ಅವರು ಹಿಟ್ ಅಂಡ್ ರನ್ ಕುಮಾರಸ್ವಾಮಿ: ಶಾಸಕ ಬಾಲಕೃಷ್ಣ
ಬೆಂಗಳೂರು, ಜುಲೈ 11: ನಮ್ಮ-ಅವರ ಮಧ್ಯೆ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳಿವೆ. ಯಾವುದು ಅಂತ ಹೇಳೋದು? ಎಲ್ಲವನ್ನೂ ಹೇಳೋದಿಕ್ಕೂ ಆಗಲ್ಲ ಅಂತಲೇ ಮಾತಿಗಾರಂಭಿಸಿದರು ಮಾಗಡಿ ಶಾಸಕ, ಜೆಡಿಎಸ್ ನ ಭಿನ್ನಮತೀಯ ಶಾಸಕ ಎಚ್ ಸಿ ಬಾಲಕೃಷ್ಣ.
ಸೂಟ್ ಕೇಸ್ ತಗೊಳ್ತಿದ್ದವರು, ಮುಂಚೂಣಿ ಸಾಲಿನಲ್ಲಿ ಕೂರುತ್ತಿದ್ದವರು ಈಗ ಪಕ್ಷ ಬಿಟ್ಟು ಹೋಗಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಒನ್ಇಂಡಿಯಾ ಕನ್ನಡ ಬಾಲಕೃಷ್ಣ ಅವರಿಗೆ ಕರೆ ಮಾಡಿತ್ತು.

ಅವರು ಹಿಟ್ ಅಂಡ್ ರನ್ ಕುಮಾರಸ್ವಾಮಿ ಅಂತ ನಿನ್ನೆಯೇ ಹೇಳಿದ್ದೇನೆ. ಇನ್ನೇನು ಹೇಳಬಹುದು ಅಂತ ಪ್ರಶ್ನಿಸಿದರು. ಈ ರೀತಿ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡ್ತೀರಾ ಎಂಬ ಪ್ರಶ್ನೆಗೆ, ಅವರ ಹತ್ತಿರ ಎಂಥ ಕಾನೂನು ಹೋರಾಟ? ಆರೋಪಕ್ಕೆ ಸಂಬಂಧಿಸಿದಂತೆ ಯಾರಾದರೂ ಎಸಿಬಿಗೆ ದೂರು ಕೊಡಬೇಕು ಅಷ್ಟೇ ಎಂದರು.
ನಮ್ಮ ಮೇಲೆ ಅವರಿಗೆ ನಂಬಿಕೆ ಇಲ್ಲ. ಅದರಿಂದಲೇ ಇಂದಿನ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಎಚ್ ಡಿಕೆ ಹಾಗೂ ತಮ್ಮ ಮಧ್ಯದ ಭಿನ್ನಾಭಿಪ್ರಾಯಕ್ಕೆ ಕಾರಣ ತೆರೆದಿಟ್ಟ ಅವರು, ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಕೊಟ್ಟರೆ ಆ ಪಕ್ಷದಿಂದ ಸ್ಪರ್ಧಿಸುವುದಾಗಿ ತಿಳಿಸಿದರು.
ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮಾತು-ಆಲೋಚನೆಗಳಲ್ಲಿ ಬಹಳ ವ್ಯತ್ಯಾಸ ಅಂತ ನಿಮಗೆ ಅಸಮಾಧಾನ ಇದೆಯಾ ಎಂಬ ಪ್ರಶ್ನೆಗೆ, ಅದು ಅವರ ವೈಯಕ್ತಿಕ ಹಾಗೂ ಪಕ್ಷದ ವಿಚಾರ. ಅದು ನಮಗೆ ಯಾಕೆ ಎಂದು ಮಾತು ಮುಗಿಸಿದರು.
ಈಚೆಗೆ ಹುಣಸೂರಿನಲ್ಲಿ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ, ಪಕ್ಷದಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ. ಅಂಥವರು ಮುಂದಿನ ಕುರ್ಚಿಯಲ್ಲಿ ಕೂರುತ್ತಾರೆ ಎಂಬ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಚ್ ಡಿಕೆ, ಸೂಟ್ ಕೇಸ್ ಪಡೆಯುತ್ತಿದ್ದದ್ದು ನಿಜ. ಅವರೀಗ ಮನೆ ಬಿಟ್ಟು ಹೋಗಿದ್ದಾರೆ ಎಂದು ಜೆಡಿಎಸ್ ಭಿನ್ನಮತೀಯ ಶಾಸಕರಿಗೆ ಟಾಂಗ್ ನೀಡಿದ್ದರು.












Click it and Unblock the Notifications