Ricky Kej: ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಮನೆಗೆ ನುಗ್ಗಿ ದರೋಡೆ, ಬೆಚ್ಚಿಬಿದ್ದ ಬೆಂಗಳೂರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಅಟ್ಟಹಾಸ ಮಿತಿ ಮೀರಿದೆ. ಕಳ್ಳರ ಮೇಲೆ ನಿಗಾ ಇಡಲು ಈಗೆಲ್ಲ ಮನೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೂ ಖದೀಮರು ರಾಜಾರೋಷವಾಗಿ ಕಳ್ಳತನ ಮುಂದುವರಿಸಿದ್ದಾರೆ. ಇನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ನಿವಾಸಕ್ಕೂ ಕಳ್ಳರು ಕಾಲಿಟ್ಟಿದ್ದಾರೆ. ಇದರ ಸಿಸಿಟಿವಿ ದೃಶ್ಯಾವಳಿಗಳನ್ನು ರಿಕಿ ಕೇಜ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕ್ರಮಕ್ಕಾಗಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ಕೃತ್ಯ ಎಸಗಿರುವುದು ಡೆಲಿವರಿ ಬಾಯ್ ಎಂದು ಆರೋಪಿಸಲಾಗಿದೆ.
ಕಳ್ಳರ ಬಗ್ಗೆ ಸುದೀರ್ಘವಾಗಿ ಮಾಹಿತಿ ಹಂಚಿಕೊಂಡಿರುವ ರಿಕಿ ಕೇಜ್, ನನ್ನ ಮನೆ ದರೋಡೆ ಮಾಡಲಾಯಿತು ಎಂದು ಜೊಮ್ಯಾಟೋ ಅನ್ನು ಟ್ಯಾಗ್ ಮಾಡಿದ್ದಾರೆ. ನಿಮ್ಮ ಚಾಲಕರಲ್ಲಿ ಒಬ್ಬರು ಗುರುವಾರ ನನ್ನ ಮನೆಗೆ ನುಗ್ಗಿ, ನಮ್ಮ ಸಂಪ್-ಕವರ್ ಅನ್ನು ಕದ್ದಿದ್ದಾರೆಂದು ತೋರುತ್ತಿದೆ. ಇದು ಸಂಜೆ 6 ಗಂಟೆಗೆ ನಡೆದಿದೆ. ಅವರು ತುಂಬಾ ಧೈರ್ಯಶಾಲಿ ಇದ್ದಾರೆ. ಇದು ಬಹುಶಃ ಅವರ ಮೊದಲ ಬಾರಿ ಅಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅವರು ಕೇವಲ 15 ನಿಮಿಷಗಳ ಮೊದಲು ಪರಿಶೀಲನೆಗಾಗಿ ಬಂದು, ನಂತರ ಅತಿಕ್ರಮಣ ಮಾಡಿ ಈ ಅಪರಾಧ ಮಾಡಿದ್ದಾರೆ. ನೀವು ಸಿಸಿಟಿವಿ ದೃಶ್ಯಾವಳಿಗಳನ್ನು ಎರಡು ನೋಡಬಹುದು. ಅವರ ಮುಖದ ಸ್ಕ್ರೀನ್‌ಶಾಟ್‌ಗಳು ಮತ್ತು ನಂಬರ್ ಪ್ಲೇಟ್ ಸಹ ಹಂಚಿಕೊಂಡಿದ್ದೇನೆ. ಕೆಂಪು ಹೋಂಡಾ ಆಕ್ಟಿವಾದಲ್ಲಿ ಸಂಖ್ಯೆ KA03HY8751 ಎಂದು ತೋರುತ್ತದೆ. ಈ ವ್ಯಕ್ತಿ ಯಾರು ಎಂಬುದರ ಕುರಿತು ನಿಮಗೆ ಅಥವಾ ಬೆಂಗಳೂರು ಪೊಲೀಸರು ಸಹಾಯ ನೀಡಬಹುದೇ? ಜನರೇ, ಜಾಗರೂಕರಾಗಿರಿ. ಇದು ನಿಮಗೂ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.
ಮೊದಲಿಗೆ ಒಂದು ಸ್ಕೂಟಿಯಲ್ಲಿ ಬಂದಿರುವ ಕಳ್ಳರು, ಜೊಮಾಟೋ ಡೆಲಿವರಿ ಏಜೆಂಟರು ಬಳಸುವ ಬ್ಯಾಗ್ ಅನ್ನು ತಮ್ಮ ಸ್ಕೂಟರ್‌ನಲ್ಲಿಟ್ಟುಕೊಂಡಿರುವುದು ವಿಡಿಯೋದಲ್ಲಿದೆ. ಹಿಂಬದಿಯಲ್ಲಿ ಕುಳಿತಿದ್ದ ಯುವಕ ಮನೆಯ ಗೇಟ್ ತೆರೆದು ಒಳ ಪ್ರವೇಶಿಸಿದ್ದಾನೆ. ಬಳಿಕ ಅಲ್ಲಿ ಸಿಸಿಟಿವಿ ಇದ್ದರೂ ಲೆಕ್ಕಿಸದೆ ಸಂಪ್‌ಗೆ ಮುಚ್ಚಿದ್ದ ಕಬ್ಬಿಣದ ಬಾಗಿಲನ್ನು ರಾಜಾರೋಷವಾಗಿ ಕದ್ದೊಯ್ದಿದ್ದಾನೆ. ಬಳಿಕ ಸ್ಕೂಟರ್‌ನಲ್ಲಿ ಕದ್ದ ಬಾಗಿಲನ್ನು ಇಟ್ಟುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ರಿಕಿ ಕೇಜ್ ಅವರು ತಮ್ಮ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳರ ಕೈಚಳಕ ಗೊತ್ತಾಗಿದೆ. ಅಲ್ಲದೆ ಕಳ್ಳನ ಫೋಟೊ ಹಾಗೂ ಅವರು ಬಂದಿದ್ದ ಸ್ಕೂಟರ್ ಫೋಟೋಗಳನ್ನು ಹಂಚಿಕೊಂಡು ಅವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸೆಲೆಬ್ರಿಟಿಗಳ ಮನೆಯಲ್ಲೇ ಈ ರೀತಿ ರಾಜಾರೋಷವಾಗಿ ದರೋಡೆ ಆಗುವುದಾದರೆ ಬೆಂಗಳೂರಿನಲ್ಲಿ ಪೊಲೀಸರು ಹಾಗೂ ಕಾನೂನಿನ ಭಯ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತದೆ. ಇನ್ನು ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.












Click it and Unblock the Notifications