ಬೆಂಗಳೂರು: ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ : ಪೊಲೀಸರಿಗೆ ಎಚ್‌ಡಿ ಕುಮಾರಸ್ವಾಮಿ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 02: ಜೆಡಿಎಸ್ ಪಕ್ಷಕ್ಕೆ ಹೊಸದಾಗಿ ಸೇರ್ಪಡೆ ಆಗುವವರಿಗೂ ಸೇರಿದಂತೆ ಪಕ್ಷದ ಮುಖಂಡರಿಗೆ, ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗುತ್ತಿದೆ. ಇದಕ್ಕೆ ನೀವೆ ಸ್ವಯಂಪ್ರೇರಿತವಾಗಿ ಕಡಿವಾಣ ಹಾಕಿಕೊಳ್ಳದಿದ್ದರೆ.
ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

ಬೆಂಗಳೂರು ಭಾಗದಲ್ಲಿ ಪಂಚರತ್ನ ರಥಯಾತ್ರೆ ಮುಂದುವರೆಸಿರುವ ಕುಮಾರಸ್ವಾಮಿ ಅವರು, ಭಾನುವಾರ ಯಲಹಂಕ ನ್ಯೂ ಟೌನ್ ಸೇರಿದಂತೆ ಕ್ಷೇತ್ರದ ಹಲವಾರು ಕಡೆ ಮತಯಾಚನೆ ಮಾಡಿದರು. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ವೇಳೇ ಅವರು ಪೊಲೀಸರ ನಡೆ, ತಮ್ಮ ಕಾರ್ಯಕರ್ತರ ಮೇಲೆ ಆಗುತ್ತಿದೆ ಎನ್ನಲಾಗುತ್ತಿರುವ ದೌರ್ಜನ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಸೇರಲು ಬರುವ ಮುಖಂಡರು, ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದನ್ನು ಸಹಿಸಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದರು.
ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ತಿಳಿಸುವುದೇನೆಂದರೆ, ಜನರ ತೆರಿಗೆ ದುಡ್ಡಿನಿಂದ ನೀವು ಪ್ರತಿ ತಿಂಗಳು ಸಂಬಳ ಪಡೆಯುತ್ತಿರಿದ್ದೀರಿ. ನೀವು ಅವರ ಸೇವೆ ಮಾಡಬೇಕೆ ಹೊರತು ಯಾರೋ ಒಬ್ಬರು ಶಾಸಕ ಹೇಳಿದಕ್ಕೆಲ್ಲ ತಲೆ ಆಡಿಸುವುದು ನಿಮ್ಮ ಕೆಲಸವಲ್ಲ. ಇನ್ನೂ ಒಂದೇ ತಿಂಗಳು, ಆಗ ಬಿಜೆಪಿ ಸರ್ಕಾರ ಇರುವುದಿಲ್ಲ. ಆಗ ನೀವು ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ನೇರವಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದರು. ಜೊತೆಗೆ ಬಿಜೆಪಿ ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.

ಕಾರ್ಯಕರ್ತರು, ಮುಖಂಡರು ಹೆದರಬೇಕಿಲ್ಲ, ಯಾವುದೇ ಸಂದರ್ಭ ಬಂದರೂ ನೇರವಾಗಿ ನನ್ನನ್ನು ಸಂಪರ್ಕ ಮಾಡಬಹುದು ಎಂದು ಕುಮಾರಸ್ವಾಮಿ ಅವರು ದೈರ್ಯ ತುಂಬಿದರು. ನನಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಎಲ್ಲರೂ ಸುಖ ಶಾಂತಿಯಿಂದ ಇರಬೇಕು ಎಂದು ಬಯಸುವವನು. ಹೀಗಾಗಿ ಇಂಥ ಆಡಳಿತ ಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಹಣ ಲೂಟಿಗೆ ಜೆಡಿಎಸ್ ಇತಿಶ್ರೀ
ಬೆಂಗಳೂರು ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಜನರ ಹಣ ಲೂಟಿ ಮಾಡಲಾಗುತ್ತಿದೆ. ಜನರ ತೆರಿಗೆ ಹಣವನ್ನು ಹೊಡೆದುಕೊಳ್ಳೂವ ಕೆಲಸ ವಾಗುತ್ತಿದೆ. ಮುಂಬರಲಿರುವ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಬಂದರೆ ಇಂತಹ ಭ್ರಷ್ಟಾಚಾರಕ್ಕೆಲ್ಲ ಇತಿಶ್ರೀ ಹಾಡುತ್ತೇನೆ ಎಂದು ಅವರು ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದರು.
ರಾಜಧಾನಿ ಬೆಂಗಳೂರಿನಲ್ಲಿ ಬಡವರಿಗೆ ಉಚಿತ ಮನೆ, ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು. ಅಲ್ಲದೇ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುವುದು. ಸಾಮಾನ್ಯವಾಗಿ ಬಡ ಮಧ್ಯಮ ವರ್ಗದ ಜನರು ಸಾಲ ಮಾಡುವುದೇ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಮನೆ ಕಟ್ಟುವುದಕ್ಕಾಗಿ. ಮುಂದೆ ಇವರು ಶಾಶ್ವತವಾಗಿ ಸಾಲ ಮಾಡುವುದನ್ನು ತಪ್ಪಿಸುವುದೇ ನನ್ನ ಉದ್ದೇಶ ಎಂದರು ಭರವಸೆ ನೀಡಿದರು.
ಕ್ಷೇತ್ರದ ಅಭ್ಯರ್ಥಿ ಮುನೇಗೌಡ, ಮಾಜಿ ಶಾಸಕ ಇ ಕೃಷ್ಣಪ್ಪ, ಪಕ್ಷದ ಯಲಹಂಕ ಕ್ಷೇತ್ರದ ಅಧ್ಯಕ್ಷ ಕೃಷ್ಣಪ್ಪ, ಪಕ್ಷದ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮುಂತಾದವರು ಈ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications