ಬೆಂಗಳೂರಿಗೆ ಮತ್ತೆ ಬಂದ ಮಳೆರಾಯ; ಸುರಿದ ಮಳೆ ಎಷ್ಟು?
ಬೆಂಗಳೂರು, ನವೆಂಬರ್ 06: ಕೆಲವು ದಿನದ ಬಿಡುವಿನ ಬಳಿಕ ಬೆಂಗಳೂರು ನಗರದಲ್ಲಿ ಮತ್ತೆ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಮಳೆ ವಿವಿಧ ಪ್ರದೇಶಗಳಲ್ಲಿ ಸುರಿದಿದೆ. ಶುಕ್ರವಾರ ಸಹ ನಗರದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಮಧ್ಯರಾತ್ರಿ ತನಕ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಸಂಜೆ 8.30ರ ತನಕ ನಗರದಲ್ಲಿ 12.2 ಮಿ. ಮೀ. ಮಳೆಯಾಗಿದೆ. ಹಳೆ ವಿಮಾನ ನಿಲ್ದಾಣ ಪ್ರದೇಶದಲ್ಲಿ 18.8 ಮಿ. ಮೀ. ಮಳೆ ದಾಖಲಾಗದೆ.
ಮೆಜೆಸ್ಟಿಕ್, ಯಶವಂತಪುರ, ಜಯನಗರ, ತ್ಯಾಗರಾಜನಗರ, ಬನಶಂಕರಿ, ಹೊರ ವರ್ತುಲ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಮಳೆಯ ಜೊತೆ ಗುಡುಗು ಮತ್ತು ಸಿಡಿಲಿನ ಅರ್ಭಟ ಸಹ ಹೆಚ್ಚಾಗಿತ್ತು. ಮಳೆಯಿಂದಾಗಿ ಕಚೇರಿಯಿಂದ ಮನೆಗೆ ಹೊರಟ ಜನರು ಪರದಾಡುವಂತಾಯಿತು.

ವಿವಿಧ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ನಗರದಲ್ಲಿ ಇನ್ನು ಮೂರು ದಿನಗಳ ಕಾಲ ಸಂಜೆ ವೇಳೆಗೆ ಮಳೆಯಾಗಲಿದೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ನಗರದ ಉಷ್ಣಾಂಶ ಗರಿಷ್ಠ 29 ರಿಂದ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತನಕ ಇರಲಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ವ್ಯಾಪ್ತಿಗೆ ಬರುವ ಬ್ಯಾರನ್ ಜ್ವಾಲಾಮುಖಿ ಗುರುವಾರ ಸ್ಫೋಟಗೊಂಡಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿತ್ತು. ಹೊಸಕೆರೆಹಳ್ಳಿ, ಮೈಸೂರು ರಸ್ತೆ, ಕೋರಮಂಗಲ ಮುಂತಾದ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗು ಅಪಾರವಾದ ಹಾನಿ ಮಾಡಿತ್ತು. ಕೆಲವು ದಿನದ ಬಿಡುವಿನ ಬಳಿಕ ಮತ್ತೆ ಮಳೆ ಸುರಿದಿದೆ.












Click it and Unblock the Notifications