GBA: ಏಕಬಳಕೆ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಿಬಿಎ ದಂಡಾಸ್ತ್ರ: ನಗರ ಸಮಸ್ಯೆಗಳ ಖುದ್ದು ಪರಿಶೀಲನೆ
ಬೆಂಗಳೂರು, ಸೆಪ್ಟಂಬರ್ 20: ಗ್ರೇಟರ್ ಬೆಂಗಳೂರು ಪಾಧಿಕಾರ (ಜಿಬಿಎ) ಆಯುಕ್ತರ ಸೂಚನೆಯಂತೆ ಉತ್ತರ ನಗರ ಪಾಲಿಕೆಯಲ್ಲಿ ಪ್ರತಿದಿನ ಘನತ್ಯಾಜ್ಯ ವಿಭಾಗದ ಅಭಿಯಂತರರು, ಆರೋಗ್ಯ ನಿರೀಕ್ಷಕರು ಮತ್ತು ಮಾರ್ಷಲ್ ತಂಡದ ಸಹಯೋಗದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ತಪಾಸಣಾ ಕಾರ್ಯ ಮುಂದುವರಿಸಿದ್ದಾರೆ. ಆಯುಕ್ತರು ನಗರದ ವಿವಿಧ ರಸ್ತೆಗುಂಡಿ, ಕಸದ ಸಮಸ್ಯೆಗಳನ್ನು ಖುದ್ದಿ ಪರಿಶೀಲಿಸಿದರು.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಹಾಗೂ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಸಿ. ಶ್ರೀನಿವಾಸ್ ರವರ ನೇತೃತ್ವದಲ್ಲಿ, ಪೆರಿಯಾರ್ ನಗರ ವೃತ್ತದಿಂದ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜಂಟಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಯಲಹಂಕ ನ್ಯೂ ಟೌನ್ ನಲ್ಲಿರುವ ಪ್ಲಾಸ್ಟಿಕ್ ಶೇಖರಣಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡವು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ನಡೆಸಿದೆ. ಒಂದೇ ಪ್ರಕರಣದಿಂದ 1,00,000/- ರೂಪಾಯಿ ದಂಡದ ಮೊತ್ತವನ್ನು ವಸೂಲಿ ಮಾಡಿ ಸುಮಾರು 1200 ಕೆ.ಜಿ ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದರು. ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿದರು.
ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ
ನಂತರ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಸಂಬಂಧಿಸಿದ ಅಭಿಯಂತರರೊಂದಿಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ವೀಕ್ಷಿಸಿದರು. ಅಮೃತ್‌ನಗರ ಮುಖ್ಯರಸ್ತೆ, ಅಮೃತಹಳ್ಳಿ ಪೊಲೀಸ್ ಠಾಣೆ ಎದುರುಗಡೆಯಲ್ಲಿ ಇಕೋ-ಫಿಕ್ಸ್ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಪರಿಶೀಲನೆ ವೇಳೆ ಆಯುಕ್ತರು ಮಳೆಗಾಲದ ಅವಧಿಯಲ್ಲಿ ಸಣ್ಣ ಗುಂಡಿಗಳನ್ನು ಭರ್ತಿ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 500 ಇಕೋ-ಫಿಕ್ಸ್ ಬ್ಯಾಗ್‌ಗಳನ್ನು ಖರೀದಿಸಲು ನಿರ್ದೇಶನ ನೀಡಿದರು.
ಯಲಹಂಕ ವಿಭಾಗದ ಕೋಗಿಲು ಸರ್ಕಲ್ ಬಳಿ ಹಾಟ್ ಮಿಕ್ಸ್ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ವೀಕ್ಷಿಸಿದ ಆಯುಕ್ತರು ತ್ವರಿತವಾಗಿ ಗುಂಡಿ ಗಳನ್ನು ಮುಚ್ಚುವಂತೆ ಮತ್ತು ಉತ್ತಮ ಗುಣಮಟ್ಟ ಕಾಪಾಡಿಕೊಳ್ಳೂವಂತೆ ಹೇಳಿದರು. ರೋಷನ್ ನಗರ, ಡಿ.ಜೆ.ಹಳ್ಳಿಯಲ್ಲಿ ಬೃಹತ್ ನೀರುಗಾಲುವೆಯ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಕಂಡು ಬಂದಿದೆ. ಕಾಮಗಾರಿ ತ್ವರಿತವಾಗಿ ಆರಂಭಿಸಲು ಹಾಗೂ ತಕ್ಷಣವೇ ಹೂಳೆತ್ತುವ ಕಾರ್ಯ ಆರಂಭಿಸಬೇಕೆಂದು ಹೇಳಿದರು.
ನಗರದ ಸಗಾಯಪುರಂನಲ್ಲಿ ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನೆಲೆ, ಜಲಮಂಡಳಿಯ ಅಧಿಕಾರಿಗಳಿಗೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ ಮತ್ತು ಸ್ಥಳೀಯರಿಗೆ ಶೀಘ್ರದಲ್ಲಿ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications