲ್ಲಿ ಊಟ ಮಾಡಿದೆವು. ಪ್ರಯಾಣಿಕರಿಗೆ ಸಂತೋಷವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಕಾಮಗಾರಿ ಮುಗಿದಿದ್ದಕ್ಕೆ ನನ್ನ ಪತ್ನಿ ಫುಲ್ ಖುಷ್ ಆಗಿದ್ದಾರೆ".
ಕುಟುಂಬದ ಜೊತೆ ಕಾಲ ಕಳೆಯಲಿಲ್ಲ
ಇನ್ನೊಬ್ಬಕಾರ್ಯಪಾಲಕ ಇಂಜಿನಿಯರ್ ಉಮೇಶ್ ಬಿ.ಆರ್. ಅವರು, "ಕಳೆದ ಎರಡು ವರ್ಷಗಳಲ್ಲಿ ನಾವು ಕುಟುಂಬದೊಂದಿಗೆ ಸಮಯ ಕಳೆಯಲೇ ಇಲ್ಲ. ಹಬ್ಬಗಳಿಲ್ಲ, ಹೊಸ ವರ್ಷದ ಸಂಭ್ರಮವಿಲ್ಲ. ಈಗ ಕೆಲಸ ಮುಗಿದಿರುವುದರಿಂದ ನನ್ನ ಮಗನಿಗೆ ಅಪ್ಪನ ಜೊತೆ ಸಮಯ ಕಳೆಯಲು ಸಿಗುತ್ತಿದೆ ಎಂದು ಖುಷಿಯಾಗಿದೆ" ಎಂದು ಭಾವುಕರಾಗಿ ನುಡಿದಿದ್ದಾರೆ.
ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಆರ್. ವಿವರಿಸುವಂತೆ, "ನಾವು ಕಚೇರಿಗಳಲ್ಲಿ ಕುಳಿತು ಕೆಲಸ ಮಾಡಲಿಲ್ಲ. ವಾರಕ್ಕೆ ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದೆವು. ಸುಮಾರು 100ಕ್ಕೂ ಹೆಚ್ಚು ಬಾರಿ ಸೈಟ್ ವಿಸಿಟ್ ಮಾಡಿದ್ದೇವೆ. ಮೆಟ್ರೋ, ಬಿಎಂಟಿಸಿ ಮತ್ತು ರೈಲ್ವೆ ಇಲಾಖೆಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿದ್ದರಿಂದಲೇ 3 ವರ್ಷದ ಕೆಲಸವನ್ನು 1.5 ವರ್ಷದಲ್ಲಿ ಮುಗಿಸಲು ಸಾಧ್ಯವಾಯಿತು".
ಹಗಲಿನಲ್ಲಿ ಟ್ರಾಫಿಕ್ ಸಮಸ್ಯೆ ಇದ್ದುದರಿಂದ ಬಹುತೇಕ ಕಾಮಗಾರಿಗಳನ್ನು ರಾತ್ರಿ ವೇಳೆಯೇ ನಡೆಸಬೇಕಾಯಿತು. ರೈಲ್ವೆ ಹಳಿಗಳ ಮೇಲೆ ಕೆಲಸ ಮಾಡುವಾಗ ರೈಲುಗಳ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಬೇಕಿತ್ತು. ಇವೆಲ್ಲದರ ನಡುವೆ ಸಮಯದ ಜೊತೆಗಿನ ಓಟವನ್ನು ಗೆದ್ದಿರುವ ಬಿಡಿಎ ತಂಡ, ಕೆ.ಆರ್.ಪುರಂ ಕಡೆಯಿಂದ ಬರುವ ವಾಹನ ಸವಾರರಿಗೆ ದೊಡ್ಡ ಉಡುಗೊರೆ ನೀಡಿದೆ. ಸರ್ಕಾರಿ ಕೆಲಸಗಳೆಂದರೆ ವಿಳಂಬ ಎಂಬ ಹಣೆಪಟ್ಟಿಯನ್ನು ಈ ಇಂಜಿನಿಯರ್‌ಗಳು ತಮ್ಮ ಬದ್ಧತೆಯ ಮೂಲಕ ಅಳಿಸಿಹಾಕಿದ್ದಾರೆ.












Click it and Unblock the Notifications