ಬಿಜೆಪಿ ಸರ್ಕಾರ ಬಂದರೂ ಯಡಿಯೂರಪ್ಪ ಸಿಎಂ ಆಗಲ್ಲ: ರೇವಣ್ಣ
ಬೆಂಗಳೂರು, ಸೆಪ್ಟೆಂಬರ್ 17: ಬಿಜೆಪಿ ಮುಖಂಡರು ರಾಜ್ಯ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಬಿಜೆಪಯ ಅನೇಕ ಶಾಸಕರು ನನ್ನ ಬಳಿ ಬಂದು ಸರ್ಕಾರ ಬಿದ್ದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿರುವುದಾಗಿ ಸಚಿವ ಎಚ್‌ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ, ಒಂದು ವೇಳೆ ಸರ್ಕಾರ ಬಿದ್ದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಕಷ್ಟ ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ, ಹಾಗೆಂದು ನಾನು ಹೇಳುತ್ತಿಲ್ಲ ಇದು ಬಿಜೆಪಿ ಶಾಸಕರ ಅಭಿಪ್ರಾಯ ಎಂದರು.
ಸರ್ಕಾರ ಪತನವಾದರೆ ರಾಜ್ಯಪಾಲರ ಅಧಿಕಾರ ಬರುತ್ತದೆ ಬಳಿಕ ಬೇರೆ ರಾಜ್ಯಗಳ ಜತೆ ಚುನಾವಣೆ ನಡೆಯಲಿದೆ ಎಂದು ಶಾಸಕರೇ ಹೇಳಿದ್ದಾರೆ, ಸಮಯ ಬಂದಾಗ ಅವರ ಹೆಸರು ಬಹಿರಂಗ ಪಡಿಸುತ್ತೇನೆ, ಬಿಜೆಪಿಯವರು ಹೇಳುವ ಹಾಗೆ ಸರ್ಕಾರ ಬಿದ್ದುಹೋಗುವುದಿಲ್ಲ, ಈ ಸರ್ಕಾರ ಪೂರ್ಣಾವಧಿ ಪೂರೈಸಲಿದೆ. ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಸರ್ಕಾರ ಬಿದ್ದುಹೋಗಲಿದೆ ಎಂದರೆ ಅದನ್ನು ಹಿಡಿದುಕೊಳ್ಳಲು ಆಗುತ್ತಾ, ಬಿಜೆಪಿಯವರು ಈಗಲೇ ಬರೆದಿಟ್ಟುಕೊಳ್ಳಲಿ ಸರ್ಕಾರಕ್ಕೆ ಏನೂ ಆಗುವುದಿಲ್ಲ, ಬಿಜೆಪಿ ಕೈಗೆ ಅಧಿಕಾರವೂ ಸಿಗುವುದಿಲ್ಲ, ಈ ಬಗ್ಗೆ ನಾನು ಭವಿಷ್ಯ ಹೇಳುತ್ತೇನೆ ಎಂದು ನುಡಿದರು.












Click it and Unblock the Notifications