ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿ ಭಾರಿ ಗುಂಡಿಗಳು; ವಾಹನ ಸಂಚಾರ ಅಸ್ತವ್ಯಸ್ತ
ಬೆಂಗಳೂರು, ಡಿಸೆಂಬರ್ 16: ಬೆಂಗಳೂರು ನಗರದ ಮುಖ್ಯ ರಸ್ತೆಯೊಂದರಲ್ಲಿ ಗುರುವಾರ ಬೃಹತ್ ಸಿಂಕ್‌ಹೋಲ್ ಕಾಣಿಸಿಕೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಜೆಸಿ ರಸ್ತೆಯ ಮಧ್ಯದಲ್ಲಿರುವ ಬೃಹತ್ ಹೊಂಡದ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಪೌರ ಸಂಸ್ಥೆಯ ಕಾರ್ಮಿಕರು ರಸ್ತೆಯ ಒಂದು ಭಾಗವನ್ನು ಸುತ್ತುವರಿದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವಾಗ ಆಳವಾದ ಸಿಂಕ್‌ಹೋಲ್‌ನಲ್ಲಿ ವ್ಯಕ್ತಿಯೊಬ್ಬ ನಿಂತಿರುವುದನ್ನು ಕೆಲವು ಫೋಟೋಗಳು ತೋರಿಸಿವೆ.
ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಇಂಜಿನಿಯರ್ (ರಸ್ತೆ ಮತ್ತು ಮೂಲಸೌಕರ್ಯ) ಬಿ.ಎಸ್. ಪ್ರಹ್ಲಾದ್ ಖಾಸಗಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿ, "ನಿನ್ನೆ (ಬುಧವಾರ) ರಾತ್ರಿಯೇ ಸಿಂಕ್‌ಹೋಲ್ ಉಂಟಾಗಿದ್ದು, ಪ್ರಾಥಮಿಕ ವರದಿಯ ಪ್ರಕಾರ ಅಲ್ಲಿ ಒಂದು ಹಳೆಯ ಬಾವಿ ಇದ್ದಿರಬಹುದು ಮತ್ತು ಅದು ಈಗ ಕುಸಿದಿದೆ"

"ಈಗ ಬಂದಿರುವ ಇನ್ನೊಂದು ಸಾಧ್ಯತೆಯೆಂದರೆ ಅಲ್ಲಿ ಒಳಚರಂಡಿ ಪೈಪ್‌ಲೈನ್ ಇದ್ದು, ಅದು ಒಡೆದ ಪರಿಣಾಮವಾಗಿ ಕೆಸರು ತುಂಬಿದೆ. ನಾವು ಈ ಸ್ಥಳವನ್ನು ಪರಿಶೀಲಿಸುತ್ತಿದ್ದೇವೆ. ಸಿಂಕ್‌ಹೋಲ್ ನಿರ್ಮಾಣದಿಂದ ಯಾವುದೇ ಅವಘಡಗಳು ಅಥವಾ ಯಾವುದೇ ಅಹಿತಕರ ಘಟನೆ ನಡೆದಿಲ್ಲ," ಎಂದರು.
ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಸುರಂಗ ಕೊರೆಯುವ ಕಾರ್ಯಾಚರಣೆಯಿಂದಾಗಿ ಬೆಂಗಳೂರಿನ ಟ್ಯಾನರಿ ರಸ್ತೆಯ ಬಳಿ ಮತ್ತೊಂದು ದೊಡ್ಡ ಸಿಂಕ್‌ಹೋಲ್ ತೆರೆದಿತ್ತು. ಈ ಹಿಂದೆಯೂ ಅಲ್ಲಿ ಬಾವಿ ಇತ್ತು ಎಂದು ಅಧಿಕಾರಿಗಳು ಹೇಳಿದ್ದರು. ಅಂತಹ ಹಳೆಯ ಬಾವಿಗಳಿಂದ ರಸ್ತೆಯಲ್ಲಿ ಗುಂಡಿ ಬೀಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್, "ಆತಂಕಪಡುವ ಅಗತ್ಯವಿಲ್ಲ. ಇದು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ವಿವಿಧ ಕಾರಣಗಳಿಗಾಗಿ ಸಂಭವಿಸಬಹುದು," ಎಂದು ತಿಳಿಸಿದರು.

ಈ ವಾರದ ಆರಂಭದಲ್ಲಿ ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರು ನಗರದ ರಸ್ತೆಗಳ ಕಳಪೆ ಸ್ಥಿತಿಯ ಬಗ್ಗೆ ಕರ್ನಾಟಕದಲ್ಲಿ ತಮ್ಮದೇ ಪಕ್ಷದ ಆಡಳಿತದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಡಿಸೆಂಬರ್ 14ರ ಮಂಗಳವಾರದಂದು ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ವಿವಿಧ ನಾಗರಿಕ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆಯಿದೆ ಎಂದು ದೂರಿದ್ದರು.
Recommended Video
"ನನಗೆ ಬಹಳ ಕಡಿಮೆ ಅನುದಾನ ನೀಡಲಾಗಿದೆ, ನೀವು ರಸ್ತೆಗಳನ್ನು ಪುನಃ ನಿರ್ಮಿಸಲು ಮತ್ತು ಕೇವಲ 1,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲು ಬಯಸಿದರೆ, ಅದು ಸಾಕಾಗುವುದಿಲ್ಲ. ಮಳೆ ನಿಂತಿದ್ದು, ಬೆಂಗಳೂರಿನಲ್ಲಿ ರಸ್ತೆಗಳನ್ನು ಪುನಃ ನಿರ್ಮಿಸಬೇಕು," ಎಂದು ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ.

"ಇದಲ್ಲದೆ ನಗರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪೈಪ್‌ಲೈನ್‌ಗಳನ್ನು ಹಾಕುತ್ತಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಕೂಡ ರಸ್ತೆಗಳನ್ನು ಅಗೆಯುತ್ತಿದೆ. ಅವರ ನಡುವೆ ಸಂಪೂರ್ಣವಾಗಿ ಸಮನ್ವಯವಿಲ್ಲ. ಅವರ ನಡುವೆ ಸಮನ್ವಯತೆ ಇದ್ದರೆ ಮಾತ್ರ ಬೆಂಗಳೂರು ಮತ್ತು ಅದರ ರಸ್ತೆಗಳು ಉಳಿಯುತ್ತವೆ. ಸಾಮಾಜಿಕ ಜಾಲತಾಣ ಬಳಕೆದಾರರಿಂದ ಹಿಡಿದು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ನಗರದ ಬಗ್ಗೆ ಸರ್ಕಾರದ ನಿಲುವನ್ನು ಹೇಳಬೇಕು," ಎಂದು ಅರವಿಂದ್ ಲಿಂಬಾವಳಿ ಹೇಳಿದ್ದರು.












Click it and Unblock the Notifications