ನೋಡ ಬನ್ನಿ ನಮ್ಮ ಬೆಂಗಳೂರಾ.. ತೇಲುತಿಹೆ ನೋಡಾ..
ಗೌರಿ ಹಬ್ಬಕ್ಕೆ ಮುನ್ನಾದಿನದ ರಾತ್ರಿ ಸುರಿದ ಮಳೆಯಿಂದ ಇನ್ನೂ ಬೆಂಗಳೂರಿಗರು ಚೇತರಿಸಿಕೊಂಡಿಲ್ಲ. ಈಗ ಅಂತದ್ದೇ ಕುಂಭದ್ರೋಣ ಮಳೆ ಮತ್ತೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ. ಮತ್ತೆ ರಾಷ್ಟ್ರ ಮಟ್ಟದಲ್ಲಿ ಬೆಂಗಳೂರಿನ ಮರ್ಯಾದೆ ಹೋಗಲು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಕೊರೊನಾ ವರ್ಕಫ್ರಂ ಹೋಂನಿಂದ ಕಚೇರಿ ಕಡೆಗೆ ಆಗಮಿಸುವಂತೆ ಹಲವು ಸಂಸ್ಥೆಗಳು ಸೂಚಿಸಿದ್ದವು. ಆದರೆ, ರಸ್ತೆಯಲ್ಲಿ ನೀರು ಅಡಿ ಎತ್ತರದಲ್ಲಿ ನಿಂತಿದ್ದರಿಂದ, ವರ್ಕಫ್ರಂ ಹೋಂ ಮುಂದುವರಿಸಿ ಎಂದು ಉದ್ಯೋಗಿಗಳಿಗೆ ಸಂಸ್ಥೆಗಳು ಸೂಚಿಸಿವೆ.
ಮಳೆಯ ಭಯಾನಕ ಅನುಭವಕ್ಕೆ ಮತ್ತೆರಡು ದಿನ ಬೆಂಗಳೂರಿಗರು ಸಾಕ್ಷಿಯಾಗಬೇಕಾಗಿದೆ. ಕಾರಣ, ಹವಾಮಾನ ಇಲಾಖೆ ಮತ್ತು ಗೂಗಲ್ ತೋರಿಸುತ್ತಿರುವ ಮಳೆಯ ಮುನ್ಸೂಚನೆಯ ವರದಿ. ಭಾನುವಾರ (ಸೆ 4) ಬಿದ್ದಷ್ಟೇ ಮಳೆ ಮತ್ತೆ ಎರಡು ದಿನ ಸುರಿಯಲಿದೆ ಎನ್ನುತ್ತದೆ ವರದಿ.
ಮಳೆಯಿಂದ ರಸ್ತೆಯಲ್ಲಿ ನೀರು, ಮನೆಯೊಳಗೆ ನೀರು ಬರುವ ವಿಚಾರದಲ್ಲಿ ಬೆಂಗಳೂರು ದಕ್ಷಿಣ ಮಾತ್ರ ಸ್ವಲ್ಪ ಸೇಫ್ ಎನ್ನಬಹುದಾಗಿದೆ. ಮಿಕ್ಕೆಲ್ಲಾ ಕಡೆ ಕೊಂಚ ಮಳೆ ಬಿದ್ದರೂ ಬೆಂಗಳೂರಿನ ಮೂಲಭೂತ ಸೌಕರ್ಯ ಇದನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿಲ್ಲ ಎನ್ನುವುದು ಮತ್ತೆಮತ್ತೆ ಸಾಬೀತಾಗುತ್ತಿದೆ.

ಬೆಳ್ಳಂದೂರು, ಎಚ್ಎಸ್ಆರ್ ಲೇಔಟ್, ಸರ್ಜಾಪುರ, ಮಹದೇವಪುರ
ಬೆಂಗಳೂರು ಪೂರ್ವ ಮತ್ತು ಆಗ್ನೇಯ ಭಾಗದಲ್ಲಿ ಅದರಲ್ಲಿ ಪ್ರಮುಖವಾಗಿ ಬೆಳ್ಳಂದೂರು, ಎಚ್ಎಸ್ಆರ್ ಲೇಔಟ್, ಸರ್ಜಾಪುರ, ಮಹದೇವಪುರ ಭಾಗದಲ್ಲಿ ವಾರದ ಹಿಂದೆ ಯಾವ ಪರಿಸ್ಥಿತಿ ಎದುರಾಗಿತ್ತೋ, ಮತ್ತದೇ ಪರಿಸ್ಥಿತಿ ಎದುರಾಗಿದೆ. ಒಂದು ಹಂತಕ್ಕೆ ಮೊನ್ನೆಯ ಪರಿಸ್ಥಿತಿಗಿಂತಲೂ ಕೆಟ್ಟ ಅನುಭವ ಎನ್ನುವ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಬೆಳ್ಳಂದೂರು ಔಟರ್ ರಿಂಗ್ ರೋಡ್ ನಲ್ಲಿ ಅಡಿ ಎತ್ತರದ ನೀರನ್ನು ದಾಟಲು ಜನರು ಹರಸಾಹಸ ಪಡುತ್ತಿದ್ದಾರೆ.
|
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ನಗರದ ಮಾನ ಮತ್ತೆ ಹರಾಜಾಗಿದೆ. ಭೂಅತಿಕ್ರಮ, ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಸಾರ್ವಜನಿಕ ಇಚ್ಚಾಶಕ್ತಿಯ ಕೊರೆತೆಯ ಪ್ರತಿಫಲವನ್ನು ಬೆಂಗಳೂರಿಗರು ಅನುಭವಿಸುತ್ತಿದ್ದಾರೆ. 'ತೇಲುತಿಹೆ ನೋಡಾ.. ನಮ್ಮ ಬೆಂಗಳೂರಾ..' ಎಂದು ಸಾಮಾಜಿಕ ಜಾಲತಾಣದಲ್ಲಿ ಅಣಕವಾಡಲಾಗುತ್ತಿದೆ.

ಟ್ರಾವೆಲ್ಸ ಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಬೇಸರ
"ಸರಕಾರ ಬಡವರ ಮೇಲೆ ಪ್ರಭಾವ ಬೀರಬಹುದೇ ಹೊರತು ಕೆರೆ ಒತ್ತುವರಿ ಮಾಡಿದವರ ಮೇಲೆ ಒತ್ತಡ ಹಾಕು ಸಾಧ್ಯವೇ?
ಯಾರೋ ಬಲಶಾಲಿಗಳು ಭೂಮಿ ಒತ್ತುವರಿ ಮಾಡಿ ಅವೈಜ್ಞಾನಿಕ ವಾಣಿಜ್ಯ ಸಮುಚ್ಚಯ, ಎಪಾರ್ಟ್ಮೆಂಟ್ ಗಳನ್ನು ನಿರ್ಮಿಸಿದ್ದರಿಂದ, ನಿತ್ಯ ದುಡಿದು ತಿನ್ನುವ ನಗರದ ಮಂದಿಗೆ ಕಷ್ಟ ಎದುರಾಗಿದೆ. ರಾಜಕಾಲುವೆ ಒತ್ತುವರಿ, ಮಳೆನೀರು ನಿಲ್ಲುವ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣದಿಂದ ನಗರ ಒಂದು ಮಳೆ ಬಂದರೆ ಅದನ್ನು ತಡೆದುಕೊಳ್ಳುತ್ತಿಲ್ಲ"ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಬೇಸರ ವ್ಯಕ್ತ ಪಡಿಸಿದ್ದಾರೆ.
|
ಅರ್ಥ್ ಲೈವ್ ನ ಸಂಸ್ಥಾಪಕರು ಟ್ವೀಟ್
"ನಿನ್ನೆ ರಾತ್ರಿಯ ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಹಲವು ಭಾಗಗಳು ಜಲಾವೃತಗೊಂಡಿದೆ. ಇಲ್ಲಿಯವರೆಗೆ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಸುಂದರ ನಗರಕ್ಕೆ ಕಷ್ಟದ ದಿನಗಳು ಕೊನೆಗೊಳ್ಳುತ್ತಿಲ್ಲ. ಸಂಪೂರ್ಣ ಆಡಳಿತದ ಕೊರತೆ ಮತ್ತು ಅತಿರೇಕದ ಭ್ರಷ್ಟಾಚಾರದಿಂದ ನಮ್ಮ ನಗರದ ಹೃದಯವಿದ್ರಾವಕ ದೃಶ್ಯಗಳು ನೋಡುವಂತಾಗಿದೆ" ಎಂದು ಅರ್ಥ್ ಲೈವ್ ನ ಸಂಸ್ಥಾಪಕರು ಟ್ವೀಟ್ ಮಾಡಿದ್ದಾರೆ.












Click it and Unblock the Notifications