ದಮ್ಮು, ತಾಕತ್ತು ಇದ್ದರೆ 'ರಾಜಕಾಲುವೆ ಐಶಾರಾಮಿ ರಕ್ಕಸರ' ವಿರುದ್ಧ ಕ್ರಮ ಜರುಗಿಸಿ: ಡಿಕೆಶಿಗೆ ಎಚ್.ಡಿ. ಕುಮಾರಸ್ವಾಮಿ ಸವಾಲು
ಬೆಂಗಳೂರು, ಮೇ 30: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಗೆ ಸಾಕಷ್ಟು ಕಡೆ ಹಾನಿ ಆಗಿತ್ತು. ಬಡಾವಣೆಗಳು, ರಸ್ತೆಗಳು ಜಲಾವೃತಗೊಂಡಿ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆ ಪ್ರವಾಸ ಸ್ಥಳಗಳಿಗೆ ಅಧಿಕಾರಿಗಳ ಸಮೂಹದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಡಿಕೆ ಶಿವಕುಮಾರ್ ಪ್ರವಾಹ ಭೇಟಿ ಹಿಂದೆ ಸಣ್ಣದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಮಾನ್ಯತಾ ಟೆಕ್ ಪಾರ್ಕ್ ಬಳಿಗೆ ಭೇಟಿ ಕೊಟ್ಟು ಮಳೆ, ನೆರೆ ಪರಿಸ್ಥಿತಿ ನೋಡುವುದೇನೋ ಸರಿ. ಆದರೆ, ಡಿಕೆಶಿ ಅವರ ಪ್ರವಾಹ ವೀಕ್ಷಣೆಗೋ ಅಥವಾ ರಾಜಕಾಲುವೆ ರಕ್ಕಸರ ರಕ್ಷಣೆಗೋ..? ಬೆಂಗಳೂರು ಮಹಾಜನತೆಗೆ ಬೆಂಗಳೂರು ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದು ಕೇಂದ್ರ ಸಚಿವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ಡಿಸಿಎಂ ಅವರು ಪಾದಸ್ಪರ್ಶ ಮಾಡಿದ್ದ ರಾಜಕಾಲುವೆ ಪುನೀತವಾಗಬೇಕು! ಪಾಪ.. ಅದೇ ರಾಜಕಾಲುವೆ ಮೇಲೆ ಬೃಹದಾಕಾರವಾಗಿ ಎದ್ದು ನಿಂತಿರುವ 'ಭಾರೀ ಆಸಾಮಿ' ಯೊಬ್ಬರ ಕಟ್ಟಡ ಅವರ ಕಣ್ಣಿಗೆ ಕಾಣಲಿಲ್ಲವೆ?. ರಾಜಾರೋಷವಾಗಿ ರಾಜಕಾಲುವೆಯನ್ನು ಮುಕ್ಕಿ ತಿಂದಿರುವ ಆಸಾಮಿಯ ಬಗ್ಗೆ ಅವರು ಚಕಾರವನ್ನೇ ಎತ್ತಲಿಲ್ಲ!! ಕೊನೆಪಕ್ಷ ಅವರ ಹೆಸರನ್ನೂ ಹೇಳಲಿಲ್ಲ! ಎಂದು ಟಾಂಗ್ ನೀಡಿದರು.
ಧಮ್ಮಿದ್ದರೆ ಐಶಾರಾಮಿ ರಕ್ಕಸರ ವಿರುದ್ಧ ಕ್ರಮ ಜರುಗಿಸಿ
ರಾಜಕಾಲುವೆಗಳ ಮೇಲೆ ಐಷಾರಾಮಿ ಸೌಧಗಳನ್ನು ಕಟ್ಟಿಕೊಂಡು ಕೋಟಿ ಕೋಟಿ ದುಡಿಯುತ್ತಿರುವ ರಾಜಕಾಲುವೆ ರಕ್ಕಸರ ವಿರುದ್ಧ ಕ್ರಮ ಜರುಗಿಸುವ ದಮ್ಮು ತಾಕತ್ತು ನಿಮಗೆ ಇದೆಯಾ ಡಿ.ಕೆ. ಶಿವಕುಮಾರ್ ರವರೇ? ಹೋಗಲಿ, ಅಂಥವರ ವಿರುದ್ಧ ಕ್ರಮ ಜರುಗಿಸಲು ನಿಮಗೆ ಮುಕ್ತ ಸ್ವಾತಂತ್ರ್ಯ, ಅಧಿಕಾರ ನೀಡಿದ್ದೀರಾ? ಒಂದು ವೇಳೆ ನೀಡಿದ್ದರೆ ಆ ಅಕ್ರಮ ಕಟ್ಟಡಗಳು ಇನ್ನೂ ಯಾಕೆ ಹಾಗೆಯೇ ಇವೆ? ನೀವು ಹೇಳಬೇಕಲ್ಲವೇ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನೀವು ಕೂತು ಕೂತು ಎರಡು ವರ್ಷವೇ ಆಯಿತು. ಅದೆಷ್ಟೋ ಬಾರಿ ಸಾಯಿ ಬಡಾವಣೆ ಮುಳುಗಿದ್ದೂ ಆಯಿತು, ತೇಲಿದ್ದೂ ಆಯಿತು! ನಿಮ್ಮಿಂದ ಆಗಲಿ ಅಥವಾ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಆಗಲಿ ಯಾವುದೇ ಪರಿಹಾರ ಸಿಗಲಿಲ್ಲ! ಬಡಾವಣೆಯ ಜನರು ನರಳುತ್ತಿರುವುದು ಮಾತ್ರ ತಪ್ಪಿಲ್ಲ. ಈ ಅಸಡ್ಡೆ ಯಾಕೆ? ಇವರೆಲ್ಲ ತೆರಿಗೆ ಕಟ್ಟುತ್ತಿಲ್ಲವೇ? ಎಂದು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಬೆಂಗಳೂರು ಜನರಿಗೆ ಉತ್ತರಿಸುವಂತೆ ಅವರು ಆಗ್ರಹಿಸಿದ್ದಾರೆ.












Click it and Unblock the Notifications