ಬೆಂಗಳೂರಲ್ಲಿ ಗುಡುಗು ಸಹಿತ ಮಳೆ ಆರ್ಭಟ, ಜನರ ಪರದಾಟ
ಬೆಂಗಳೂರು, ನವೆಂಬರ್ 15; ಬೆಂಗಳೂರು ನಗರದಲ್ಲಿ ಸಂಜೆಯ ಬಳಿಕ ಗುಡುಗು ಸಹಿತ ಮಳೆಯು ಆರ್ಭಟಿಸುತ್ತಿದೆ. ಈಗಾಗಲೇ ನಗರದ ಜನರು ಮಳೆ ಬಿಟ್ಟರೆ ಸಾಕು ಎಂದು ಅಂದಾಜಿಸುತ್ತಿದ್ದು, ಸಂಜೆ ಮಳೆಯ ಮತ್ತೆ ಮಳೆ ಮುಂದುವರೆಯುವ ಸೂಚನೆ ನೀಡಿದೆ.
ಸೋಮವಾರ ಸಂಜೆ 4 ಗಂಟೆಯ ಬಳಿಕ ನಗರದ ವಿವಿಧ ಬಡಾವಣೆಗಳಲ್ಲಿ ಮಳೆ ಆರಂಭವಾಯಿತು. ಗಡುಗಿನ ಆರ್ಭಟವೂ ಜೋರಾಗಿತ್ತು. ಸಂಜೆ 8 ಗಂಟೆಯ ತನಕ ಧಾರಾಕಾರ ಮಳೆ ಸುರಿದಿದ್ದು, ಜನರು ಪರದಾಡುವಂತಾಯಿತು.
ಕರ್ನಾಟಕ; ನವೆಂಬರ್ 15ರಂದು ಡ್ಯಾಂಗಳ ನೀರಿನ ಮಟ್ಟ
ಭಾನುವಾರ ಬೆಳಗ್ಗೆಯಿಂದ ನಗರಲ್ಲಿ ಮಳೆ ಕೊಂಚ ಬಿಡುವು ನೀಡಿತ್ತು. ಸೋಮವಾರ ಬೆಳಗ್ಗೆ ನೀಲಿ ಆಕಾಶ, ಸೂರ್ಯನ ಬೆಳಕು ಕಂಡ ಜನರು ಅಂತೂ ಮಳೆ ಹೋಯಿತು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಸಂಜೆ ಮತ್ತೆ ಭಾರೀ ಮಳೆಯಾಗಿದೆ.
ಮುಂದಿನ 2 ದಿನ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ
ಜಯನಗರ, ಹನುಂತನಗರ, ವಿದ್ಯಾಪೀಠ ವೃತ್ತ, ಕತ್ರಿಗುಪ್ಪೆ, ರಾಮಕೃಷ್ಣ ಆಶ್ರಮ ಸರ್ಕಲ್, ಶಾಂತಿನಗರ, ಮೆಜೆಸ್ಟಿಕ್, ಲಾಲ್ ಭಾಗ್, ಕೆ. ಆರ್. ಸರ್ಕಲ್, ರಿಚ್‌ಮಂಡ್ ಸರ್ಕಲ್, ವಿಲ್ಸನ್ ಗಾರ್ಡನ್, ಕೋರಮಂಗಲ, ಜೆ. ಪಿ. ನಗರ ಸೇರಿದಂತೆ ವಿವಿಧ ಕಡೆ ಮಳೆಯು ಆರ್ಭಟಿಸಿದೆ.
ಮಂಡ್ಯದಲ್ಲಿ ಮಳೆ ಅವಾಂತರ; ರಾತ್ರಿಪೂರ್ತಿ ನಿದ್ದೆಬಿಟ್ಟ ಜನ
ಸಂಜೆ ವೇಳೆಗೆ ಮಳೆ ಆರಂಭವಾಗಿದ್ದು ಬಳಿಕ ಆರ್ಭಟ ಜೋರಾಯಿತು. ಹಲವು ರಸ್ತೆಗಳು ಜಲಾವೃತಗೊಂಡವು. ಕಚೇರಿಗಳಿಂದ ಮನೆಗೆ ತೆರಳುವ ವಾಹನ ಸವಾರರು ಮಳೆಯಿಂದಾಗಿ ಪರದಾಡಿದರು. ಅಂಗಡಿಗಳ ಕೆಳಗೆ, ಫ್ಲೈ ಓವರ್ ಕೆಳಗೆ ನಿಂತು ಮಳೆಯಿಂದ ಆಶ್ರಯ ಪಡೆದರು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ನಗರದಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕಳೆದ ವಾರ ತಾಪಮಾನ 17 ರಿಂದ 18 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಆಗಾಗ ತುಂತುರು ಮಳೆಯಾಗುತ್ತಿತ್ತು.
ಶನಿವಾರದಿಂದ ಮಳೆ ಕೊಂಚ ಬಿಡುವು ನೀಡಿತ್ತು. ಆದರೆ ಶೀತಗಾಳಿ, ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ನವೆಂಬರ್ 17ರ ತನಕ ಮಳೆ ಮುಂದುವರೆಯಲಿದೆ ಎಂದು ಹೇಳಿದೆ.
ಬೆಂಗಳೂರು ನಗರದಲ್ಲಿ ಇನ್ನೂ 48 ಗಂಟೆಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಮೋಡ ಕವಿದ, ಶೀತಗಾಳಿಯ ವಾತಾವರಣವೂ ಮುಂದುವರೆಯಲಿದೆ. ಇದರಿಂದಾಗಿ ಬೆಂಗಳೂರಿನ ಜನರು ಎರಡು ದಿನ ಮಳೆಯನ್ನು ಸಹಿಸಿಕೊಳ್ಳಬೇಕಿದೆ.
ನವೆಂಬರ್ 15 ರಿಂದ 17ರ ತನಕ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಅಂಡಮಾನ್ ಭಾಗದಲ್ಲಿ ಉಂಟಾಗಿದ್ದ ವಾಯಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆಯಾಗಲಿದೆ. ಬಳಿಕ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಮಳೆಯಿಂದ ಹಾನಿ ಉಂಟಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದರು.
ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಬಾಯಿ ತೆರೆದಿವೆ. ಕೆಲವು ದಿನಗಳ ಹಿಂದೆ ಬಿಬಿಎಂಪಿಯಿಂದ ಗುಂಡಿಗಳನ್ನು ಮುಚ್ಚಲಾಗಿತ್ತು. ಈಗ ಪುನಃ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ.