ಕಾಂಗ್ರೆಸ್ ಪಾದಯಾತ್ರೆಗೆ ಹೈಕೋರ್ಟ್ ಕಿಡಿ; ಫ್ರೀಡಂ ಪಾರ್ಕ್ ಬಿಟ್ಟು ಬೇರೆಡೆ ಅವಕಾಶ ನೀಡದಂತೆ ಆದೇಶ
ಬೆಂಗಳೂರು, ಮಾ.3: 'ನಮ್ಮ ಹಕ್ಕು -ನಮ್ಮ ನೀರು' ಶೀರ್ಷಿಕೆಯಡಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆಯಿಂದಾಗಿ ಬೆಂಗಳೂರು ಮಹಾನಗರದಲ್ಲಿ ಉಂಟಾದ ಟ್ರಾಫಿಕ್ ಜಾಮ್ ನಿಂದಾಗಿ ಹೈಕೋರ್ಟ್ ಕಿಡಿ ಕಾರಿದೆ.
ಅಲ್ಲದೆ, ನಗರದ ಫ್ರೀಡಂ ಪಾರ್ಕ್ ಹೊರತು ಪಡಿಸಿ, ಬೇರಾವುದೇ ರಸ್ತೆಗಳಲ್ಲಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲು ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳಿಗೆ ಅವಕಾಶ ಕೊಡದಂತೆ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಆದೇಶ ಮಾಡಿದೆ.
ನಗರದಲ್ಲಿ ಪದೇಪದೆ ನಡೆಯುತ್ತಿರುವ ಪ್ರತಿಭಟನೆ, ಧರಣಿಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ವೇಳೆ ಸಿಜೆ ರಿತುರಾಜ್ ಅವಸ್ಥಿ ಮತ್ತು ನ್ಯಾ. ಎಸ್. ಆರ್. ಕೃಷ್ಣಕುಮಾರ್ ನೇತೃತ್ವದ ನ್ಯಾಯಪೀಠ ಈ ವಿಷಯವನ್ನು ಕೈಗೆತ್ತಿಕೊಂಡಿತು.

ಈ ವಿಚಾರದಲ್ಲಿ ಸರ್ಕಾರಕ್ಕೆ ಹಲವು ಬಾರಿ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಆದರೂ ಬಂದ್ ಪ್ರತಿಭಟನೆ, ಬಂದ್, ಮೆರವಣಿಗೆ, ಧರಣಿಗಳಿಂದ ಸಾಕಷ್ಟು ಸಂಚಾರ ದಟ್ಟಣೆಯುಂಟಾಗುತ್ತಿದೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ನಿರ್ದಿಷ್ಟ ಸ್ಥಳಗಳನ್ನು ಹೊರತುಪಡಿಸಿ, ಬೇರೆ ಎಲ್ಲಾ ಸ್ಥಳಗಳಲ್ಲಿ ಪ್ರತಿಭಟನೆ, ಮೆರವಣಿಗೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತು.
ಜಾಮ್ ನಲ್ಲಿ ಸಿಲುಕಿಕೊಂಡ ನ್ಯಾಯಮೂರ್ತಿ:
ವಿಚಾರಣೆ ವೇಳೆ ನ್ಯಾ. ಎಸ್. ಆರ್. ಕೃಷ್ಣಕುಮಾರ್ ಸ್ವತಃ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಅನುಭವಿಸಿದ ಯಾತೆಯನ್ನು ಬಿಡಿಸಿಟ್ಟರು.
"ಬೆಳಿಗ್ಗೆ ಸುಮಾರು ಒಂದು ಗಂಟೆಯಾದರೂ ನ್ಯಾಯಗ್ರಾಮದಿಂದ ಹೈಕೋರ್ಟ್ ಗೆ ಬರಲಾಗಲಿಲ್ಲ. ಇಂದೂ ಸಹ ಮೇಖ್ರಿ ಸರ್ಕಲ್ ಬಳಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಹೈಕೋರ್ಟ್‌ಗೆ ಬರುವ ಮಾರ್ಗ ಮಧ್ಯೆ ಒಂದು ಗಂಟೆ ಸಿಲುಕಿದ್ದೆ. ವಾಹನ ದಟ್ಟಣೆ ಅತ್ಯಧಿಕವಾಗಿದೆ. ಹೀಗಾದರೆ ಜನರಿಗೆ ಎಷ್ಟು ತೊಂದರೆಯಾಗುತ್ತದೆ, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಎಂದು ನ್ಯಾಯಮೂರ್ತಿ ಹೇಳಿದರು.
ಪ್ರತಿಭಟನೆ ಸ್ವಯಂಪ್ರೇರಿತ ಪಿಐಎಲ್;
2021ರ ಮಾ.2ರಂದು ನಗರದಲ್ಲಿ ನಡೆದ ವಿವಿಧ ಪ್ರತಿಭಟನೆಗಳಿಂದಾಗಿ ವಾಹನ ದಟ್ಟಣೆ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ ವಿಚಾರದ ಬಗ್ಗೆ ಸಿಜೆಗೆ ಪತ್ರ ಬರೆದಿದ್ದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್, ಈ ಸಮಸ್ಯೆಯತ್ತ ಗಮನಹರಿಸುವ ಅಗತ್ಯವಿದೆ ಎಂದು ತಿಳಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ರಸ್ತೆ ಸಾರಿಗೆ ಸಂಸ್ಥೆ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಗರದಲ್ಲಿ ನಡೆಸಲಾಗಿದ್ದ ಪ್ರತಿಭಟನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ಆ ಪತ್ರದ ಆಧಾರದ ಮೇಲೆ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಾರ್ ಜನರಲ್‌ಗೆ ಸಿಜೆ ನೇತೃತ್ವದ ವಿಭಾಗೀಯ ನಿರ್ದೇಶಿಸಿತ್ತು.
ಅ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು, ಬಿಬಿಎಂಪಿ ಆಯುಕ್ತರು ಹಾಗೂ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನೋಟಿಸ್ ಜಾರಿಗೊಳಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚಿಸಿತ್ತು.












Click it and Unblock the Notifications