ಬೆಂಗಳೂರಲ್ಲಿ ಭಾರಿ ಮಳೆ ಎಚ್ಚರಿಕೆ, ಬಿಬಿಎಂಪಿಯಿಂದ ಹೈ ಅಲರ್ಟ್
ಬೆಂಗಳೂರು, ಆಗಸ್ಟ್ 09 : ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಬಿಎಂಪಿಯು ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ಮಾಹಿತಿ ನೀಡಿದರು.
ನಗರದಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೇಯರ್ ಶುಕ್ರವಾರ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರನ್ನು ಮಹಾಪೌರರ ಕಚೇರಿಗೆ ಕರೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಪಡೆದುಕೊಂಡರು.
"ನಗರದಲ್ಲಿ ಭಾರಿ ಮಳೆ ಬಂದು ಪ್ರವಾಹ ಉಂಟಾದರೆ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಈ ಹಿಂದೆ ಉಪ ಮುಖ್ಯಂತ್ರಿಗಳ ಜೊತೆ ಸಭೆ ನಡೆಸಲಾಗಿದೆ" ಎಂದು ಮೇಯರ್ ಮಾಹಿತಿ ನೀಡಿದರು.
ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದ್ದ ಕಸವನ್ನು ತೆರವುಗೊಳಿಸಲು ಈಗಾಗಲೇ ಐದು ಕಡೆ ಟ್ರಾಶ್ ಬ್ಯಾರಿಯರ್ (ಕಸ ತಡೆಯುವ ಹಗುರ ಅಲ್ಯೂಮಿನಿಯಂ ಬಲೆ) ಅಳವಡಿಸಲಾಗಿದೆ.

182 ಸೂಕ್ಷ್ಮ ಪ್ರದೇಶಗಳು
ರಾಜಕಾಲುವೆ ವಿಭಾಗದ ಅಧಿಕಾರಿಗಳು ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವ 1,000ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಾರೆ.
ಸದ್ಯ, ನಗರದ 182 ಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರ ಪ್ರವಾಹ ಉಂಟಾಗುವ ಪರಿಸ್ಥಿತಿ ಇದ್ದು, 80 ರಿಂದ 120 ಮಿ.ಮೀ ಮಳೆಯಾದರೆ ಯಾವುದೇ ಸಮಸ್ಯೆ ಎದುರಾಗುವುದುದಿಲ್ಲ. 120 ಮಿ.ಮೀ ಮೆಲ್ಪಟ್ಟು ಮಳೆ ಬಂದರೆ ಮಾತ್ರ ಪ್ರವಾಹದ ಉಂಟಾಗಲಿದೆ.

ನೀರಿನ ಮಟ್ಟ ಅಳತೆ
182 ಪ್ರದೇಶಗಳ ಪೈಕಿ 28 ಅತಿ ಸೂಕ್ಷ್ಮ ಪ್ರದೇಶಗಳಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ 18 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನೀರಿನ ಮಟ್ಟ ಅಳೆಯುವ ಸಂವೇದಕಗಳನ್ನು ಅಳವಡಿಸಲಾಗಿದೆ. ಕೆಎಸ್‌ಎನ್‌ಎಂಡಿಸಿ ಉಚಿತವಾಗಿ ಸೆನ್ಸಾರ್‌ಗಳನ್ನು ಅಳವಡಿಸಿದ್ದು, ಪಾಲಿಕೆಯಿಂದ ಯಾವುದೇ ಹಣ ವ್ಯಯಿಸಿಲ್ಲ. ಉಳಿದ 10 ಅತಿ ಸೂಕ್ಷ್ಮ ಪ್ರದೇಶಗಳಲ್ಲಿಯೂ ಶೀಘ್ರ ಸೆನ್ಸಾರ್ ಅಳವಡಿಸಲಾಗುತ್ತದೆ.

ತಾತ್ಕಾಲಿಕ ಕೊಠಡಿ ಸ್ಥಾಪನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ಅನಾಹುತಗಳ ನಿವಾರಣೆಗೆ ಈಗಾಗಲೇ 9 ಕಡೆ ಶಾಶ್ವತ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ. ಇದೀಗ ಆಯಾ ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತಾತ್ಕಾಲಿಕ ನಿಯಂತ್ರಣಾ ಕೊಠಡಿಗಳಲ್ಲಿ ತುರ್ತು ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಯಂತ್ರಗಳು, ಸಲಕರಣೆಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

ಮರ ತೆರವಿಗೆ 28 ತಂಡ ರಚನೆ
ಮಳೆಗಾಲದಲ್ಲಿ ಧರೆಗುರುಳುವ ಮರಗಳನ್ನು ತೆರವುಗೊಳಿಲು ಈಗಾಗಲೇ 21 ತಂಡಗಳಿವೆ. ಇದೀಗ ಹೆಚ್ಚುವರಿಯಾಗಿ 7 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮರಗಳನ್ನು ತೆರವುಗೊಳಿಸುವ ಅವಶ್ಯಕತೆಯಿರುವ ಗರಗಸ, ಕೊಂಬೆಗಳನ್ನು ತುಂಡರಿಸುವ ಯಂತ್ರ, ಹಾರೆ, ಹಗ್ಗ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ನೀಡುವುದರ ಜತೆಗೆ ಕಟಾವು ಮಾಡಿದ ಮರದ ತುಂಡುಗಳ ಸಾಗಣೆಗೆ ವಾಹನಗಳನ್ನು ಕೂಡಾ ನಿಗದಿ ಮಾಡಲಾಗಿದೆ.












Click it and Unblock the Notifications