Bengaluru Rain: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅವಾಂತರ: ಸಿಎಂ, ಡಿಸಿಎಂ ಹೇಳಿದ್ದೇನು ?
Heavy Rain in Bengaluru: ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಆಗುತ್ತಿದ್ದು. ಮಳೆ ಅವಾಂತರ ಮುಂದುವರಿದಿದೆ. ನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ರಚನೆಯ ಗೊಂದಲದ ನಡುವೆ ನಗರದಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಯಾಗಿದ್ದು. ಇದಕ್ಕೆ ಕಳೆದ ಐದು ವರ್ಷಗಳಿಂದ ಚುನಾವಣೆ ನಡೆಸದೆ ಇರುವುದೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಭಾರೀ ಮಳೆ ಅವಾಂತರ ಮುಂದುವರಿದಿದೆ. ಹಲವು ರಸ್ತೆಗಳು ಜಲಾವೃತವಾಗಿದ್ದು. ಜನ ಸುಸ್ತಾಗಿದ್ದಾರೆ. ಇದರ ನಡುವೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಯಾಕ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಆಳವಿಲ್ಲದೆ ಚಿಕ್ಕದಾಗಿವೆ. ಜೊತೆಗೆ ಹೂಳು ತುಂಬಿದೆ. ಹೂಳು ತೆರವು ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅನೇಕ ಬಾರಿ ಸೂಚನೆ ನೀಡಲಾಗಿದೆ. ಇನ್ನೂ ಕಾಮಗಾರಿಗಳು ನಡೆಯುತ್ತಿವೆ. 859.90 ಕಿ.ಮೀ ಉದ್ದದ ರಾಜಕಾಲುವೆಗಳು ಇವೆ. ಇಲ್ಲಿಯವರೆಗೆ 491 ಕಿ.ಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 195 ಕಿ.ಮೀ ಉದ್ದದ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ 173 ಕಿ.ಮೀ ಉದ್ದದ ರಾಜಕಾಲುವೆಗಳನ್ನು ವರ್ಲ್ಡ್ ಬ್ಯಾಂಕ್ ನೆರವಿನಿಂದ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮುಂದುವರಿದು ರಾಜಕಾಲುವೆಗಳಾಗದೆ ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದು ಕಷ್ಟ. ಬೆಂಗಳೂರಿನಲ್ಲಿ ಇಲ್ಲಿಯ ವರೆಗೆ ಅಂದಾಜು 210 ತಗ್ಗು ಪ್ರದೇಶಗಳನ್ನು ಸೂಕ್ಷ್ಮ ಎಂದು ಹಾಗೂ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. 166 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಬಾಕಿ 44 ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 24 ಕಾಮಗಾರಿ ನಡೆಯುತ್ತಿದೆ. ಈ ಕೆಲಸಗಳು ಪೂರ್ಣಗೊಂಡರೆ ಈ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ. ವೈಟ್ ಫೀಲ್ಡ್ ನಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು ದುಃಖದ ವಿಷಯ. ಸರ್ಕಾರದ ವತಿಯಿಂದ ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದಿದ್ದಾರೆ.
ಅಲ್ಲದೇ ಬೆಂಗಳೂರಿನ 4292 ಕಡೆ ಒತ್ತುವರಿಯಾಗಿದ್ದು, ಈ ಪೈಕಿ 2326 ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಒತ್ತುವರಿಯಾಗದಂತೆ ನೋಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸೋಮವಾರ ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ವಾಹನ ಸವಾರರಿಗೆ ತೊಂದರೆ
ಆಗುತ್ತದೆ ಎಂದು ಕೆಲವು ಸ್ಥಳಗಳಿಗೆ ಮಾತ್ರ ಭೇಟಿ ನೀಡಿದ್ದೇನೆ. ನಾಡಿದ್ದು ಇಡೀ ದಿನ ಉಪ
ಮುಖ್ಯಮಂತ್ರಿ ಹಾಗೂ ಬೆಂಗಳೂರಿನ ಶಾಸಕರೊಂದಿಗೆ ನಗರದ ಮಳೆಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತೇನೆ.

ನಗರದ ಎಲ್ಲ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸುತ್ತೇನೆ. ಅಧಿಕಾರಿಗಳು ಯಾವೆಲ್ಲ ಕ್ರಮ ವಹಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಇನ್ನು ಬೆಂಗಳೂರಿನ ಮಳೆ ಅವಾಂತರದ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿನ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ, ನಮ್ಮ ಕರ್ತವ್ಯ; ಅದಕ್ಕೆ ನಾವು ಬದ್ಧರಿದ್ದೇವೆ.
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಿವಿಧೆಡೆ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ನಿರೀಕ್ಷೆಗಿಂತ ಹೆಚ್ಚು, ಅಂದರೆ 104 ಮಿ.ಮೀ. ಮಳೆಯಾಗಿದೆ. ವೈಟ್‌ಫೀಲ್ಡ್‌ನಲ್ಲಿ ಓರ್ವ ಮಹಿಳೆಯ ಮೇಲೆ ಗೋಡೆ ಬಿದ್ದು ಮೃತಪಟ್ಟಿದ್ದು, ಆಕೆಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಒದಗಿಸುತ್ತಿದ್ದೇವೆ. ಪ್ರಕೃತಿಯ ವಿಕೋಪಗಳು ಯಾರೂ ಊಹಿಸಿಕೊಳ್ಳಲಾಗದ್ದು ಎಂದಿದ್ದಾರೆ.
ರಾಜಕಾಲುವೆಗಳ ಒತ್ತುವರಿ, ಒಳಚರಂಡಿಗಳು ವ್ಯವಸ್ಥಿವಾಗಿರದಿರುವುದರಿಂದ ಮಳೆನೀರು ಅಲ್ಲಲ್ಲಿ ನಿಲ್ಲುತ್ತಿದೆ. ಬೆಂಗಳೂರಿನಲ್ಲಿ 859 ಕಿ.ಮೀ. ರಾಜಕಾಲುವೆ ಇದ್ದು, 491 ಕಿ.ಮೀ. ರಾಜಕಾಲುವೆಗೆ ಈಗಾಗಲೇ ತಡೆಗೋಡೆ ನಿರ್ಮಿಸಲಾಗಿದೆ. 197 ಕಿ.ಮೀ. ತಡೆಗೋಡೆ ಕಾಮಗಾರಿ ನಡೆಯುತ್ತಿದೆ.
171 ಕಿ.ಮೀ. ಉದ್ದದ ರಾಜಕಾಲುವೆಯ ಕೆಲಸ ವಿಶ್ವಬ್ಯಾಂಕ್‌ನ ನೆರವಿನಿಂದ ನಡೆಯಲಿದೆ. ಈ ಕಾಮಗಾರಿಗಳು ಪೂರ್ಣಗೊಳ್ಳದ ಹೊರತು ನೀರು ನಿಲ್ಲುವುದನ್ನು ತಪ್ಪಿಸಲು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಬೆಂಗಳೂರಿನಾದ್ಯಂತ 210 ಸೂಕ್ಷ್ಮ- ಅತಿಸೂಕ್ಷ್ಮ ತಗ್ಗು ಪ್ರದೇಶಗಳನ್ನು ಗುರುತಿಸಿದ್ದೇವೆ. ಈ ಪೈಕಿ 166ರಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. 44ರಲ್ಲಿ ತಾತ್ಕಾಲಿಕ ಕಾಮಗಾರಿ ಪ್ರಗತಿಯಲ್ಲಿದೆ. ಸಂಚಾರ ವಿಭಾಗದ ಪೊಲೀಸರು ಕೂಡ 132 ಸೂಕ್ಷ್ಮ ಜಾಗಗಳನ್ನು ಗುರುತಿಸಿಕೊಟ್ಟಿದ್ದಾರೆ.
ಈ ಪೈಕಿ ಏಪ್ರಿಲ್ ಒಳಗೆ 82ರಲ್ಲಿ ಕ್ರಮ ಕೈಗೊಂಡಿದ್ದು, ಬಾಕಿ ಇರುವ 50ನ್ನೂ ಮುಗಿಸುತ್ತೇವೆ. ಈವರೆಗೆ 4292 ಒತ್ತುವರಿಗೆ ಸಂಬಂಧಿಸಿದಂತೆ ಪ್ರಕರಣಗಳಿದ್ದು, ಈ ಪೈಕಿ 2326 ಕಡೆ ತೆರವು ಮಾಡಿದ್ದೇವೆ. ಉಳಿದವನ್ನೂ ಮಾಡುತ್ತೇವೆ.
ಸಿಲ್ಕ್‌ಬೋರ್ಡ್ ಜಂಕ್ಷನ್, ಹೆಬ್ಬಾಳದಿಂದ ಯಲಹಂಕದ ಬಳಿ ರೈಲ್ವೆ ಪಾಯಿಂಟ್ ಸಮೀಪ ಕಾಮಗಾರಿಗಳು ನಡೆಯುತ್ತಿದೆ. ಅಲ್ಲೇ ಹೆಚ್ಚು ಮಳೆಯಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಕೆಲವು ಕಾಮಗಾರಿಗಳನ್ನು ನಡೆಸದಿರಲು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ತುರ್ತು ಕಾಮಗಾರಿಗಳಿಗೆ ಅಡ್ಡಿ ಮಾಡದಿರಲು ತಿಳಿವಳಿಕೆ ನೀಡಿದ್ದೇವೆ ಎಂದರು.
ಮಳೆ- ಗಾಳಿಯಿಂದ ಬೀಳುವ ಮರಗಳನ್ನು ಕೂಡಲೇ ತೆರವು ಮಾಡಲು 33 ಖಾಯಂ ಟೀಮ್, 13 ಕ್ಷಿಪ್ರ ಕಾರ್ಯಪಡೆ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಮೇ 21ರಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಹಾಗೂ ಬೆಂಗಳೂರು ಶಾಸಕ- ಸಚಿವ ಮಿತ್ರರೊಂದಿಗೆ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡು, ಇನ್ನಷ್ಟು ಪರಿಸ್ಥಿತಿ ಅವಲೋಕನ ಮಾಡಲಿದ್ದೇವೆ. ಕ್ರಮ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆ ರೂಪಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಸಾರ್ವಜನಿಕರಿಂದ ಆಕ್ರೋಶ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ಬಾರಿ ಬೆಂಗಳೂರಿನಲ್ಲಿ ಮಳೆ ಸಮಸ್ಯೆ ಆದಾಗಲೂ ಇದೇ ಕಥೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಸಕಾಲದಲ್ಲಿ ನಡೆಸಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications