H1N1: ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ 500 ಮಕ್ಕಳಿಗೆ ಜ್ವರ ಪ್ರಕರಣ: ಸ್ಕೂಲ್‌ಗೆ ಶಾಕ್ ಕೊಟ್ಟ ಜಿಬಿಎ!
H1N1: ಬೆಂಗಳೂರಿನ ಪ್ರಮುಖ ಶಾಲೆಯಲ್ಲಿ 500 ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದೆ ಎನ್ನುವ ಪ್ರಕರಣವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸಿದೆ. ಪ್ರಮುಖ ಶಾಲೆಯೊಂದರಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು 21ಕ್ಕೂ ಹೆಚ್ಚು ಶಾಲಾ ಮಕ್ಕಳಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಲೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಉತ್ತರ ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಪಾಟರಿ ರಸ್ತೆ, ರಿಚರ್ಡ್ಸ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಫ್ಲೂ ಸೋಂಕಿನ ಕುರಿತು ಶಾಲಾ ಆಡಳಿತ ಮಂಡಳಿಯವರು ಸಮರ್ಪಕ ವೈದ್ಯಕೀಯ ದಾಖಲೆಗಳು ಹಾಗೂ ದೃಢೀಕೃತ ಮಾಹಿತಿಯಿಲ್ಲದೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ, ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗಸ್ಟ್ 16ರಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಗಮನಿಸಿದ ತಕ್ಷಣ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನಿಲ್ ಕುಮಾರ್ ಅವರ ನಿರ್ದೇಶನದಂತೆ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ಸಂದರ್ಭದಲ್ಲಿ, ಶಾಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಮಾತ್ರ ಫ್ಲೂ ಸೋಂಕು ದೃಢಪಟ್ಟಿದ್ದು, ಅವರು ಹೊರರೋಗಿಗಳಾಗಿ (OPD) ಚಿಕಿತ್ಸೆ ಪಡೆದಿರುವುದು ತಿಳಿದುಬಂದಿದೆ. ಅವರಲ್ಲಿ ಒಬ್ಬರು ಈಗಾಗಲೇ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, ಶಾಲೆಯ ವಿದ್ಯಾರ್ಥಿಗಳಲ್ಲಿ ಫ್ಲೂ ಸೋಂಕು ದೃಢಪಟ್ಟಿರುವ ಕುರಿತು ಯಾವುದೇ ವೈದ್ಯಕೀಯ ದಾಖಲೆಗಳು ಅಥವಾ ದೃಢೀಕೃತ ವರದಿಗಳು ಆರೋಗ್ಯ ಇಲಾಖೆಗೆ ಲಭ್ಯವಾಗಿಲ್ಲ.
ದೃಢೀಕರಿಸದ ಮಾಹಿತಿಯ ಪ್ರಸಾರಕ್ಕೆ ಶಾಲೆಗೆ ನೋಟಿಸ್
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಅನಗತ್ಯ ಆತಂಕ, ಭಯ ಮತ್ತು ಗೊಂದಲ ಉಂಟಾಗದಂತೆ, ಫ್ಲೂ ಸೋಂಕಿನ ಕುರಿತು ಜವಾಬ್ದಾರಿಯುತವಾಗಿ ಹಾಗೂ ದೃಢೀಕೃತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.
ಸಾಕಷ್ಟು ವೈದ್ಯಕೀಯ ಸಾಕ್ಷ್ಯಾಧಾರಗಳಿಲ್ಲದೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಆತಂಕ ಮತ್ತು ಭೀತಿಯ ವಾತಾವರಣ ಸೃಷ್ಟಿಸುವುದು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದ ಅನ್ವಯಿಸುವ ಕಾನೂನು ಮತ್ತು ನಿಯಮಗಳಡಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಕಾನೂನು provisions ಅಡಿಯಲ್ಲಿ ಶಾಲೆಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಶಾಲೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ
ಸಾರ್ವಜನಿಕ ಆರೋಗ್ಯ ಇಲಾಖೆಯ ವತಿಯಿಂದ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಫ್ಲೂ ಸೋಂಕಿನ ಕುರಿತು ಮಾಡಬೇಕಾದವು ಮತ್ತು ಮಾಡಬಾರದವು (Dos and Don'ts) ಕುರಿತು ಅರಿವು ಮೂಡಿಸಲಾಯಿತು. ಅನಗತ್ಯ ಭಯ ಮತ್ತು ಆತಂಕಕ್ಕೆ ಒಳಗಾಗದೆ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಆರೋಗ್ಯ ಇಲಾಖೆಯ ಮಾರ್ಗದರ್ಶನವನ್ನು ಪಾಲಿಸುವಂತೆ ತಿಳಿಸಲಾಯಿತು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ 15 ದಿನಗಳ ಕಾಲ ಆರೋಗ್ಯ ಕಣ್ಗಾವಲು
ಶಾಲೆಯಲ್ಲಿ ಮುಂದಿನ 15 ದಿನಗಳ ಕಾಲ ಸಕ್ರಿಯ ಆರೋಗ್ಯ ಕಣ್ಗಾವಲು (Active Surveillance) ಮುಂದುವರಿಸಲಾಗುವುದು. ಫ್ಲೂ ಸೋಂಕಿನ ನಿಯಂತ್ರಣಕ್ಕಾಗಿ ಪ್ರಚಲಿತ Standard Operating Procedures (SOPs) ಅನುಸಾರ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿಯೂ ಫ್ಲೂ ಸೋಂಕಿನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ Dos and Don'ts ಹಾಗೂ ಅನುಸರಿಸಬೇಕಾದ SOPs ಕುರಿತು ಅರಿವು ಮೂಡಿಸಲಾಗುತ್ತಿದೆ.
ಸಾರ್ವಜನಿಕರು ಯಾವುದೇ ದೃಢೀಕರಣವಿಲ್ಲದ ಸುದ್ದಿ ಅಥವಾ ವದಂತಿಗಳಿಗೆ ಕಿವಿಗೊಡದೆ, ಆರೋಗ್ಯ ಇಲಾಖೆಯಿಂದ ನೀಡಲಾಗುವ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
