Breaking: ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ, ವಾಹನ ಸವಾರರು ಹೈರಾಣ
ಬೆಂಗಳೂರು, ಮೇ 17: ಉದ್ಯಾನ ನಗರಿ ಬೆಂಗಳೂರು ನಗರದಲ್ಲಿ ಮಳೆ ಅಬ್ಬರಿಸುತ್ತಿದೆ. ಗುಡುಗು, ಸಿಡಿಲಿನಿಂದ ಕೂಡಿದ ಮಳೆ ಸುಮಾರು ಒಂದು ಗಂಟೆಯಿಂದ ಸುರಿಯುತ್ತಿದೆ. ಇನ್ನೂ ಮೂರು ದಿನಗಳ ಕಾಲ ನಗರದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ನಗರದಲ್ಲಿ ಮಳೆಯಾಗಿತ್ತು. ಬಳಿಕ ಮಳೆ ಕೊಂಚ ಬಿಡುವು ನೀಡಿತ್ತು. 8 ಗಂಟೆ ಬಳಿಕ ಮತ್ತೆ ನಗರದಲ್ಲಿ ಮಳೆ ಆರಂಭವಾಗಿದೆ. ಇದರ ಜೊತೆಗೆ ಗುಡುಗು, ಸಿಡಿಲಿನ ಅಬ್ಬರವೂ ಜೋರಾಗಿದೆ.
ಭಾರೀ ಮಳೆಯ ಹೊಡೆತಕ್ಕೆ ರಾಜಧಾನಿಯ ಜನರು ಹೈರಾಣಾದರು. ರಸ್ತೆಗಳು ಜಲಾವೃತಗೊಂಡಿತು. ಸಿಡಿಲಿನ ಅಬ್ಬರಕ್ಕೆ ಬೆಚ್ಚಿಬಿದ್ದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು.
ಮೆಜೆಸ್ಟಿಕ್, ಕೋರಮಂಗಲ, ಜಯನಗರ, ಹನುಮಂತನಗರ, ಜೆಪಿ ನಗರ, ರಾಜಾಜಿನಗರ, ಮಲ್ಲೇಶ್ವರಂ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರದಿಂದ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲಿ ಮೂರು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications