ಭಾನುವಾರ ಸಂಜೆ ಸುರಿದ ಭಾರಿ ಮಳೆ: ರಸ್ತೆಗಳು ಜಲಾವೃತ ಮತ್ತೆ ಮುಳುಗಿದ ಔಟರ್ ರಿಂಗ್ ರೋಡ್
ಬೆಂಗಳೂರು, ಸೆಪ್ಟೆಂಬರ್ 5: ವೀಕೆಂಡ್ ಖುಷಿಯಲ್ಲಿದ್ದ ಬೆಂಗಳೂರಿಗರಿಗೆ ಭಾನುವಾರ ಸಂಜೆ ಮಳೆ ಆಘಾತ ನೀಡಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಹೊರವರ್ತುಲ ರಸ್ತೆ, ಪ್ರಮುಖ ರಸ್ತೆಗಳು ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಎಡಬಿಡದೆ ಸುರಿಯುತ್ತಿರುವ ಮಳೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಿಸಿದೆ.
ಜಲಾವೃತವಾದ ರಸ್ತೆಗಳಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಭಾರಿ ತೊಂದರೆಯಾದ ಪರಿಣಾಮ ಟ್ರಾಫಿಕ್ ಉಂಟಾಯಿತು, ರಸ್ತೆಗಳು ಜಲಾವೃತವಾದ ಕಾರಣ ಕ್ಯಾಬ್, ಆಟೋ ಚಾಲಕರು ಸೇವೆಯನ್ನು ನಿರಾಕರಿಸಿದರು. ವಾರಾಂತ್ಯದ ಪ್ರವಾಸಕ್ಕೆ ನಗರದಿಂದ ಹೊರಗೆ ಹೋಗಿ ವಾಪಸ್ ಬಂದವರಿಗೆ ಮತ್ತು ನಗರದಲ್ಲೇ ಸುತ್ತಾಡಲು ಹೊರ ಹೋದ ಸಾವಿರಾರು ಜನರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿತು. ಆಡುಗೋಡಿ ಮತ್ತು ಟ್ಯಾನರಿ ರಸ್ತೆ ಸೇರಿದಂತೆ ಕನಿಷ್ಠ ಮೂರು ಸ್ಥಳಗಳಲ್ಲಿ ಮರಗಳು ಬಿದ್ದ ವರದಿಯಾಗಿದೆ.
ಇತ್ತೀಚೆಗಷ್ಟೆ ಮಹದೇವಪುರ ಬಳಿ ಹೊರವರ್ತುಲ ರಸ್ತೆ ಜಲಾವೃತವಾಗಿ ಭಾರಿ ಸಮಸ್ಯೆಯಾದ ಬೆನ್ನಲ್ಲೇ, ಭಾನುವಾರ ರಾತ್ರಿ ಸುರಿದ ಮಳೆಗೆ ಆರ್ ಎಂ ಝಢ್ ಎಕೊಸ್ಪೇಸ್ (RMZ Ecospace) ಟೆಕ್ನಾಲಜಿ ಪಾರ್ಕ್ ಬಳಿ ಔಟರ್ ರಿಂಗ್ ರೋಡ್ ಮತ್ತೊಮ್ಮೆ ಪ್ರವಾಹಕ್ಕೆ ಸಿಲುಕಿದೆ.

ನಗರದ ಬಹುತೇಕ ಭಾಗಗಳಲ್ಲಿ ಭಾರಿ ಮಳೆ
ಮಳೆನೀರಿನ ರಭಸಕ್ಕೆ ಎಷ್ಟು ತೀವ್ರವಾಗಿತ್ತೆಂದರೆ, ಅದು ಕೆಲವು ನಿಲ್ದಾಣಗಳಿಗೆ ನುಗ್ಗಿದ್ದರಿಂದ ಹಲವು ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದವು. ರಾತ್ರಿ 8 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭಗೊಂಡಿದ್ದು, ನಗರದ ಬಹುತೇಕ ಎಲ್ಲ ಭಾಗಗಳಲ್ಲಿ ಮಳೆ ಸುರಿದಿದೆ.

ವೈಟ್‌ಫೀಲ್ಡ್‌ನ ಕೆಲವು ಭಾಗಗಳಲ್ಲಿ ಭಾನುವಾರ ರಾತ್ರಿ 116 ಮಿಮೀ ಮಳೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 7ರ ವರೆಗೆ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications