ಬೆಂಗಳೂರು ಸಹಿತ ರಾಜ್ಯದ ಹಲವೆಡೆ ವರುಣಾಘಾತ: ಶುಕ್ರವಾರದವರೆಗೂ ಮಳೆಯ ಎಚ್ಚರಿಕೆ
ಬೆಂಗಳೂರು ಮೇ 25: ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಬುಧವಾರವೂ ಜನರನ್ನು ಹೈರಾಣಾಗಿಸಿದೆ. ಬುಧವಾರ ಸಂಜೆ ಸುರಿದ ಮಳೆಗೆ ಜನಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಹಲವಾರು ಮರಗಳು ಧರೆಗುರುಳು, ಹಲವು ರಸ್ತೆಗಳು ಜಲಾವೃತಗೊಂಡಿದ್ದರಿಂದ ನಗರದ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲವೆಡೆ ಆಲಿಕಲ್ಲು, ಗುಡುಗು, ಮಿಂಚು ಸಹ ಕಾಣಿಸಿಕೊಂಡಿದೆ.
Bengaluru 😍 #BengaluruRains #Bengaluru #bengalururain #hailstone #CSKvsGT #RCB pic.twitter.com/01Aqa3Cf7D
— Suburulzz (@Suburulzz1) May 23, 2023
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವರ ಕರಾವಳಿ ಕರ್ನಾಟಕ, ದಕ್ಷಿಣ ಒಳ ಕರ್ನಾಟಕ (ಎಸ್‌ಐಕೆ) ಯ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಆಂತರಿಕ ಕರ್ನಾಟಕದ (ಎನ್‌ಐಕೆ) ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಹೇಳಿದೆ.

ಇಲಾಖೆಯು ಮುಂದಿನ 28 ಗಂಟೆಗಳಲ್ಲಿ ದಕ್ಷಿಣ ಒಳ ಕರ್ನಾಟಕದ ಹಲವು ಸ್ಥಳಗಳಲ್ಲಿ, ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಆಂತರಿಕ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಶುಕ್ರವಾರದವರೆಗೆ ಗುಡುಗು, ಬಿರುಗಾಳಿ ಸಹಿತ ಗಾಳಿಯ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಐಎಂಡಿ ಹೇಳಿದೆ.
ಇದರಿಂದಾಗಿ ಶುಕ್ರವಾರದವರೆಗೆ ರಾಜ್ಯದ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ವಿಜಯಪುರದಲ್ಲಿ ಬುಧವಾರ 40.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಶುಕ್ರವಾರದವರೆಗೆ ಬೆಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ಬಲವಾದ ಬಿರುಸಿನ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದ್ದು, ಮೋಡ ಕವಿದ ವಾತಾವಣ ಇರಲಿದೆ ಎಂದು IMD ಮುನ್ಸೂಚನೆ ನೀಡಿದೆ.

ಕಳೆದ ಹಲವು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ವೇಳೆ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ನಗರದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಹಲವೆಡೆ ರಸ್ತೆಗಳು, ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ನಗರವನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಸದ್ಯ ಮಳೆಯಿಂದಾಗಿ ಜನ ಎದುರುರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರವಾಹ ಮತ್ತು ಆಲಿಕಲ್ಲು ಮಳೆಯ ದೃಶ್ಯಗಳನ್ನು ಟ್ವಿಟ್ಟರ್ ನಲ್ಲಿ ತುಂಬಿ ಹೋಗಿವೆ.
"ಗರಿಷ್ಠ ಮತ್ತು ಕನಿಷ್ಠ ತಾಪಮಾನ (ಬೆಂಗಳೂರಿನಲ್ಲಿ) ಕ್ರಮವಾಗಿ 33 ಮತ್ತು 21 ಡಿಗ್ರಿ ಸೆಲ್ಸಿಯಸ್ ಆಗಿರಬಹುದು" ಎಂದು IMD ಹೇಳಿದೆ.
ಬೆಂಗಳೂರಿನಲ್ಲಿ ರಾಜಕಾಲುವೆ ಉಕ್ಕಿ ಹರಿಯುತ್ತಿದ್ದು ಮನೆಗಳಿಗೆ ಮಳೆ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಬೊಮ್ಮನಕರೆಯ ಜನ ಹೈರಾಣಾಗಿದೆ. ಹೆಗಡೆ ನಗರ, ಜಕ್ಕೂರು ಲೇಔಟ್, ಕಾಫಿ ಬೋರ್ಡ್ ಲೇಔಟ್, ಜೆ.ಪಿ.ನಗರ, ಜಯನಗರ, ಉಳ್ಳಾಲ, ಆರ್.ಟಿ.ನಗರ, ಬಾಗಲೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ10ಕ್ಕೂ ಹೆಚ್ಚು ಮರಗಳು ಬುಡಸಮೇತ ನೆಲಕ್ಕುರುಳಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿದ್ದವು. ಮಳೆ ನೀರು ಶೇಖರಣೆಯಾಗಿದ್ದ ಕೆಲವೊಂದು ಅಂಡರ್‌ಪಾಸ್‌ಗಳಲ್ಲಿಸುರಕ್ಷತೆ ದೃಷ್ಟಿಯಿಂದ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ರಸ್ತೆಗಳಲ್ಲಿಅಡಿಗಟ್ಟಲೆ ನೀರು ನಿಂತಿದ್ದರಿಂದ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಇನ್ನೂ ಕಲಬುರಗಿ, ಬಾಗಲಕೋಟೆಯಲ್ಲಿ ಮಳೆ ವೇಳೆ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಸಿರಸಿಯಲ್ಲಿ ಸಾಲು ಸಾಲು ಮರಗಳು ಉರುಳಿ ಬಿದ್ದ ಪರಿಣಾಮ ಹಲವಾರು ಮನೆಗಳಿಗೆ ಹಾನಿಯಾಗಿದೆ. ಚಿತ್ರದುರ್ಗದಲ್ಲಿ ಓಬವ್ವ ಸ್ಟೇಡಿಯಂ ರಸ್ತೆಯಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇತ್ತ ರೈತಾಪಿ ವರ್ಗದ ಬೆಳೆ ನಾಶವಾಗಿದ್ದು ರೈತನಿಗೆ ದಿಕ್ಕು ತೋಚದಂತಾಗಿದೆ.












Click it and Unblock the Notifications