ಪಾದಚಾರಿ ಮಾರ್ಗ ತೆರವು ಮಾಡದ ಬಿಬಿಎಂಪಿ; ಕೋರ್ಟ್ ತರಾಟೆ
ಬೆಂಗಳೂರು, ಜನವರಿ 31: ಬೆಂಗಳೂರು ಮಹಾನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಕ್ರಮ ಕೈಗೊಳ್ಳದಿದ್ದರೆ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ತೆರವು ಕಾರ್ಯ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ತ್ಯಾಗರಾಜನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸ್ಥಳೀಯ ಪ್ರಶಾಂತ್ ರಾವ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಎಚ್ಚರಿಕೆ ಕೊಟ್ಟಿದೆ.

ಪ್ರಕರಣ ಸಂಬಂಧ ವಿವರಣೆ ನೀಡುವುದಕ್ಕಾಗಿ ಮುಂದಿನ ವಿಚಾರಣೆ ವೇಳೆ ಪಾಲಿಕೆ ಮುಖ್ಯ ಆಯುಕ್ತರು ಖುದ್ದು ಹಾಜರಿರಬೇಕು ಎಂದು ನಿರ್ದೇಶನ ನೀಡಿದೆ.
ಸುಧಾರಣೆಗೆ ಗಮನವಿಲ್ಲ: ಬಿಬಿಎಂಪಿ ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುತ್ತಿದೆ. ಸರಿಯಾದ ರಸ್ತೆ, ಪಾದಚಾರಿ ಮಾರ್ಗಗಳಿಗಾಗಿ ತೆರಿಗೆ ಪಾವತಿಸಲಾಗುತ್ತಿದೆ. ಆದರೆ, ಪಾಲಿಕೆ ಪಾದಚಾರಿ ಮಾರ್ಗಗಳ ಸುಧಾರಣೆಗೆ ಎಂದಿಗೂ ಮುಂದಾಗುತ್ತಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವ ಕುರಿತಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಎಲ್ಲ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ಸಂಬಂಧ ಆದೇಶವನ್ನು ನೀಡಲಾಗುವುದು. ಈ ಪ್ರಕ್ರಿಯೆ ಯಾರ ವಿರುದ್ಧವೂ ಅಲ್ಲ. ಸಾರ್ವಜನಿಕರಿಗೆ ಸಹಕಾರಿಯಾಗುವುದಕ್ಕಾಗಿ ಮಾತ್ರ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿತು.
ಅಲ್ಲದೇ, ಕೆಲವು ಕಡೆ ಪಾದಚಾರಿ ಮಾರ್ಗವನ್ನು ವಾಹನಗಳ ನಿಲುಗಡೆಯನ್ನಾಗಿ ಮಾಡಿಕೊಳ್ಳಲಾಗಿದೆ. ತಕ್ಷಣ ಎಲ್ಲ ಪಾದಚಾರಿ ಮಾರ್ಗಗಳನ್ನು ತೆರವು ಮಾಡಬೇಕು. ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಫೆಬ್ರವರಿ 1ಕ್ಕೆ ಮುಂದೂಡಿತು.
ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿಯೊಂದಿಗೆ ಇತರೆ ಯಾವ ಇಲಾಖೆಗಳು ಭಾಗಿಯಾಗಬಹುದು. ಅವರಿಗೆ ಯಾವ ರೀತಿಯಲ್ಲಿ ನಿರ್ದೇಶನ ನೀಡಬಹುದು ಎಂಬುದರ ಕುರಿತು ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿತು.
ಪ್ರಕರಣದ ಹಿನ್ನೆಲೆ: ಪಾದಚಾರಿ ಮಾರ್ಗದಲ್ಲಿದ್ದ ಬಿಡಾಡಿ ದನಗಳ ದಾಳಿಯಿಂದ ಅರ್ಜಿದಾರರ ತಾಯಿಗೆ ಪೆಟ್ಟಾಗಿದೆ. ಪಾದಚಾರಿ ಮಾರ್ಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿದ ಬಳಿಕ ಅದಕ್ಕೆ ಕಬ್ಬಿಣದ ತಡೆಗೋಡೆ (ಗ್ರಿಲ್)ನ್ನು ಹಾಕಿ ಸಂರಕ್ಷಣೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಅಲ್ಲದೆ, ಅರ್ಜಿದಾರರ ಮನೆ ಬಳಿಯ ಪಾದಚಾರಿ ಮಾರ್ಗಗಳ ಒತ್ತುವರಿ ಸಂಬಂಧಿಸಿದ ಛಾಯಾಚಿತ್ರಗಳೊಂದಿಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಜತೆಗೆ, ವಾಹನ ನಿಲುಗಡೆಗೆ ಇರುವ ಸ್ಥಳದಲ್ಲಿ ವಾಣಿಜ್ಯ ವ್ಯವಹಾರಕ್ಕಾಗಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.
ಅಲ್ಲದೆ, ಪಾದಚಾರಿ ಒತ್ತುವರಿ ಮಾಡಿಕೊಂಡಿರುವ ಭಾಗಗಳನ್ನು ವೀಕ್ಷಣೆ ಮಾಡುವುದಕ್ಕಾಗಿ ಕೋರ್ಟ್ ಕಮೀಷನರ್ ನೇಮಕ ಮಾಡಬೇಕು. ಜತೆಗೆ, ತಾಯಿಗೆ ಆದ ಅಪಘಾತಕ್ಕೆ ಪರಿಹಾರವಾಗಿ 15 ಲಕ್ಷ ರೂ.ಗಳ ಪರಿಹಾರ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.












Click it and Unblock the Notifications