ಲೋಕಸಭಾ ಚುನಾವಣೆಗೆ ಉಪ ಚುನಾವಣೆಯೇ ಸೆಮಿಫೈನಲ್: ಎಚ್ಡಿಕೆ
ಬೆಂಗಳೂರು, ಅಕ್ಟೋಬರ್ 15: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ನಡೆಯುವ ಐದು ಉಪ ಚುನಾವಣೆ ಸೆಮಿಫೈನಲ್ ಆಗಲಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಸಂಪೂರ್ಣ ಮೇಲುಗೈ ಸಾಧಿಸಲಿದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಮೈತ್ರಿ ಕೂಟದ ಅಭ್ಯರ್ಥಿಯಾಗುತ್ತಿರುವುದು ದೇವರ ತೀರ್ಮಾನ, ದೈವ ಇಚ್ಛೆಯಿಂದಲೇ ಇಂಥಹದ್ದೊಂದು ಬೆಳವಣಿಗೆ ನಡೆದಿದೆ.
ಜೆಡಿಎಸ್ ನ ಇಬ್ಬರು ಸಂಸದರು ಕೂಡ ವಿಧಾನಸಭೆ ಚುನಾವಣೆಯಲ್ಲಿ ಸೋತು ಲೋಕಸಭೆಗೆ ಸ್ಪರ್ಧಿಸಿ ಜಯಗಳಿಸಿರುವ ಉದಾಹರಣೆಗಳಿವೆ ಎಂದು ಸಿಎಸ್ ಪುಟ್ಟರಾಜು ಹಾಗೂ ಚೆಲುವರಾಯಸ್ವಾಮಿಯವರ ಹೆಸರನ್ನೂ ಹೇಳದೆ ಉಲ್ಲೇಖಿಸಿದ ಕುಮಾರಸ್ವಾಮಿ, ಮಧು ಬಂಗಾರಪ್ಪ ಕೂಡ ಅವರ ತಂದೆ ದಿವಂಗತ ಬಂಗಾರಪ್ಪನವರು ಸ್ಪರ್ಧಿಸಿದ್ದ ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್ ಹಾಗೂ ದೇವೇಗೌಡರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೇವೆ. ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆ ನಾಮಪತ್ರ ಪ್ರಕ್ರಿಯೆ ಆರಂಭವಾಗಿದೆ. ಅಪವಿತ್ರ ಮೈತ್ರಿ ಎಂದು ಬಿಜೆಪಿ ಕಠೋರ ಪದ ಬಳಕೆ ಮಾಡಿದೆ ಈ ಬಗ್ಗೆ ಜನತೆ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ನೋವಿತ್ತು. ಆದರೆ ಈಗ ಲೋಕಸಭಾ ಅಭ್ಯರ್ಥಿಯಾಗಿ ಆಗಿದ್ದಾರೆ, ಈಗ ನನಗಿದ್ದ ಕೊರಗು ನಿವಾರಣೆಯಾಗಿದೆ. ಶಿವಮೊಗ್ಗ ಜನರ ಆಶೀರ್ವಾದ ಪಡೆದು ಮಧು ಗೆಲ್ಲುತ್ತಾರೆ ಎಂದರು.












Click it and Unblock the Notifications